Honnali boiler explosion death: ದಾವಣಗೆರೆಯ ಹೊನ್ನಾಳಿಯಲ್ಲಿ ಸ್ನಾನದ ಕೋಣೆಯ ಬಾಯ್ಲರ್ ಸ್ಫೋಟಗೊಂಡು ಬಾಲಕಿ ಮೃತಪಟ್ಟರೆ, ಗದಗದಲ್ಲಿ ಕಂಡಕ್ಟರ್ ಪತಿಯೇ ಪತ್ನಿಯನ್ನು ಬೀಸುವ ಕಲ್ಲಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಎರಡೂ ಘಟನೆಗಳು ಕುಟುಂಬಗಳಲ್ಲಿ ದುಃಖವನ್ನುಂಟು ಮಾಡಿವೆ.
ಹೊನ್ನಾಳಿ (ಅ.9): ಸ್ನಾನದ ಕೊಠಡಿಯಲ್ಲಿದ್ದ ಬಾಯ್ಲರ್ ಸ್ಫೋಟಗೊಂಡು ಬಾಲಕಿ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದಿದೆ.
ಪಟ್ಟಣದ ದುರ್ಗಿಗುಡಿ ಬಡಾವಣೆಯ ಹೂವಾನಾಯ್ಕ ಎನ್ನುವವರ ಮನೆಯಲ್ಲಿ ಮಗಳು ಸ್ವೀಕೃತಿ (11) ಬುಧವಾರ ಬೆಳಗ್ಗೆ ಸ್ನಾನಕ್ಕೆ ಹೋಗಿದ್ದಳು. ಈ ವೇಳೆ ನೀರು ಕಾಯಿಸಲು ಅಳವಡಿಸಿದ್ದ ಬಾಯ್ಲರ್ ಸ್ಫೋಟಗೊಂಡಿದ್ದು, ಬೆಂಕಿ ತಗುಲಿ ಗಂಭೀರವಾಗಿದ್ದ ಸ್ವೀಕೃತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ
ಸ್ವೀಕೃತಿ ರಕ್ಷಣೆಗೆ ಬಚ್ಚಲಿನ ಬಾಗಿಲು ಹೊಡೆದು ಒಳಗಡೆ ಬಂದ ತಂದೆ ಹೂವಾನಾಯ್ಕ, ತಾಯಿ ಸುನೀತಾ ಹಾಗೂ ಅಜ್ಜಿ ತೀರ್ಥಿಬಾಯಿ ಅವರಿಗೂ ಬೆಂಕಿ ತಗುಲಿ ಸುಟ್ಟಗಾಯ ಆಗಿವೆ. ಈ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೀಸುವಕಲ್ಲು ಎತ್ತಿಹಾಕಿ ಪತ್ನಿ ಕೊಲೆ ಮಾಡಿದ ಕಂಡಕ್ಟರ್
ಗದಗ: ಬೀಸುವ ಕಲ್ಲನ್ನು ಎತ್ತಿಹಾಕಿ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದಿದೆ. ಯಲ್ಲಮ್ಮ ಅಲಿಯಾಸ್ ಸ್ವಾತಿ (35) ಹತ್ಯೆಯಾದ ಮಹಿಳೆ. ಪತಿ ರಮೇಶ್ ನರಗುಂದ ಎಂಬಾತ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಮಧ್ಯಾಹ್ನ ಮನೆಯಲ್ಲಿ ಈ ಭೀಕರ ಘಟನೆ ನಡೆದಿದ್ದು, ಮೊದಲು ಮನೆಯಲ್ಲಿದ್ದ ಬೀಸುವ ಕಲ್ಲಿನಿಂದ ಹೆಂಡತಿ ತಲೆಮೇಲೆ ಎತ್ತಿ ಹಾಕಿ, ನಂತರ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ರಮೇಶ ಹಾಗೂ ಸ್ವಾತಿಗೆ ಮೂವರು ಮಕ್ಕಳಿದ್ದು, ಪತಿ ರಮೇಶ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾನೆ.
