ಲಂಡನ್‌ನಲ್ಲಿ ನಡೆದ ಕೊಹ್ಲಿ ಫಿಟ್ನೆಸ್ ಟೆಸ್ಟ್‌ನ ಅಂಕಗಳನ್ನು ಛೆಟ್ರಿ ಬಹಿರಂಗಪಡಿಸಿದ್ದಾರೆ. ಕಠಿಣ ಪರಿಶ್ರಮದ ಮೂಲಕ ಉನ್ನತ ಸ್ಥಾನದಲ್ಲಿರುವ ಕೊಹ್ಲಿ ಮತ್ತು ರೊನಾಲ್ಡೊ ಇತರರಿಗೆ ಸ್ಫೂರ್ತಿ ಎಂದು ಛೆಟ್ರಿ ಹೇಳಿದ್ದಾರೆ.  

ಲಂಡನ್: ಭಾರತದ ಕ್ರಿಕೆಟ್ ಲೆಜೆಂಡ್ ವಿರಾಟ್ ಕೊಹ್ಲಿ, ತಾವು ಲಂಡನ್‌ನಲ್ಲಿ ಫಿಟ್ನೆಸ್‌ ಟೆಸ್ಟ್‌ನಲ್ಲಿ ಗಳಿಸಿದ ಅಂಕಗಳೆಷ್ಟು ಎನ್ನುವುದನ್ನು ನನಗೆ ತಿಳಿಸಿದ್ದಾರೆ ಎಂದು ಭಾರತದ ಫುಟ್ಬಾಲ್ ತಾರೆ ಸುನಿಲ್ ಛೆಟ್ರಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಬಿಸಿಸಿಐ ಸೂಚನೆಯ ಮೇರೆಗೆ ಲಂಡನ್‌ನಲ್ಲಿರುವ ವಿರಾಟ್ ಕೊಹ್ಲಿಗೆ ಅಲ್ಲಿಯೇ ಫಿಟ್ನೆಸ್ ಟೆಸ್ಟ್‌ಗೆ ಒಳಗಾಗಿದ್ದರು. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ ವಿರೋದದ ಚರ್ಚೆಗಳು ವ್ಯಕ್ತವಾಗಿದ್ದವು.

'ಕೆಲವು ದಿನಗಳ ಹಿಂದಷ್ಟೇ ವಿರಾಟ್ ಕೊಹ್ಲಿ, ಲಂಡನ್‌ನಲ್ಲಿ ಫಿಟ್ನೆಸ್ ಟೆಸ್ಟ್‌ನಲ್ಲಿ ತಾವು ಗಳಿಸಿದ ಅಂಕಗಳ ಮಾಹಿತಿಯನ್ನು ನನಗೆ ಕಳಿಸುತ್ತಿದ್ದರು. ಇದು ತುಂಬಾ ಕ್ಲಿಷ್ಟಕರವಾಗಿತ್ತು. ಈ ರೀತಿ ಜನರ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ನಿಮ್ಮ ಕೆಟ್ಟ ದಿನಗಳಲ್ಲಿ ನೀವು ಸ್ವಲ್ಪ ಆಲಸ್ಯ ಅನುಭವಿಸಿದಾಗ, ನೀವು ಅವರನ್ನು ನೋಡಿ 'ಹೋಗೋಣ' ಎಂದು ಭಾವಿಸುತ್ತೀರಿ. ನೀವು ಉನ್ನತ ಸ್ಥಾನದಲ್ಲಿದ್ದಾಗ, ಎಲ್ಲರೂ ವಿರಾಟ್ ಕೊಹ್ಲಿ ಅಥವಾ ರೊನಾಲ್ಡೊ ಆಗಲು ಬಯಸುತ್ತಾರೆ, ಮತ್ತು ಈ ಇಬ್ಬರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದು ನಂಬಲಸಾಧ್ಯ ಎಂದು ಸುನಿಲ್‌ ಛೆಟ್ರಿ ಹೇಳಿದ್ದಾರೆ.

ಯಾವುದೇ ಕ್ರಿಕೆಟಿಗ ಕ್ರಿಕೆಟ್‌ನಿಂದ ವಿರಾಮದ ನಂತರ ಮರಳಲು ಫಿಟ್ನೆಸ್ ಟೆಸ್ಟ್ ನೀಡುವುದು ಅಗತ್ಯ. ಈ ಹಿಂದೆ ಭಾರತೀಯ ತಂಡದ ಆಟಗಾರರು ಯೋ ಯೋ ಟೆಸ್ಟ್ ನೀಡಬೇಕಿತ್ತು, ಈಗ ಅವರು ಬಾಸ್ಕೆಟ್‌ಬಾಲ್ ಆಟಗಾರರಂತೆ ಬ್ರಾಂಕೊ ಟೆಸ್ಟ್ ನೀಡಬೇಕು. ಇತ್ತೀಚೆಗೆ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ, ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಸೇರಿದಂತೆ ಹಲವಾರು ಭಾರತೀಯ ಆಟಗಾರರು ಫಿಟ್ನೆಸ್ ಟೆಸ್ಟ್ ನೀಡಿದ್ದಾರೆ, ಇದರಲ್ಲಿ ಬಹುತೇಕ ಎಲ್ಲಾ ಆಟಗಾರರು ಉತ್ತೀರ್ಣರಾಗಿದ್ದಾರೆ.

ಇನ್ನು ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಭಾರತ ಪರ ಮಾರ್ಚ್ 09, 2025ರ ಬಳಿಕ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ವಿರಾಟ್ ಕೊಹ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿಲ್ಲ. ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುತ್ತಿದ್ದಂತೆಯೇ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇನ್ನು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಘೋಷಿಸುವ ಮುನ್ನ ದಿಢೀರ್ ಎನ್ನುವಂತೆ ಟೆಸ್ಟ್ ಮಾದರಿಗೂ ವಿದಾಯ ಹೇಳಿದ್ದರು. ಇದೀಗ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕೆಲ ಮಾಧ್ಯಮಗಳ ವರದಿಯ ಪ್ರಕಾರ ವಿರಾಟ್ ಕೊಹ್ಲಿ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿದೆ. ವಿರಾಟ್ ಕೊಹ್ಲಿ ಮುಂಬರುವ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯ ವೇಳೆಗೆ ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.