WhatsAppಗೆ ಯಾರಾದರೂ ಯಾವುದೇ ರೀತಿಯ ಇನ್ವಿಟೇಷನ್ ಕಳುಹಿಸಿದರೆ ಓಪನ್ ಮಾಡುವ ಮುನ್ನ ಇರಲಿ ಎಚ್ಚರ. ನಿಮ್ಮ ಬಳಿ ನಂಬರ್ ಸೇವ್ ಆಗದೇ ಇದ್ದರೆ ಮೈಯೆಲ್ಲಾ ಕಣ್ಣಾಗಿರಲಿ. ಇಲ್ಲದಿದ್ರೆ ಲಕ್ಷ ಲಕ್ಷ ಕಳಕೊಳ್ತೀರಾ! ಆಗಿದ್ದೇನು ನೋಡಿ...
ಸೈಬರ್ ವಂಚನೆ ಇಂದು ಯಾವ ರೂಪದಲ್ಲಿ ಹುಟ್ಟುತ್ತದೆ ಎಂದು ಹೇಳುವುದೇ ಕಷ್ಟ. ಎಷ್ಟೇ ಬುದ್ಧಿವಂತಿಕೆಯಿಂದ ಇದ್ದರೂ ಮೋಸ ಮಾಡುವವರು ಅದಕ್ಕಿಂತ ಹೆಚ್ಚಿನ ಬುದ್ಧಿವಂತರಾಗಿರುತ್ತಾರೆ. ಇದಕ್ಕಾಗಿಯೇ ಪದೇ ಪದೇ ಪೊಲೀಸರು ಜನರಿಗೆ ಕೆಲವೊಂದು ಸಲಹೆಗಳನ್ನು ನೀಡುತ್ತಲೇ ಇರುತ್ತಾರೆ. ಆದರೆ, ಅದನ್ನು ಯಾವುದೋ ಕ್ಷಣದಲ್ಲಿ ಕಡೆಗಣಿಸಿದರೆ ಲಕ್ಷ ಲಕ್ಷ ರೂಪಾಯಿ ಕಳೆದುಕೊಳ್ಳುವ ಸ್ಥಿತಿಯೂ ಬರುತ್ತದೆ. ಅಂಥದ್ದೇ ಒಂದು ಘಟನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ನಡೆದಿದೆ. ಇದನ್ನು ಕೇಳಿದರೆ, ಎಂಥವರಿಗೂ ಅಚ್ಚರಿ ಆಗದೇ ಇರದು.
Whatsappಗೆ ಬಂದಿರುವ ಮದುವೆಯ ಆಹ್ವಾನ ಪತ್ರಿಕೆಯನ್ನು ಓಪನ್ ಮಾಡಿದ ಸರ್ಕಾರಿ ಉದ್ಯೋಗಿಯೊಬ್ಬರು 1.90 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಮದುವೆ ಪತ್ರಿಕೆ ಓಪನ್ ಮಾಡಿದ್ರೆ ಹಣ ಹೋಗುತ್ತಾ ಎಂದು ಅಚ್ಚರಿ ಆಗಬಹುದು. ಆದರೆ ಇವರಿಗೆ ಬಂದಿದ್ದು ಅಸಲಿ ಲಗ್ನ ಪತ್ರಿಕೆ ಅಲ್ಲ, ಬದಲಿಗೆ ವಂಚನೆಯ ಪತ್ರಿಕೆ. ಅಷ್ಟಕ್ಕೂ ಆಗಿದ್ದೇನೆಂದರೆ, ಇವರಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ಮದುವೆಗೆ ಆಹ್ವಾನಿಸುವ ಸಂದೇಶ ಬಂದಿತ್ತು. 'ಸ್ವಾಗತ. ಶಾದಿ ಮೇ ಜರುರ್ ಆಯೆ (ಮದುವೆಗೆ ತಪ್ಪದೇ ಬನ್ನಿ). ಪ್ರೀತಿಯೇ ಸಂತೋಷದ ಬಾಗಿಲನ್ನು ತೆರೆಯುವ ಮಾಸ್ಟರ್ ಕೀ' ಎಂದು ಇತ್ತು.
ಯಾರೋ ತಮ್ಮ ಫೋನ್‌ನಲ್ಲಿ ನಂಬರ್ ಸೇವ್ ಆಗದೇ ಇರುವವರು, ಪ್ರೀತಿಯಿಂದ ಮದುವೆಯ ಪತ್ರಿಕೆ ಕಳುಹಿಸಿರಬಹುದು ಎನ್ನುವ ಕಾರಣಕ್ಕೆ ಪಿಡಿಎಫ್ ಫೈಲ್‌ನಂತೆ ಕಾಣುವ ಆಮಂತ್ರಣ ಪತ್ರಿಕೆಯನ್ನು ಕ್ಲಿಕ್ ಮಾಡಿದ್ದಾರೆ. ಆದರೆ ಅದು ಆಂಡ್ರಾಯ್ಡ್ ಅಪ್ಲಿಕೇಶನ್ ಪ್ಯಾಕೇಜ್ (APK) ಫೈಲ್ ಆಗಿದ್ದು, ಬಳಕೆದಾರರ ಫೋನ್‌ಗಳನ್ನು ಹ್ಯಾಕ್ ಮಾಡಲು ಮತ್ತು ಸೂಕ್ಷ್ಮ ಡೇಟಾವನ್ನು ಕದಿಯಲು ಈ ರೀತಿ ಮಾಡಲಾಗಿತ್ತು. ಮದುವೆ ಕಾರ್ಡ್‌ನಂತೆ ಕಾಣಿಸುವಂತೆ ಈ ವಂಚನೆಯ ಮೆಸೇಜ್ ವಿನ್ಯಾಸಗೊಳಿಸಲಾಗಿತ್ತು.
ಇದು ಯಾರಿಗಾದರೂ ತಿಳಿಯುವುದಾದರೂ ಹೇಗೆ? ವಂಚನೆಯನ್ನು ಅರಿಯದ ವ್ಯಕ್ತಿಯು ಆ ಫೈಲ್ ಅನ್ನು ಕ್ಲಿಕ್ ಮಾಡಿದ ತಕ್ಷಣವೇ, ಸೈಬರ್ ಅಪರಾಧಿಗಳು ಮೊಬೈಲ್ ಡೇಟಾವನ್ನು ಪ್ರವೇಶಿಸಿ 1,90,000 ರೂ.ಗಳನ್ನು ಕದ್ದಿದ್ದಾರೆ. ಈ ಸಂಬಂಧ ಹಿಂಗೋಲಿ ಪೊಲೀಸ್ ಠಾಣೆಯಲ್ಲಿ ಮತ್ತು ಸೈಬರ್ ಸೆಲ್ ಇಲಾಖೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

