ಏಷ್ಯಾಕಪ್‌ನಲ್ಲಿ ಪುರುಷರ ತಂಡ ಅನುಸರಿಸಿದ 'ನೋ ಹ್ಯಾಂಡ್ ಶೇಕ್' ನೀತಿಯನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡವೂ ಪಾಕಿಸ್ತಾನದ ವಿರುದ್ಧ ಮುಂದುವರಿಸುವ ಸಾಧ್ಯತೆಯಿದೆ. ಬಿಸಿಸಿಐ ಮೂಲಗಳ ಪ್ರಕಾರ, ಪಂದ್ಯದ ನಂತರ ಸಾಂಪ್ರದಾಯಿಕ ಹಸ್ತಲಾಘವ ಇರುವುದಿಲ್ಲ.  

ನವದೆಹಲಿ: ಏಷ್ಯಾಕಪ್‌ನ ಭಾರತ, ಪಾಕ್ ನಡುವಿನ 'ನೋ ಹ್ಯಾಂಡ್ ಶೇಕ್' ಮಹಿಳಾ ಏಕದಿನ ವಿಶ್ವಕಪ್ ನಲ್ಲಿಯೂ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಭಾರತದ ಆಟಗಾರ್ತಿಯರು ಪಾಕ್ ಆಟಗಾರ್ತಿಯರಿಗೆ ಹಸ್ತಲಾಘವ ನೀಡುವುದಿಲ್ಲ ಎಂದು ತಿಳಿದುಬಂದಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾಕಪ್ ಟೂರ್ನಿಯಲ್ಲಿ ಮೂರು ಬಾರಿ ಮುಖಾಮುಖಿಯಾಗಿದ್ದವು. ಮೂರು ಬಾರಿಯೂ ಭಾರತೀಯ ಆಟಗಾರರು, ಪಾಕಿಸ್ತಾನದ ಆಟಗಾರರ ಜತೆ ಕೈಕುಲುಕಿರಲಿಲ್ಲ.

ಈ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿದ್ದು, 'ಟಾಸ್ ವೇಳೆ ಹ್ಯಾಂಡ್‌ಶೇಕ್, ಮ್ಯಾಚ್ ರೆಫ್ರಿ ಜೊತೆಗಿನ ಫೋಟೋಶೂಟ್, ಪಂದ್ಯದ ಬಳಿಕ ಕೈ ಕುಲುಕುವ ಸಾಂಪ್ರದಾಯಿಕ ನಿಯಮಗಳು ಇರುವುದಿಲ್ಲ. ಪುರುಷರ ತಂಡ ಅನುಸರಿಸಿದ ನೀತಿಯನ್ನೇ ಮಹಿಳೆಯರು ಮುಂದುವರಿಸಲಿದ್ದಾರೆ ಎಂದಿದೆ. ಭಾರತ- ಪಾಕಿಸ್ತಾನ ಆ.5ರಂದು ಕೊಲಂಬೋದಲ್ಲಿ ಮುಖಾಮುಖಿಯಾಗಲಿವೆ.

ಭರ್ಜರಿ ಶುಭಾರಂಭ ಮಾಡಿರುವ ಭಾರತ

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಇದೀಗ ಭಾರತ ತಂಡವು ಬದ್ದ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲು ಸಜ್ಜಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಕೊಲಂಬೊದಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾ, ಬಾಂಗ್ಲಾ ಶುಭಾರಂಭ

ಇಂದೋರ್/ ಕೊಲಂಬೊ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ 7 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಭರ್ಜರಿ ಶುಭಾರಂಭ ಮಾಡಿದೆ. ಬಾಂಗ್ಲಾದೇಶ ಕೂಡಾ ಗೆಲುವಿನ ಆರಂಭ ಪಡೆದಿದೆ.

ಬುಧವಾರ ಇಂದೋರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಆಸೀಸ್ 89 ರನ್‌ಗಳಲ್ಲಿ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ಆಸೀಸ್ 49.3 ಓವರ್‌ಗಳಲ್ಲಿ 326 ರನ್‌ಗೆ ಆಲೌಟಾಯಿತು. ಆಶ್ಲೆ ಗಾರ್ಡರ್ 83 ಎಸೆತಗಳಲ್ಲಿ 115 ರನ್ ಸಿಡಿಸಿದರು. ಫೋಬೆ ಲಿಚ್ ಫೀಲ್ಡ್ 45, ಕಿಮ್ ಗಾರ್ಥ್ 38 ರನ್ ಕೊಡುಗೆ ನೀಡಿದರು. ಜೆಸ್ ಕೇರ್, ಲೀ ತಹುಹು ತಲಾ 3 ವಿಕೆಟ್ ಕಿತ್ತರು. ದೊಡ್ಡ ಗುರಿ ಬೆನ್ನತ್ತಿದ ಕಿವೀಸ್ 43.2 ಓವರ್‌ಗಳಲ್ಲಿ 237 ರನ್‌ಗೆ ಆಲೌಟಾಯಿತು. ನಾಯಕಿ ಸೋಫಿ ಡಿವೈನ್ (112) ಹೋರಾಟದ ಶತಕ ಬಾರಿಸಿದರೂ ಇತರರಿಂದ ಸೂಕ್ತ ಬೆಂಬಲ ಸಿಗಲಿಲ್ಲ.

ಬಾಂಗ್ಲಾಗೆ ಜಯ: ಕೊಲಂಬೊದಲ್ಲಿ ಗುರುವಾರ ನಡೆದ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಬಾಂಗ್ಲಾದೇಶ 7 ವಿಕೆಟ್ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 38.3 ಓವರ್‌ಗಳಲ್ಲಿ ಕೇವಲ 129 ರನ್‌ಗೆ ಆಲೌಟ್‌ ಆಯಿತು. ರಮೀಮ್ ಶಮೀಮ್ (23) ತಂಡದ ಪರ ಗರಿಷ್ಠ ಮೊತ್ತ ಗಳಿಸಿದರು. ಸುಲಭ ಗುರಿ ಪಡದ ಬಾಂಗ್ಲಾ 31.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಜಯಗಳಿಸಿತು. ಶುಭಾರಂಭದ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ಮೊದಲ ಪಂದ್ಯದಲ್ಲೇ ಮುಖಭಂಗ ಎದುರಾಗಿದೆ.

ಇಂದು ಇಂಗ್ಲೆಂಡ್-ಆಫ್ರಿಕಾ

ಈ ಬಾರಿ ವಿಶ್ವಕಪ್‌ನಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿರುವ ಮಾಜಿ ಚಾಂಪಿಯನ್ ಇಂಗ್ಲೆಂಡ್, ತನ್ನ ಮೊದಲ ಪಂದ್ಯದಲ್ಲಿ ಶುಕ್ರವಾರ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ. ಪಂದ್ಯ ಗುವಾಹಟಿಯಲ್ಲಿ ನಡೆಯಲಿದೆ. ಎರಡೂ ತಂಡಗಳು ಮೇಲ್ನೋಟಕ್ಕೆ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದು, ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.