ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಶುಭ್‌ಮನ್ ಗಿಲ್ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ 4 ಸ್ಥಾನ ಕುಸಿದು ಟಾಪ್ 10 ಪಟ್ಟಿಯಿಂದ ಹೊರಬಿದ್ದಿದ್ದಾರೆ. ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ದ್ ಕೃಷ್ಣ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ.  

ದುಬೈ: ಇತ್ತೀಚೆಗಷ್ಟೇ ಮುಕ್ತಾಯವಾದ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಒಂದು ದ್ವಿಶತಕ ಸೇರಿದಂತೆ ಬರೋಬ್ಬರಿ 754 ರನ್ ಚಚ್ಚುವ ಮೂಲಕ ಶುಭ್‌ಮನ್ ಗಿಲ್, ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರೆಣಿಯಲ್ಲಿ ಶುಭ್‌ಮನ್ ಗಿಲ್, ಸರಣಿಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದರು. ಇದರ ಜತೆಗೆ ತಮ್ಮ ಚೊಚ್ಚಲ ನಾಯಕತ್ವದ ಟೆಸ್ಟ್ ಸರಣಿಯಲ್ಲಿ 2-2ರ ಸಮಬಲದೊಂದಿಗೆ ತಮ್ಮ ಅಭಿಯಾನ ಮುಗಿಸಿದೆ. ಇನ್ನು ಈ ಸರಣಿಯಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿಯೂ ಶುಭ್‌ಮನ್ ಗಿಲ್ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನ ಬ್ಯಾಟರ್‌ಗಳ ಪಟ್ಟಿಯಲ್ಲಿ 4 ಸ್ಥಾನ ಕುಸಿತ ಕಂಡು ಟಾಪ್ 10 ಪಟ್ಟಿಯಿಂದಲೇ ಹೊರಬಿದ್ದಿದ್ದಾರೆ.

ಓವಲ್ ಟೆಸ್ಟ್ ಪಂದ್ಯ ಮುಕ್ತಾಯದ ಬೆನ್ನಲ್ಲೇ ಪರಿಷ್ಕೃತ ಐಸಿಸಿ ಟೆಸ್ಟ್ ಶ್ರೇಯಾಂಕ ಪ್ರಕಟಗೊಂಡಿದ್ದು, ಶುಭ್‌ಮನ್ ಗಿಲ್ 4 ಸ್ಥಾನ ಕುಸಿತ ಕಂಡು 13ನೇ ಸ್ಥಾನಕ್ಕೆ ಜಾರಿದ್ದರು. ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಆದರೆ ಶುಭ್‌ಮನ್ ಗಿಲ್ ಟಾಪ್ 10 ಪಟ್ಟಿಯಿಂದ ಹೊರಬಿದ್ದಿದ್ದು ಏಕೆ ಎನ್ನುವ ವಿಚಾರ ಇದೀಗ ಬಯಲಾಗಿದೆ. ಹೌದು, ಓವಲ್ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಶುಭ್‌ಮನ್ ಗಿಲ್ ಐಸಿಸಿ ಟೆಸ್ಟ್ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿದ್ದರು. ಇನ್ನು ಓವಲ್ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್‌ಗಳಿಂದ ಗಿಲ್ ಕೇವಲ 32 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಈ ಕಾರಣಕ್ಕಾಗಿಯೇ ಶುಭ್‌ಮನ್ ಗಿಲ್ 9ರಿಂದ 13ನೇ ಸ್ಥಾನಕ್ಕೆ ಹಿಂಬಡ್ತಿ ಪಡೆದುಕೊಂಡಿದ್ದಾರೆ.

ಇನ್ನುಳಿದಂತೆ ಓವಲ್ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ದ್ ಕೃಷ್ಣ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ. ಸಿರಾಜ್ 12 ಸ್ಥಾನ ಜಿಗಿತ ಕಂಡು 15ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಕರ್ನಾಟಕ ಮೂಲದ ನೀಳಕಾಯದ ವೇಗಿ ಪ್ರಸಿದ್ದ್ ಕೃಷ್ಣ, ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ 8 ವಿಕೆಟ್ ಕಬಳಿಸುವ ಮೂಲಕ ಬರೋಬ್ಬರಿ 25 ಸ್ಥಾನ ಜಿಗಿತ ಕಾಣುವ ಮೂಲಕ 59ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಟೆಸ್ಟ್‌ ಶ್ರೇಯಾಂಕದಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ದ್ ಕೃಷ್ಣ ಇಬ್ಬರದ್ದೂ ವೈಯುಕ್ತಿಕ ಶ್ರೇಷ್ಠ ಸಾಧನೆ ಎನಿಸಿಕೊಂಡಿದೆ.

ಇನ್ನು ಓವಲ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದ ಟೀಂ ಇಂಡಿಯಾ ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಮೂರು ಸ್ಥಾನ ಜಿಗಿತ ಕಂಡು 792 ರೇಟಿಂಗ್ ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.ಇನ್ನುಳಿದಂತೆ ಇಂಗ್ಲೆಂಡ್‌ನ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಐಸಿಸಿ ಟೆಸ್ಟ್ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲೇ ಮುಂದುವರೆದಿದ್ದಾರೆ.

ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮೊದಲ ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ. ಇನ್ನುಳಿದಂತೆ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ ಮೂರು ಸ್ಥಾನ ಗಳಿಸಿ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ಐದನೇ ಸ್ಥಾನದಲ್ಲಿದ್ದಾರೆ. ಇನ್ನು ಟೆಸ್ಟ್ ಆಲ್ರೌಂಡರ್‌ ರ್‍ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ತಮ್ಮ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ.