ಚಾಮರಾಜನಗರ ಜಿಲ್ಲೆಯಲ್ಲಿ ಗಣೇಶ ಹಬ್ಬದಂದು ತವರು ಮನೆಯವರಿಲ್ಲದ ದುಃಖದಿಂದ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ, ತಾಯಿ ಮತ್ತು ಅಣ್ಣನನ್ನು ಈ ಹಿಂದೆಯೇ ಕಳೆದುಕೊಂಡಿದ್ದ ಅವರಿಗೆ, ಹಬ್ಬದ ಸಂದರ್ಭದಲ್ಲಿ ತವರಿನಿಂದ ಕರೆ ಬಾರದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚಾಮರಾಜನಗರ (ಆ.28): ಗೌರಿ-ಗಣೇಶ ಹಬ್ಬಕ್ಕೆ ಕರೆಯಲು ತವರುಮನೆಯವರಿಲ್ಲವೆಂದು ಮನನೊಂದು ಗೃಹಿಣಿಯೊಬ್ಬಳು ಆತ್ಮ೧ಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಆರುವನಪುರ ಬಡಾವಣೆಯಲ್ಲಿ ಗಣಪತಿ ಹಬ್ಬದಂದೇ ನಡೆದಿದೆ.
ರಶ್ಮಿ (32) ಮೃತ ಮಹಿಳೆ. ಆರುವನಪುರ ಬಡಾವಣೆಯ ಸಿದ್ದರಾಜು ಎಂಬುವವರ ಮದುವೆಯಾಗಿದ್ದ ಮೃತ ಮಹಿಳೆ. ರಶ್ಮಿಯ ತಂದೆ, ತಾಯಿ ಹಾಗೂ ಅಣ್ಣ ಈ ಹಿಂದೆಯೇ ಮೃತಪಟ್ಟಿದ್ದರಿಂದ, ಈ ಬಾರಿಯ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ತವರು ಮನೆಗೆ ಕರೆಯಲು ಯಾರೂ ಇರಲಿಲ್ಲ. ಇದರಿಂದ ರಶ್ಮಿ ತೀವ್ರವಾಗಿ ಮನನೊಂದಿದ್ದರು.
ಹಬ್ಬದ ಸಂಭ್ರಮದಲ್ಲಿ ತವರಿನವರಿಂದ ಅರಿಶಿಣ-ಕುಂಕುಮ ಸ್ವೀಕರಿಸುವ ಸಂಪ್ರದಾಯದ ರಶ್ಮಿ ಇದೀಗ ತವರಿನಲ್ಲಿ ತನ್ನವರು ಯಾರೂ ಇಲ್ಲದಿರುವುದರಿಂದ ಅಭದ್ರತೆಯಿಂದ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ..
ಹಬ್ಬದ ದಿನದಂದು ರಶ್ಮಿ ತಮ್ಮ ಮನೆಯಲ್ಲಿ ಗಣಪತಿ ಪೂಜೆಗಾಗಿ ಎಲ್ಲಾ ಸಿದ್ಧತೆಗಳನ್ನೂ ಮಾಡಿದ್ದರು. ಆದರೆ, ತವರು ಮನೆಯವರಿಲ್ಲದ ಖಾಲಿತನದಿಂದ ಮನನೊಂದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಜೀವನವನ್ನೇ ಮುಗಿಸಿಕೊಂಡಿದ್ದಾರೆ.
ಈ ಘಟನೆಯಿಂದ ಕುಟುಂಬಸ್ಥರು ಹಾಗೂ ಸ್ಥಳೀಯರು ದಿಗ್ಭ್ರಮೆಗೊಂಡಿದ್ದಾರೆ.ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ರಶ್ಮಿಯವರ ಮೃತದೇಹವನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಈ ದುರಂತವು ಸಮಾಜದಲ್ಲಿ ಕುಟುಂಬದ ಬೆಂಬಲ ವ್ಯವಸ್ಥೆಯ ಮಹತ್ವವನ್ನು ಮತ್ತೊಮ್ಮೆ ತೋರಿಸಿದೆ.
