Hassan murder case: ಹಾಸನದಲ್ಲಿ ಪತ್ನಿಯನ್ನು ತವರಿಗೆ ಕರೆದೊಯ್ದಿದ್ದಕ್ಕೆ ಅಳಿಯನೊಬ್ಬ ಅತ್ತೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮಕ್ಕಳಾಗದ ಕಾರಣಕ್ಕೆ ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು, ಪತ್ನಿ ತವರಿಗೆ ಹೋದದ್ದಕ್ಕೆ ಕೋಪಗೊಂಡ ಅಳಿಯ ಈ ಕೃತ್ಯ ಎಸಗಿದ್ದಾನೆ.

ಹಾಸನ (ಸೆ.12): ಪತ್ನಿಯನ್ನ ತವರುಮನೆಗೆ ಕರೆದುಕೊಂಡು ಹೋದಳೆಂದು ಕುಪಿತಗೊಂಡು ಅಳಿಯನೋರ್ವ ಅತ್ತೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾಸನ ಜಿಲ್ಲೆಯ ರಾಮನಾಥಪುರದಲ್ಲಿ ನಡೆದಿದೆ.

ಫೈರೋಜಾ (58) ಕೊಲೆಯಾದ ಅತ್ತೆ. ರಸುಲ್ಲಾ, ಅತ್ತೆ ಕೊಂದಿರೋ ಅಳಿಯ. ರಾಮನಾಥಪುರದ ನಿವಾಸಿಗಳಾದ ಫೈರೋಜಾ ತನ್ನ ಮಗಳು ಶೆಮಿನಾ ಬಾನುಳನ್ನ ಬೆಟ್ಟದಪುರದ ರಸುಲ್ಲಾ ಜೊತೆ ಮದುವೆ ಮಾಡಿಕೊಡಲಾಗಿತ್ತು. ವಿವಾಹವಾಗಿ 10 ವರ್ಷವಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಇದೇ ವಿಚಾರಕ್ಕೆ ಪತಿ-ಪತ್ನಿ ನಡುವೆ ಪದೇಪದೆ ಜಗಳವಾಗುತ್ತಿತ್ತು. ಪತ್ನಿಯ ಮೇಲೆ ರಸೂಲ್ ಅನುಮಾನಿಸಲು ಶುರುಮಾಡಿದ್ದ. ಇದರಿಂದ ಬೆಸತ್ತಿದ್ದ ಶೆಮಿನಾ ಬಾನು, ಗಂಡನ ಕಿರುಕುಳದ ಬಗ್ಗೆ ತಾಯಿಗೆ ತಿಳಿಸಿದ್ದಳು.

ಇದನ್ನೂ ಓದಿ: ಖಲೀಫಾ, ಘಜ್ವಾ ಉಗ್ರ ಜಾಲ ಬಯಲು! ದೇಶವನ್ನು ಖಿಲಾಫತ್‌ ಮಾಡಲು ಹೊಂಚು ಹಾಕಿದ್ದ ಐವರ ಬಂಧನ

ಇದನ್ನ ಅರಿತ ಫೈರೋಜಾ, ಅಳಿಯ ತನ್ನ ಮಗಳಿಗೆ ಕೊಡುತ್ತಿರುವ ಕಿರುಕುಳಕ್ಕೆ ಹೆದರಿ ಮಗಳನ್ನ ತವರುಮನೆಗೆ ಕರೆದೊಯ್ದಿದ್ದಳು. ಈ ಬೆಳವಣಿಗೆಯಿಂದ ಮತ್ತಷ್ಟು ಕುಪಿತಗೊಂಡ ರಸುಲ್ಲಾ ನಿನ್ನೆ ಅತ್ತೆ ಮನೆಗೆ ಬಂದಿದ್ದಾನೆ. ಮಗಳನ್ನ ಕರೆದುಕೊಂಡುಬಂದಿರೋ ವಿಚಾರಕ್ಕೆ ಅತ್ತೆಯೊಂದಿಗೆ ಜಗಳ ತೆಗೆದಿದ್ದಾನೆ. ಮೊದಲೇ ನಿರ್ಧರಿಸಿಕೊಂಡು ಬಂದವನಂತೆ ಅತ್ತೆಯ ಮೇಲೆ ಎರಗಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ತಾಯಿ ರಕ್ಷಣೆಗೆ ಬಂದ ಪತ್ನಿಯ ಮೇಲೆಯೂ ಹಲ್ಲೆ ನಡೆಸಿ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಅಳಿಯ ಹಲವು ಬಾರಿ ಚಾಕು ಇರಿತದಿಂದ ತೀವ್ರ ರಕ್ತಸ್ರಾವದಿಂದ ಫೈರೋಜಾ ಜೀವ ಚೆಲ್ಲಿದ್ದಾಳೆ. ಸದ್ಯ ಘಟನೆ ಸಂಬಂಧದ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆ ಶುರು ಮಾಡಿದ್ದಾರೆ.