Theft: ಕದ್ದ ಹಣವನ್ನು ಅಗತ್ಯಕ್ಕೆ ಇಲ್ಲ ಮೋಜಿಗೆ ಖರ್ಚು ಮಾಡುವ ಕಳ್ಳರೇ ಹೆಚ್ಚು. ಆದ್ರೆ ಇಲ್ಲೊಂದು ದಂಪತಿ ಬುದ್ಧಿವಂತಿಕೆಯಿಂದ ಹಣ ಕದ್ದಿದ್ದಲ್ಲದೆ ಅದನ್ನು ಜಾಣ್ಮೆಯಿಂದ ಹೂಡಿಕೆ ಮಾಡಿ, ಮನೆ ಮಾಲೀಕನಿಗೆ ಶಾಕ್ ನೀಡಿದ್ದಾರೆ. 

 ಮನೆಯಲ್ಲಿ ಎರಡು – ಮೂರು ವರ್ಷಗಳಿಂದ ಪ್ರಮಾಣಿಕವಾಗಿ ಕೆಲ್ಸ ಮಾಡ್ತಿರೋರನ್ನು ನಾವು ಸಂಪೂರ್ಣ ನಂಬಿರ್ತೇವೆ. ಅವರು ಮನೆಯವರಾಗ್ತಾರೆ. ಅವರ ಮೇಲೆ ವಿಶ್ವಾಸ ಹೆಚ್ಚಾಗುತ್ತೆ. ಮನೆಯ ಪ್ರತಿಯೊಂದು ಕೋಣೆಗೂ ಅವರು ಪ್ರವೇಶ ಪಡೀತಾರೆ. ಮನೆಯ ಆಗುಹೋಗುಗಳೆಲ್ಲ ಅವರಿಗೆ ತಿಳಿಯುತ್ತೆ. ಮನೆ ಕೆಲ್ಸ ಮಾಡುವವರನ್ನು ಸಂಪೂರ್ಣ ನಂಬಿ ಈಗ ಮನೆ ಮಾಲೀಕನೊಬ್ಬ ಮೋಸ ಹೋಗಿದ್ದಾನೆ. ಮನೆ ಮಾಲೀಕನ ನಂಬಿಕೆಗೆ ಕೊಡಲಿಪೆಟ್ಟು ಬಿದ್ದಿದೆ. ಲಕ್ನೋದ ನಿಶಾತ್ಗಂಜ್ ಪ್ರದೇಶದಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಆಸಕ್ತಿಕರ ಸುದ್ದಿಯೊಂದು ಹೊರ ಬಿದ್ದಿದೆ. ಸಾಮಾನ್ಯವಾಗಿ ಕಳ್ಳರು, ಹಣ – ಒಡವೆ ಕದ್ದು ಪರಾರಿಯಾಗ್ತಾರೆ. ಇಲ್ಲವೆ ಆ ಹಣವನ್ನು ಖರ್ಚು ಮಾಡ್ತಾರೆ. ಆದ್ರೆ ಈ ಪ್ರಕರಣ ಸಂಪೂರ್ಣ ಭಿನ್ನವಾಗಿದೆ. ಇಲ್ಲಿ ಹಣ – ಒಡವೆ ಕದ್ದ ಕಳ್ಳ ಮನೆಯಿಂದ ಓಡಿ ಹೋಗ್ಲಿಲ್ಲ. ಹಾಗೇ ಆ ಹಣವನ್ನು ವ್ಯರ್ಥ ಹಾಳು ಕೂಡ ಮಾಡ್ಲಿಲ್ಲ. ಹಣವನ್ನು ಸುರಕ್ಷಿತವಾಗಿಟ್ಟುಕೊಂಡಿದ್ದಲ್ಲದೆ ಅದನ್ನು ಸುರಕ್ಷಿತ ಪ್ರದೇಶದಲ್ಲಿ ಹೂಡಿಕೆ ಮಾಡಿದ್ದಾನೆ.

ಕಳ್ಳತನ ಮಾಡಿದ ಹಣ ಏನಾಯ್ತು? : ನಿಶಾತ್ಗಂಜ್ ಪ್ರದೇಶದ ವ್ಯಾಪಾರಿ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕಳ್ಳ ಹಾಗೂ ಆತನ ಪತ್ನಿ ಬುದ್ಧಿವಂತಿಕೆಯಿಂದ ಕಳ್ಳತನ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಬಂಗಾರವನ್ನು ಕದ್ದಿದ್ದಾರೆ. ಕದ್ದ ಹಣದಿಂದ ಆರೋಪಿ ವಿಮಾ ಪಾಲಿಸಿ ಖರೀದಿ ಮಾಡಿದ್ದಾನೆ. ಎಸ್ ಐಪಿಯಲ್ಲಿ ಹಣ ಹೂಡಿದ್ದಾನೆ. ಎಫ್ ಡಿ ಇಟ್ಟಿದ್ದಾನೆ. ಇಷ್ಟೇ ಅಲ್ಲ 10 ಲಕ್ಷ ರೂಪಾಯಿ ಮೌಲ್ಯದ ಜಮೀನು ಖರೀದಿ ಮಾಡಿದ್ದಾನೆ.

