shocking news : ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪತ್ನಿಯ ಸೌಂದರ್ಯ ಮುಂದೆ ಇಟ್ಕೊಂಡು ಪತಿ ಚಿತ್ರಹಿಂಸೆ ನೀಡಿದ್ದಾನೆ. ಇದ್ರಿಂದ ಬೇಸತ್ತ ಪತ್ನಿ ಪೊಲೀಸ್ ಮೊರೆ ಹೋಗಿದ್ದಾಳೆ. 

ಮನಸ್ಸಿಗಿಂತ ಸೌಂದರ್ಯಕ್ಕೆ ಬೆಲೆ ಕೊಡುವ ಜನರೇ ಹೆಚ್ಚು. ಪತ್ನಿ ಸುಂದರವಾಗಿರ್ಬೇಕು, ಹೀರೋಯಿನ್ ತರ ಕಾಣ್ಬೇಕು ಅಂತ ಕೆಲ ಹುಡುಗ್ರ ಕನಸು ಕಾಣ್ತಾರೆ. ಇದು ಬರೀ ಕನಸಾಗಿದ್ದು, ಮದುವೆ (marriage)ಯಾದ್ಮೇಲೆ ವಾಸ್ತವ ಅರಿತು ಬದುಕಿದ್ರೆ ಜೀವನ ಸುಖಕರವಾಗಿರುತ್ತೆ. ಆದ್ರೆ ಹಗಲುಗನಸಿನಲ್ಲೇ ಪತ್ನಿಗೆ ಚಿತ್ರಹಿಂಸೆ ನೀಡಿದ್ರೆ?. ನಟಿ ನೋರಾ ಫತೇಹಿ ಸೌಂದರ್ಯಕ್ಕೆ ಮರುಳಾಗಿರುವ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಪ್ರತಿ ದಿನ ಹಿಂಸೆ ನೀಡಿದ ಘಟನೆ ನಡೆದಿದೆ. ಅವರಂತೆ ಫಿಗರ್ ಮೆಂಟೇನ್ ಮಾಡ್ಬೇಕು ಅಂತ ಒತ್ತಡ ಹೇರಿದ್ದಲ್ದೆ, ಪ್ರತಿ ದಿನ ಮೂರು ಗಂಟೆಗಳ ಕಾಲ ಜಿಮ್ ನಲ್ಲಿ ವರ್ಕ್ ಔಟ್ ಮಾಡಿಸಿದ್ದಾನೆ. ಇದ್ರಿಂದ ಬೇಸತ್ತ ಮಹಿಳೆ ಪೊಲೀಸ್ ಮೊರೆ ಹೋಗಿದ್ದಾಳೆ. ಘಟನೆ ನಡೆದಿದ್ದು ಉತ್ತರ ಪ್ರದೇಶದಲ್ಲಿ.

ಗಾಜಿಯಾಬಾದ್ ನಿವಾಸಿ ಮಹಿಳೆ, ಪೊಲೀಸ್ ಮುಂದೆ ಕಣ್ಣೀರಿಟ್ಟಿದ್ದಾಳೆ. ಗಂಡ ಹಾಗೂ ಅತ್ತೆ ನನಗೆ ದೈಹಿಕ ಹಿಂಸೆ ನೀಡ್ತಾರೆಂದು ಆಕೆ ಆರೋಪ ಮಾಡಿದ್ದಾಳೆ. ನನ್ನ ದೈಹಿಕ ನೋಟವನ್ನು ಪ್ರತಿ ದಿನ ಅವರು ನಿಂದಿಸಿದ್ದಲ್ಲದೆ ಗರ್ಭಪಾತಕ್ಕೆ ಒತ್ತಾಯ ಮಾಡ್ತಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಾಳೆ.

ಈ ವರ್ಷ ಮಾರ್ಚ್ ನಲ್ಲಿ ಮುರಾದ್ ನಗರದ ಯುವತಿ ಮೀರತ್ ನ ದೈಹಿಕ ಶಿಕ್ಷಕರನ್ನು ಮದುವೆ ಆಗಿದ್ಲು. ಮದುವೆಯಲ್ಲಿ ಆಕೆ ತಂದೆ 24 ಲಕ್ಷ ರೂಪಾಯಿ ಮೌಲ್ಯದ ಮಹೀಂದ್ರಾ ಸ್ಕಾರ್ಪಿಯೋ, ಲಕ್ಷಾಂತರ ರೂಪಾಯಿ ನಗದು ಮತ್ತು ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದರು. ಮದುವೆಗೆ 75 ಲಕ್ಷ ರೂಪಾಯಿ ವೆಚ್ಚ ಮಾಡಿದ್ರು. ಇಷ್ಟು ಅದ್ಧೂರಿಯಾಗಿ ಮದುವೆ ಮಾಡಿದ್ರೂ ಹುಡುಗನ ಮನೆಯವರು ತೃಪ್ತರಾಗಿರಲಿಲ್ಲ. ಪ್ರತಿ ದಿನ ಹಿಂಸೆ ನೀಡ್ತಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಾಳೆ.

