ಬೆಂಗಳೂರು ಹೊರವಲಯದ ಹಾರಗದ್ದೆ ಗ್ರಾಮದ ಬ್ಯಾಂಕ್ ವ್ಯವಸ್ಥಾಪಕರೊಬ್ಬರು ಸಹೋದ್ಯೋಗಿಗಳ ಕಿರುಕುಳ ಮತ್ತು ವಂಚನೆಯಿಂದ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್‌ನಲ್ಲಿ ಬ್ಯಾಂಕಿನ ಸಿಬ್ಬಂದಿಯೇ ತಮ್ಮ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಬೆಂಗಳೂರು (ಆ.22): ಸಹೋದ್ಯೋಗಿಗಳ ಕಿರುಕುಳ ಮತ್ತು ವಂಚನೆಯಿಂದ ನೊಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹಾರಗದ್ದೆ ಗ್ರಾಮದ 'ಹಾರಗದ್ದೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನ' ವ್ಯವಸ್ಥಾಪಕ (ಮ್ಯಾನೇಜರ್) ಪ್ರಕಾಶ್ (41) ಅವರು ಆತ್ಮಹ*ತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಪ್ರಕಾಶ್ ತಮ್ಮ ಸಾವಿಗೆ ಬ್ಯಾಂಕ್‌ನ ಕೆಲವು ಸಿಬ್ಬಂದಿಗಳೇ ನೇರ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.

ಪ್ರಕರಣದ ವಿವರಗಳು

ಪ್ರಕಾಶ್ ತಮ್ಮ ಡೆತ್ ನೋಟ್‌ನಲ್ಲಿ, ಬ್ಯಾಂಕ್‌ನ ಕೆಲವು ಸಿಬ್ಬಂದಿ ಮಾಡಿರುವ ಅಕ್ರಮಗಳು ಮತ್ತು ತಾವು ಅದಕ್ಕೆ ಪ್ರತಿಕ್ರಿಯಿಸಿದಾಗ ಅವರು ಹೇಗೆ ಮಾನಸಿಕ ಕಿರುಕುಳ ನೀಡಿದರು ಎಂಬುದನ್ನು ವಿವರಿಸಿದ್ದಾರೆ. ಅವರ ಪ್ರಕಾರ, ಬ್ಯಾಂಕಿನ ಅಕೌಂಟೆಂಟ್ ನಾಗರಾಜ್, ಕ್ಯಾಷಿಯರ್ ರೂಪಾ, ಕಂಪ್ಯೂಟರ್ ಆಪರೇಟರ್ ಸಂದೀಪ್ ಮತ್ತು ರೂಪಾ ಅವರ ಸಂಬಂಧಿ ಶ್ರೀನಿವಾಸ್ ಅವರುಗಳೇ ತಮ್ಮ ಸಾವಿಗೆ ಕಾರಣ ಎಂದು ಬರೆದಿದ್ದಾರೆ. ಈ ನಾಲ್ವರು ಬ್ಯಾಂಕಿನಿಂದ ₹1 ಕೋಟಿಗೂ ಅಧಿಕ ಹಣವನ್ನು ಲೂಟಿ ಮಾಡಿ, ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದಾರೆ.

