ಹುಬ್ಬಳ್ಳಿಯಲ್ಲಿ ನವವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ. ಕುಟುಂಬಸ್ಥರಿಂದ ಕೊಲೆಯ ಆರೋಪ. ಪೊಲೀಸರಿಂದ ತನಿಖೆ ಆರಂಭ.
ಹುಬ್ಬಳ್ಳಿ (ಆ.17): ಹುಬ್ಬಳ್ಳಿಯ ನಂದಗೋಕುಲ ಬಡಾವಣೆಯಲ್ಲಿ ಗೃಹಿಣಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಆಘಾತಕಾರಿ ಘಟನೆ ನಡೆದಿದೆ.
ಮೃತ ಗೃಹಿಣಿಯನ್ನ ಜಯಶ್ರೀ ಬಡಿಗೇರ್ (31) ಎಂದು ಗುರುತಿಸಲಾಗಿದೆ. ಆದರೆ ಇದು ಆತ್ಮ೧ಹತ್ಯೆಯಲ್ಲ, ಕೊಲೆ ಎಂದು ಜಯಶ್ರೀ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಜಯಶ್ರೀ ಅವರು ಮೇ 21ರಂದು ಶಿವಾನಂದ್ ಬಡಿಗೇರ್ ಎಂಬ ಖಾಸಗಿ ಕಂಪನಿಯ ಉದ್ಯೋಗಿಯನ್ನು ವಿವಾಹವಾಗಿದ್ದರು. ಹದಿಮೂರು ವರ್ಷದ ಪ್ರೀತಿ ಮುಚ್ಚಿಟ್ಟು ಜಯಶ್ರೀ ವಿವಾಹವಾಗಿದ್ದ ಶಿವಾನಂದ್. ಮದುವೆ ನಂತರ ಜಯಶ್ರೀಗೆ ಈ ಬಗ್ಗೆ ಮಾಹಿತಿ ನೀಡಿದ್ದ ಯುವತಿ. ಇದರಿಂದ ಆಘಾತಗೊಂಡರು ಈಗಾಗಲೇ ಮದುವೆಯಾಗಿದ್ದ ಜಯಶ್ರೀ ಎಲ್ಲವನ್ನು ನುಂಗಿಕೊಂಡು ಗಂಡನ ಜೊತೆಗೆ ಇರಲು ಮುಂದಾಗಿದ್ದಳು.
ಈ ವಿಷಯದಿಂದ ದಂಪತಿಗಳ ನಡುವೆ ಆಗಾಗ ಗಲಾಟೆಯಾಗುತ್ತಿತ್ತು ಎನ್ನಲಾಗಿದೆ. ಶಿವಾನಂದ್ ತನ್ನ ಪತ್ನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಜಯಶ್ರೀ ಅವರ ಕುಟುಂಬಸ್ಥರು ದೂರಿದ್ದಾರೆ. ಕಳೆದ ರಾತ್ರಿಯೂ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ರಾತ್ರಿ ಕಳೆದು ಬೆಳಗಾದಾಗ ಜಯಶ್ರೀ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆದರೆ, ಇದು ಆತ್ಮ೧ಹತ್ಯೆಯಲ್ಲ, ಶಿವಾನಂದ್ ತಮ್ಮ ಮಗಳನ್ನು ಕೊಲೆ ಮಾಡಿ ನೇಣಿಗೆ ಹಾಕಿದ್ದಾನೆ ಎಂದು ಜಯಶ್ರೀ ಪೋಷಕರು ಆರೋಪಿಸಿದ್ದಾರೆ.
ಈ ಘಟನೆಯು ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಜಯಶ್ರೀ ಅವರ ಕುಟುಂಬದ ಆರೋಪಗಳನ್ನು ಆಧರಿಸಿ, ಶಿವಾನಂದ್‌ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪೊಲೀಸರು ಶವಪರೀಕ್ಷೆ ವರದಿ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸಿದ್ದಾರೆ. ಈ ಘಟನೆಯಿಂದ ನಂದಗೋಕುಲ ಬಡಾವಣೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ನ್ಯಾಯಕ್ಕಾಗಿ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
