ನಂಜನಗೂಡು ತಾಲೂಕಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ್ದಾರೆ. ಖದೀಮರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವಾಹನ ಪಲ್ಟಿಯಾಗಿದ್ದು, ಪೊಲೀಸರು ಸ್ಥಳೀಯರ ಸಹಾಯದಿಂದ ಸುಮಾರು 20 ಕರುಗಳನ್ನು ರಕ್ಷಿಸಿದ್ದಾರೆ.
ಮೈಸೂರು (ಅ.21): ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿನಿಮಾ ದೃಶ್ಯಗಳನ್ನ ಮೀರಿಸುವಂತಹ ರೋಚಕ ಘಟನೆಯೊಂದು ನಡೆದಿದೆ. ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನ ಚೇಸ್ ಮಾಡಿ ಪೊಲೀಸರು 20 ಕರುಗಳನ್ನ ರಕ್ಷಿಸಿದ್ದಾರೆ.
ಬೊಲೆರೋ ವಾಹನದಲ್ಲಿ ಅಕ್ರಮ ಗೋವು ಸಾಗಾಟ ಮಾಡುತ್ತಿರುವ ಬಗ್ಗೆ ಜಯಪುರ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ತಕ್ಷಣ ಎಚ್ಚೆತ್ತ ಪೊಲೀಸರು ಪಿಎಸ್‌ಐ ಹೇಮಾವತಿ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆಗಿಳಿದಿದೆ. ಈ ವೇಳೆ ಪೊಲೀಸರು ಬೆನ್ನಟ್ಟಿರುವುದು ಖದೀಮರು ಗೊತ್ತಾಗಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಅತಿವೇಗವಾಗಿ ವಾಹನ ಚಲಾಯಿಸಿದ್ದಾರೆ. ಪೊಲೀಸರು ಕೂಡ ಖದೀಮರ ಬೊಲೆರೊ ವಾಹನವನ್ನ ಸಿನಿಮೀಯಶೈಲಿಯಲ್ಲಿ ಚೇಸ್ ಮಾಡಿದ್ದಾರೆ.
ರೋಚಕ ಕಾರ್ಯಾಚರಣೆ:
ಈ ವೇಳೆ ಅತಿವೇಗದಲ್ಲಿ ಚಾಲನೆ ಮಾಡುತ್ತಿದ್ದ ಆರೋಪಿಗಳು ಹುಲ್ಲಹಳ್ಳಿ ರಸ್ತೆ ಕಡೆಗೆ ವಾಹನವನ್ನು ತಿರುಗಿಸಿದ್ದಾರೆ. ತಕ್ಷಣ ಹೇಮಾವತಿ ತಂಡವು ಹುಲ್ಲಹಳ್ಳಿ ಪಿಎಸ್ಸೈ ಚೇತನ್ ಕುಮಾರ್‌ಗೆ ಮಾಹಿತಿ ರವಾನಿಸಿದೆ. ಅತ್ತ ಪಿಎಸ್‌ಐ ಚೇತನ್ ಕುಮಾರ್ ತಮ್ಮ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಗಿಳಿದು, ವಾಹನವನ್ನು ಹಿಡಿಯಲು ಮುಂದಾಗಿದ್ದಾರೆ. ಯರ್ರಾಬಿರ್ರಿ ವಾಹನ ಚಲಾಯಿಸಿದ ಖದೀಮರು ಅಹಲ್ಯಾ ಗ್ರಾಮದ ಬಳಿ ಜಾನುವಾರುಗಳನ್ನ ತುಂಬಿದ್ದ ವಾಹನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ವಾಹನದಲ್ಲಿದ್ದ ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಬಿದ್ದ ಕರುಗಳು:
ಪಲ್ಟಿಯಾದ ರಭಸಕ್ಕೆ ಕರುಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕೂಡಲೇ ಸ್ಥಳೀಯರ ಸಹಾಯದಿಂದ ಸುಮಾರು 20ಕ್ಕೂ ಹೆಚ್ಚು ಕರುಗಳನ್ನು ರಕ್ಷಿಸಿ ಪಿಂಜರಾಪೋಲ್‌ಗೆ ರವಾನಿಸಿದ್ದಾರೆ. ಪಲ್ಟಿಯಾದ ಬೊಲೆರೋ ವಾಹನವನ್ನು ವಶಪಡಿಸಿಕೊಂಡಿರುವ ಹುಲ್ಲಹಳ್ಳಿ ಪೊಲೀಸರು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಸೈ ಹೇಮಾವತಿ ಮತ್ತು ಚೇತನ್ ಕುಮಾರ್ ತಂಡದ ಕ್ಷಿಪ್ರ ಕ್ರಮಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