ಹಣ ದುರುಪಯೋಗ ಮತ್ತು ಬ್ಲಾಕ್‌ಮೇಲ್

ಅಕೌಂಟೆಂಟ್ ನಾಗರಾಜ್: ನಾಗರಾಜ್ ಅವರು ಬ್ಯಾಂಕಿನಿಂದ ₹15 ಲಕ್ಷ ದುರುಪಯೋಗ ಮಾಡಿಕೊಂಡಿದ್ದನ್ನು ಕಂಡ ಆಡಳಿತ ಮಂಡಳಿ, ಅವರನ್ನು ಕೆಲಸದಿಂದ ವಜಾ ಮಾಡಲು ಸೂಚಿಸಿತ್ತು. ಆದರೆ ನಾಗರಾಜ್ ಅವರು ಹಣವನ್ನು ಹಿಂತಿರುಗಿಸುವುದಾಗಿ ಪ್ರಕಾಶ್ ಬಳಿ ಕಾಡಿಬೇಡಿ, ಮಾನವೀಯತೆಯ ನೆಲೆಯಲ್ಲಿ ಸಹಾಯ ಪಡೆದಿದ್ದರು. ಆರಂಭದಲ್ಲಿ ₹10 ಲಕ್ಷ ಹಿಂತಿರುಗಿಸಿದ್ದ ನಾಗರಾಜ್ ನಂತರ ಉಲ್ಟಾ ಹೊಡೆದಿದ್ದರು.

ಕಂಪ್ಯೂಟರ್ ಆಪರೇಟರ್ ಸಂದೀಪ್: ನಾಗರಾಜ್ ಹಣ ಪಡೆದ ವಿಷಯವನ್ನು ಇತರ ಸಿಬ್ಬಂದಿಗೆ ತಿಳಿಸಿದ್ದರಿಂದ, ಸಂದೀಪ್ ಇದನ್ನು ದುರುಪಯೋಗಪಡಿಸಿಕೊಂಡು ಪ್ರಕಾಶ್‌ಗೆ ಬ್ಲಾಕ್‌ಮೇಲ್ ಮಾಡಿ ₹10 ಲಕ್ಷ ಪಡೆದಿದ್ದರು.

ಕ್ಯಾಷಿಯರ್ ರೂಪಾ ಮತ್ತು ಆಕೆಯ ಸಂಬಂಧಿ ಶ್ರೀನಿವಾಸ್: ಕ್ಯಾಷಿಯರ್ ರೂಪಾ ಕೂಡಾ ಬ್ಯಾಂಕಿನಿಂದ ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದಾರೆ. ರೂಪಾ ತಮ್ಮ ಸಂಬಂಧಿ ಶ್ರೀನಿವಾಸ್ ಮೂಲಕ ಪ್ರಕಾಶ್‌ಗೆ ಬ್ಲಾಕ್‌ಮೇಲ್ ಮಾಡಿದ್ದಾರೆ. ಬ್ಯಾಂಕಿನಲ್ಲಿ ಅಡಮಾನ ಇಟ್ಟಿದ್ದ ಚಿನ್ನಾಭರಣಗಳನ್ನು ಸಹ ನೀಡದೆ, ₹43.50 ಲಕ್ಷ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಿದ್ದಾರೆ ಎಂದು ಪ್ರಕಾಶ್ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಮಾನಸಿಕ ಕಿರುಕುಳ ಮತ್ತು ಕೊನೆಯ ಹೆಜ್ಜೆ

ಈ ನಾಲ್ವರು ಸಹೋದ್ಯೋಗಿಗಳು ನಿರಂತರವಾಗಿ ಪ್ರಕಾಶ್ ಅವರಿಗೆ ಬ್ಲಾಕ್‌ಮೇಲ್ ಮಾಡಿ, ಮಾನಸಿಕ ಕಿರುಕುಳ ನೀಡಿದ್ದರಿಂದ ಪ್ರಕಾಶ್ ನೊಂದಿದ್ದರು. ತಾವು ಆತ್ಮಹ*ತ್ಯೆ ಮಾಡಿಕೊಳ್ಳಲು ಇದೇ ಮುಖ್ಯ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾರೆ. ಸದ್ಯ ಜಿಗಣಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣವು ಸಹಕಾರಿ ಬ್ಯಾಂಕುಗಳಲ್ಲಿ ನಡೆಯುತ್ತಿರುವ ಹಣಕಾಸು ಅಕ್ರಮಗಳು ಮತ್ತು ಆಡಳಿತ ವೈಫಲ್ಯಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.