ಬೆಳಗಾವಿಯ ಮೂಡಲಗಿ ತಾಲೂಕಿನಲ್ಲಿ, ಐದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಸಾಕ್ಷಿ ಕಂಬಾರ ಎಂಬ ಯುವತಿಯನ್ನು ಆಕೆಯ ಪತಿ ಆಕಾಶ್ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೃತ್ಯದ ಬಳಿಕ ಶವವನ್ನು ಬೆಡ್ ಕೆಳಗೆ ಮುಚ್ಚಿಟ್ಟು ಪರಾರಿಯಾಗಿದ್ದು, ವರದಕ್ಷಿಣೆ ಕಿರುಕುಳದ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲು
ಬೆಳಗಾವಿ (ಅ.9): ಗಡಿ ಜಿಲ್ಲೆ ಬೆಳಗಾವಿಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಡೆದ ದಾರುಣ ಕೊಲೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಕೇವಲ ಐದು ತಿಂಗಳ ಹಿಂದೆ ಸಪ್ತಪದಿ ತುಳಿದಿದ್ದ ಸಾಕ್ಷಿ ಕಂಬಾರ (20) ಎಂಬ ಯುವತಿಯನ್ನು ಆಕೆಯ ಪತಿ ಆಕಾಶ್ ಕಂಬಾರ ಬರ್ಬರವಾಗಿ ಕೊಲೆಗೈದು, ಹೆಣವನ್ನು ಬೆಡ್ ಕೆಳಗೆ ಅಡಗಿಸಿಟ್ಟು ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.
ಊರಿಗೆ ಹೋಗಿದ್ದ ಅತ್ತೆ ಮನೆಗೆ ಮರಳಿ ಬಂದಾಗ ಶಾಕ್:
ಮೂರು ದಿನಗಳ ಹಿಂದೆ ಈ ಕೃತ್ಯವೆಸಗಿದ ಆಕಾಶ್, ಕೊಲೆ ಬಳಿಕ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಇತ್ತ ಆಕಾಶ್‌ನ ತಾಯಿ ಊರಿಗೆ ಹೋಗಿದ್ದರು. ಆಕೆ ಮನೆಗೆ ಬಂದು ಬಾಗಿಲು ತೆಗೆದಾಗ ಸೊಸೆ ಭೀಕರವಾಗಿ ಕೊಲೆಯಾಗಿರುವುದು ಕಂಡು ಶಾಕ್ ಆಗಿದ್ದಾಳೆ.
ಇದನ್ನೂ ಓದಿ: ನಟಿ ರಮ್ಯಾಗೆ ಅಶ್ಲೀಲ ಸಂದೇಶ: 11 ಮಂದಿ ದರ್ಶನ್ ಫ್ಯಾನ್ಸ್ ವಿರುದ್ಧ ಚಾರ್ಜ್‌ಶೀಟ್
ವರದಕ್ಷಿಣೆ ಕಿರುಕುಳ ಆರೋಪ:
ಸಾಕ್ಷಿಯ ತಂದೆ-ತಾಯಿ, ಆಕಾಶ್ ತಮ್ಮ ಮಗಳಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂದು ದೂರಿದ್ದಾರೆ.ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಮೂಡಲಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆಯ ವೇಳೆ, ಸಾಕ್ಷಿ ತನ್ನ ಸ್ನೇಹಿತನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿರುವಾಗ ಆಕಾಶ್‌ಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಎಂಬ ಮಾಹಿತಿ ಲಭಿಸಿದೆ.
ಇನ್ಮುಂದೆ ಮನೆಗೆ ಬರೋಲ್ಲ..:
ಕೊಲೆಯಾದ ಬಳಿಕ ಆಕಾಶ್ ತನ್ನ ತಾಯಿಗೆ 'ಇನ್ಮುಂದೆ ನಾನು ಮನೆಗೆ ಬರಲ್ಲ' ಎಂದು ಹೇಳಿ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿ ಆಕಾಶ್ ಕಂಬಾರನಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ. ಈ ಘಟನೆ ಗ್ರಾಮದಲ್ಲಿ ಆತಂಕ ಮೂಡಿಸಿದ್ದು, ಸ್ಥಳೀಯರು ಆಕಾಶ್‌ನ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