ಸುಮಾರು ಐದಾರು ವರ್ಷಗಳಿಂದ ಕೆಲಸದಾಳು ತನ್ನ ಪತ್ನಿ ಜೊತೆ ವ್ಯಾಪಾರಿ ಮನೆಯಲ್ಲಿ ಕೆಲ್ಸ ಮಾಡ್ತಿದ್ದ. ಮನೆಯವರ ವಿಶ್ವಾಸವನ್ನು ಅವರು ಗಳಿಸಿದ್ದರು. ಹಾಗಾಗಿ ಅವರನ್ನು ಮನೆಯವರಂತೆ ನೋಡಿಕೊಳ್ಳಲಾಗ್ತಿತ್ತು. ಆದ್ರೆ ವ್ಯಾಪಾರಿ ಕುಟುಂಬಕ್ಕೆ ಇವರು ಮೋಸ ಮಾಡಿದ್ದಾರೆ. ಮನೆಯಿಂದ ಅಷ್ಟಷ್ಟೇ ಹಣ, ಒಡವೆಯನ್ನು ಕಳ್ಳತನ ಮಾಡಿದ್ದಾರೆ. ಕಪಾಟಿನಲ್ಲಾಗ್ತಿದ್ದ ಬದಲಾವಣೆ ನೋಡಿ ವ್ಯಾಪಾರಿ ಕುಟುಂಬಕ್ಕೆ ಅನುಮಾನ ಬಂದಿದೆ. ಕೆಲಸದಾಳುವನ್ನು ಪ್ರಶ್ನೆ ಮಾಡಿದ್ದಾರೆ. ಗದರಿಸುತ್ತಿದ್ದಂತೆ ಕೆಲಸದಾಳು ಎನ್ನ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಮನೆಯಿಂದ ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿದ್ದು, ಅದನ್ನು ಒಳ್ಳೆ ಜಾಗದಲ್ಲಿ ಹೂಡಿಕೆ ಮಾಡಿದ್ದೇನೆ ಎಂದಿದ್ದಾನೆ.

ಮೂಲತಃ ಬಿಹಾರ್ ಮೂಲದ ಈ ದಂಪತಿ, ತಮ್ಮ ಊರಿನ ಬ್ಯಾಂಕ್ ಸಿಬ್ಬಂದಿ ಸಹಾಯ ಪಡೆದಿದೆ. ಬ್ಯಾಂಕ್ ಸಿಬ್ಬಂದಿ ಸಲಹೆ ಮೇರೆಗೆ ಎಸ್ ಐಪಿ, ಎಫ್ಡಿಯಲ್ಲಿ ಹೂಡಿಕೆ ಮಾಡಿರೋದಾಗಿ ಆರೋಪಿ ಹೇಳಿದ್ದಾನೆ. ಹಣವನ್ನು ವಾಪಸ್ ನೀಡುವ ಭರವಸೆ ಕೂಡ ನೀಡಿದ್ದಾನೆ. ಆದ್ರೆ ಅಲ್ಲಿಂದ ತಪ್ಪಿಸಿಕೊಂಡ ದಂಪತಿ ಈಗ ಕಾಣ್ತಿಲ್ಲ. ವ್ಯಾಪಾರಿ ತನ್ನೆಲ್ಲ ಪ್ರಯತ್ನದ ನಂತ್ರ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿ ಪತ್ತೆಗೆ ಮುಂದಾಗಿದ್ದಾರೆ. ದಂಪತಿಗೆ ಸಹಾಯ ಮಾಡಿದ ಬ್ಯಾಂಕ್ ಸಿಬ್ಬಂದಿ ಬಗ್ಗೆಯೂ ಮಾಹಿತಿ ಕಲೆ ಹಾಕ್ತಿದ್ದಾರೆ. ದಂಪತಿ ಎಲ್ಲೆಲ್ಲಿ ಹಣ ಹೂಡಿಕೆ ಮಾಡಿದ್ದಾರೆ, ಎಷ್ಟು ಹೂಡಿಕೆ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಹೂಡಿಕೆ ಪತ್ರಗಳು, ಬ್ಯಾಂಕ್ ಖಾತೆಗಳು ಮತ್ತು ವಹಿವಾಟುಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಶೀಘ್ರವೇ ದಂಪತಿಯನ್ನು ಬಂಧಿಸಿ ಜೈಲಿಗಟ್ಟುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಪೊಲೀಸ್ ಪ್ರಕಾರ, ವ್ಯಾಪಾರಿ ಕುಟುಂಬಕ್ಕೆ ಚಳ್ಳೆ ಹಣ್ಣು ತಿನ್ನಿಸಿದ ಕೆಲಸದಾಳು, ಕದ್ದ ಹಣವನ್ನು ತನ್ನ ಪತ್ನಿ ಹೆಸರಿಗೆ ಟ್ರಾನ್ಸ್ಫರ್ ಮಾಡಿದ್ದಾನೆ.