ಮೊದಲ ರಾತ್ರಿ ಗಂಡ ನನ್ನ ಜೊತೆ ಮಲಗಲಿಲ್ಲ. ಒಂದೊಂದೇ ನೆಪ ಹೇಳಿ ಪಾಲಕರ ಜೊತೆ ಮಲಗಿದ್ದ ಅಂತ ಮಹಿಳೆ ಹೇಳಿದ್ದಾಳೆ. ಮದುವೆ ಆದಾಗಿಂದಲೂ ಆತನ ವರ್ತನೆ ಚೆನ್ನಾಗಿರಲಿಲ್ಲ. ನನ್ನ ಎತ್ತರ ನಾರ್ಮಲ್ ಆಗಿದೆ, ನೋಡೋಕೆ ಹೇಳುವಷ್ಟು ಸುಂದರವಾಗಿಲ್ಲ. ಇದನ್ನೇ ಗಂಡ ನಿಂದನೆಗೆ ಬಳಸಿಕೊಂಡಿದ್ದಾನೆ. ಪ್ರತಿ ದಿನ ನನ್ನ ಸೌಂದರ್ಯವನ್ನು ಖಂಡಿಸುತ್ತಿದ್ದಾನೆ. ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಡ್ತಿದ್ದಾನೆ. ನನ್ನನ್ನು ಮದುವೆ ಆದಾಗಿನಿಂದ ಆತ ಖುಷಿಯಾಗಿಲ್ವಂತೆ. ನೋರಾ ಫತೇಹಿಯಂತ ಸುಂದರ ಹುಡುಗಿ ನನಗೆ ಬೇಕಿತ್ತು. ಅವಳಂತೆ ನೀನು ಫಿಗರ್ ಮೆಂಟೇನ್ ಮಾಡು ಅಂತ ಪತಿ ಹಿಂಸೆ ನೀಡ್ತಿದ್ದಾನೆಂದು ಮಹಿಳೆ ಆರೋಪ ಮಾಡಿದ್ದಾಳೆ.

ನೋರಾ ಫತೇಹಿಯಂತೆ ಸೌಂದರ್ಯ ಪಡೆಯಲು ಪತ್ನಿಯನ್ನು ಜಿಮ್ ಗೆ ಕಳುಹಿಸುತ್ತಿದ್ದಂತೆ ಪತಿ. ಸತತ ಮೂರು ಗಂಟೆ ಆಕೆ ಜಿಮ್ ನಲ್ಲಿ ಬೆವರಿಳಿಸಬೇಕಾಗಿತ್ತಂತೆ. ಒಂದು ದಿನ ಕಡಿಮೆ ಸಮಯ ವ್ಯಾಯಾಮ ಮಾಡಿದ್ರೆ ಊಟ ಕೊಡ್ತಿರಲಿಲ್ಲವಂತೆ. ಹುಡುಗಿ ಜೊತೆ ಚಾಟ್ ಮಾಡ್ತಿದ್ದ ಗಂಡನ ವರ್ತನೆ ಪ್ರಶ್ನಿಸಿದ್ದಕ್ಕೆ ಥಳಿಸಿದ್ದನಂತೆ. ಇಷ್ಟೇ ಅಲ್ಲ ಗರ್ಭಪಾತಕ್ಕೆ ಪತಿ ಒತ್ತಡ ಹೇರಿದ್ದ ಎಂದು ಪತ್ನಿ ಆರೋಪ ಮಾಡಿದ್ದಾಳೆ. ಒಂದು ದಿನ ಆಕೆಗೆ ಗರ್ಭಪಾತದ ಮಾತ್ರೆಯನ್ನು ನೀಡಿದ್ದ ಪತಿ. ಅದ್ರ ಅರಿವಿಲ್ಲದೆ ಮಾತ್ರೆ ಸೇವನೆ ಮಾಡಿದ್ದ ಮಹಿಳೆ ಮಗುವನ್ನು ಕಳೆದುಕೊಂಡಿದ್ದಾಳೆ. ತವರಿಗೆ ಬಂದು ನೋವು ತೋಡಿಕೊಂಡಿದ್ದ ಮಹಿಳೆಗೆ ವಾಪಸ್ ಗಂಡನ ಮನೆಗೆ ಹೋಗಲು ಅವಕಾಶ ಇರಲಿಲ್ಲ. ಆಕೆಯನ್ನು ಗಂಡ ಮನೆಗೆ ಸ್ವಾಗತಿಸಲಿಲ್ಲ. ಈಗ ಗಂಡ ಹಾಗೂ ಆತನ ಕುಟುಂಬದ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾಳೆ.