ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭರ್ಜರಿ 202 ರನ್‌ಗಳ ಜಯ ಸಾಧಿಸಿ, 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ. ಜೇಡನ್ ಸೀಲ್ಸ್ 6 ವಿಕೆಟ್ ಪಡೆದು ವಿಂಡೀಸ್ ಗೆಲುವಿನ ರೂವಾರಿ ಎನಿಸಿಕೊಂಡರು. ಶಾಯ್ ಹೋಪ್ ಅಜೇಯ 120 ರನ್ ಗಳಿಸಿ ಮಿಂಚಿದರು.
ಟ್ರಿನಿಡಾಡ್: ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವೆಸ್ಟ್ ಇಂಡೀಸ್ ಗೆದ್ದುಕೊಂಡಿದೆ. ಕೊನೆಯ ಏಕದಿನ ಪಂದ್ಯದಲ್ಲಿ ಪಾಕ್ ಎದುರು ಬರೋಬ್ಬರಿ 202 ರನ್‌ಗಳ ಭಾರೀ ಗೆಲುವು ದಾಖಲಿಸುವ ಮೂಲಕ ವೆಸ್ಟ್ ಇಂಡೀಸ್ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ. ಈ ಮೂಲಕ ಬರೋಬ್ಬರಿ 34 ವರ್ಷಗಳ ಬಳಿಕ ಪಾಕಿಸ್ತಾನ ಎದುರು ಏಕದಿನ ಸರಣಿ ಜಯಿಸುವಲ್ಲಿ ವೆಸ್ಟ್ ಇಂಡೀಸ್ ತಂಡವು ಯಶಸ್ವಿಯಾಗಿದೆ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಆರು ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿತು. 94 ಎಸೆತಗಳಲ್ಲಿ 120 ರನ್ ಗಳಿಸಿ ಅಜೇಯರಾಗಿ ಉಳಿದ ಶಾಯ್ ಹೋಪ್ ವಿಂಡೀಸ್‌ನ ಅತ್ಯಧಿಕ ಸ್ಕೋರರ್ ಎನಿಸಿಕೊಂಡರು. ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕಿಸ್ತಾನ ಕೇವಲ 29.2 ಓವರ್‌ಗಳಲ್ಲಿ 92 ರನ್‌ಗಳಿಗೆ ಆಲೌಟ್ ಆಯಿತು. ಆರು ವಿಕೆಟ್ ಪಡೆದ ಜೇಡನ್ ಸೀಲ್ಸ್ ವಿಂಡೀಸ್ ಗೆಲುವಿನ ರೂವಾರಿ ಎನಿಸಿಕೊಂಡರು. 30 ರನ್ ಗಳಿಸಿದ ಸಲ್ಮಾನ್ ಅಗಾ ಪಾಕಿಸ್ತಾನ ಪರ ವೈಯುಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇನ್ನುಳಿದಂತೆ ಮೊಹಮ್ಮದ್ ನವಾಜ್(23*) ಹಾಗೂ ಹಸನ್ ನವಾಜ್(13) ಎರಡಂಕಿ ಮೊತ್ತ ದಾಖಲಿಸಿದ ಇನ್ನಿಬ್ಬರು ಪಾಕ್ ಬ್ಯಾಟರ್‌ಗಳಾಗಿದ್ದಾರೆ.
ಮೊದಲೆರಡು ಪಂದ್ಯಗಳನ್ನು ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಜಯಿಸಿದ್ದರಿಂದ ಮೂರನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ವಿಂಡೀಸ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಜೇಡನ್ ಸೀಲ್ಸ್ ಮಾರಕ ದಾಳಿಗೆ ತಬ್ಬಿಬ್ಬಾಗಿ ಹೋಯಿತು. ಪಾಕ್ ಆರಂಭಿಕರಿಬ್ಬರು ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಹಾಕಿ ಹಿಡಿದರು. ಬಾಬರ್ ಅಜಂ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ರಿಜ್ವಾನ್ ತಾವೆದುರಿಸಿದ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಪಾಕ್ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳಿಗೆ ಜೇಡನ್ ಸೀಲ್ಸ್ ಪೆವಿಲಿಯನ್ ಹಾದಿ ತೋರಿಸಿದರು. ಪಾಕ್ 23 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಹಳಿತಪ್ಪಿತು.
ನಂತರ ಅಗಾ ಮತ್ತು ನವಾಜ್ ಜೊತೆಯಾಟ 38 ರನ್‌ಗಳನ್ನು ಸೇರಿಸಿ ಪಾಕಿಸ್ತಾನವನ್ನು ಕುಸಿತದಿಂದ ಪಾರು ಮಾಡಲು ಪ್ರಯತ್ನಿಸಿದರು. ಆದರೆ ನವಾಜ್‌ರನ್ನು ಔಟ್ ಮಾಡುವ ಮೂಲಕ ಗುಡಕೇಶ್ ಮೋಟಿ ಪಾಕ್‌ಗೆ ಮತ್ತೆ ಶಾಕ್ ನೀಡಿದರು. ಆ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಪಾಕಿಸ್ತಾನ ಕೇವಲ 92 ರನ್‌ಗಳಿಗೆ ಸರ್ವಪತನ ಕಂಡಿತು.
ವಿಂಡೀಸ್ ಪರ ಶಿಸ್ತುಬದ್ದ ದಾಳಿ ನಡೆಸಿದ ಜೇಡನ್ ಸೀಲ್ಸ್ ಕೇವಲ 18 ರನ್ ನೀಡಿ 6 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ಇನ್ನು ಗುಡುಕೇಶ್ ಮೋಟಿ 2 ಹಾಗೂ ರೋಸ್ಟನ್ ಚೇಸ್ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾದರು.
ಇದಕ್ಕೂ ಮೊದಲು, ವೆಸ್ಟ್ ಇಂಡೀಸ್‌ಗೆ ಉತ್ತಮ ಆರಂಭ ಸಿಕ್ಕಿರಲಿಲ್ಲ. 68 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ಬ್ರೆಂಡನ್ ಕಿಂಗ್ (5), ಎವಿನ್ ಲೂಯಿಸ್ (37), ಕೀಸಿ ಕಾರ್ಟಿ (17) ವಿಕೆಟ್ ಕಳೆದುಕೊಂಡರು. ನಂತರ ಹೋಪ್ ಮತ್ತು ಶೆಫಾನೆ ರುದರ್‌ಫೋರ್ಡ್ (15) ಜೊತೆಯಾಟ 45 ರನ್‌ಗಳನ್ನು ಸೇರಿಸಿ ವಿಂಡೀಸ್‌ಗೆ ಸ್ವಲ್ಪ ಸಮಾಧಾನ ತಂದಿತು. ಆದರೆ ರುದರ್‌ಫೋರ್ಡ್‌ರನ್ನು ಔಟ್ ಮಾಡುವ ಮೂಲಕ ಅಯೂಬ್ ಪಾಕಿಸ್ತಾನ ಹಿಡಿತ ಸಾಧಿಸುವಂತೆ ಮಾಡಿದರು. ನಂತರ ರೋಸ್ಟನ್ ಚೇಸ್ (36) ಮತ್ತು ಹೋಪ್ ಜೊತೆಯಾಟ 64 ರನ್‌ಗಳನ್ನು ಸೇರಿಸಿತು. ನಸೀಮ್ ಶಾ ಈ ಜೊತೆಯಾಟವನ್ನು ಮುರಿದರು. 41 ನೇ ಓವರ್‌ನಲ್ಲಿ ಚೇಸ್‌ರನ್ನು ನಸೀಮ್ ಬೌಲ್ಡ್ ಮಾಡಿದರು. ಮೋಟಿ ಮೊಹಮ್ಮದ್ ನವಾಜ್ ಎಸೆತದಲ್ಲಿ ರಿಟರ್ನ್ ಕ್ಯಾಚ್ ನೀಡಿ ಔಟಾದರು. ಇದರೊಂದಿಗೆ ವಿಂಡೀಸ್ 184 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿತು. ನಂತರ ಕೊನೆಯ ಎಂಟು ಓವರ್‌ಗಳಲ್ಲಿ ಹೋಪ್ ಮತ್ತು ಜಸ್ಟಿನ್ ಗ್ರೀವ್ಸ್ 110 ರನ್‌ಗಳನ್ನು ಸಿಡಿಸಿದರು.
ಗ್ರೀವ್ಸ್ 24 ಎಸೆತಗಳಲ್ಲಿ 43 ರನ್ ಗಳಿಸಿ ಅಜೇಯರಾಗುಳಿದರು. ಅವರ ಇನ್ನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳು ಸೇರಿದ್ದವು. ಇನ್ನು 94 ಎಸೆತಗಳನ್ನು ಎದುರಿಸಿದ ಹೋಪ್ ಐದು ಸಿಕ್ಸರ್‌ಗಳು ಮತ್ತು 10 ಬೌಂಡರಿಗಳ
