ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ. ಪವರ್‌ಪ್ಲೇನಲ್ಲೇ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ವಿಕೆಟ್‌ಗಳನ್ನು ಕಳೆದುಕೊಂಡ ಭಾರತ, ರೋಹಿತ್, ಶ್ರೇಯಸ್ ಅಯ್ಯರ್ ಜೊತೆಯಾಟದಿಂದ ಚೇತರಿಸಿಕೊಳ್ಳಲು ಯತ್ನಿಸುತ್ತಿದೆ.

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಭಾರತಕ್ಕೆ ಬ್ಯಾಟಿಂಗ್ ಕುಸಿತ ಉಂಟಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ, ಪವರ್‌ಪ್ಲೇನಲ್ಲೇ ಎರಡು ವಿಕೆಟ್ ಕಳೆದುಕೊಂಡಿದೆ. ಇತ್ತೀಚಿನ ವರದಿ ಪ್ರಕಾರ, ಭಾರತ 15 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದೆ. 56 ಎಸೆತಗಳಲ್ಲಿ 26 ರನ್ ಗಳಿಸಿರುವ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ 13 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ನಾಯಕ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ವಿಕೆಟ್‌ಗಳನ್ನು ಭಾರತ ಕಳೆದುಕೊಂಡಿದೆ. 9 ರನ್ ಗಳಿಸಿದ್ದ ಗಿಲ್, ಕ್ಸೇವಿಯರ್ ಬಾರ್ಟ್ಲೆಟ್ ಎಸೆತದಲ್ಲಿ ಮಿಚೆಲ್ ಮಾರ್ಷ್‌ಗೆ ಕ್ಯಾಚಿತ್ತು ಔಟಾದರು. ನಾಲ್ಕು ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ ಖಾತೆ ತೆರೆಯುವ ಮುನ್ನವೇ ಬಾರ್ಟ್ಲೆಟ್ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆಗಿ ಪೆವಿಲಿಯನ್‌ಗೆ ಮರಳಿದರು. ಏಳನೇ ಓವರ್‌ನ ಮೊದಲ ಮತ್ತು ಐದನೇ ಎಸೆತಗಳಲ್ಲಿ ಬಾರ್ಟ್ಲೆಟ್ ಈ ಎರಡು ವಿಕೆಟ್‌ಗಳನ್ನು ಪಡೆದರು.

Scroll to load tweet…

ಸತತ ಎರಡನೇ ಬಾರಿಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಕೊಹ್ಲಿ:

ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಸತತ ಎರಡು ಪಂದ್ಯಗಳಲ್ಲಿ ಶೂನ್ಯ ಸುತ್ತುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ 8 ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿದ್ದರು. ಇದೀಗ ಅಡಿಲೇಡ್‌ನಲ್ಲಿ 4 ಎಸೆತಗಳನ್ನು ಎದುರಿಸಿ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ಗೆ ವಾಪಾಸ್ಸಾಗಿದ್ದಾರೆ.

ಪವರ್‌ಪ್ಲೇನಲ್ಲಿ ರನ್ ಗಳಿಸಲು ಕಷ್ಟಪಟ್ಟ ರೋಹಿತ್, ಜೋಶ್ ಹೇಝಲ್‌ವುಡ್ ಎಸೆತಗಳಲ್ಲಿ ರನ್ ಗಳಿಸಲು ಪರದಾಡಿದ್ದರಿಂದ ಭಾರತದ ಸ್ಕೋರಿಂಗ್ ನಿಧಾನವಾಯಿತು. ಮೊದಲ ಎರಡು ಓವರ್‌ಗಳಲ್ಲಿ ಜೋಶ್ ಹೇಝಲ್‌ವುಡ್ ವಿರುದ್ಧ ರೋಹಿತ್ ರನ್ ಗಳಿಸಲು ಸಾಧ್ಯವಾಗಲಿಲ್ಲ. ಮೂರನೇ ಓವರ್‌ನಲ್ಲಿ ಹೇಝಲ್‌ವುಡ್ ಎಸೆತದಲ್ಲಿ ರನೌಟ್‌ನಿಂದ ಕೂದಲೆಳೆ ಅಂತರದಲ್ಲಿ ಪಾರಾದ ರೋಹಿತ್, ನಂತರ ಎಲ್‌ಬಿಡಬ್ಲ್ಯೂನಿಂದಲೂ ಬಚಾವಾದರು. ಕ್ಸೇವಿಯರ್ ಬಾರ್ಟ್ಲೆಟ್ ತಮ್ಮ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ಗಿಲ್ ವಿಕೆಟ್ ಪಡೆದು ಭಾರತಕ್ಕೆ ಮೊದಲ ಆಘಾತ ನೀಡಿದರು. ನಂತರ ಕ್ರೀಸ್‌ಗೆ ಬಂದ ಕೊಹ್ಲಿ, ಎದುರಿಸಿದ ನಾಲ್ಕನೇ ಎಸೆತದಲ್ಲೇ ಎಲ್‌ಬಿಡಬ್ಲ್ಯೂ ಆಗಿ ಔಟಾದಾಗ ಭಾರತಕ್ಕೆ ಆಘಾತವಾಯಿತು. ರೋಹಿತ್ ಮತ್ತು ಶ್ರೇಯಸ್ ಜೋಡಿ ಹೆಚ್ಚಿನ ನಷ್ಟವಿಲ್ಲದೆ ಪವರ್‌ಪ್ಲೇ ಮುಗಿಸಿದರು. ಇದಕ್ಕೂ ಮುನ್ನ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಕಳೆದ ಪಂದ್ಯವಾಡಿದ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಭಾರತ ಕಣಕ್ಕಿಳಿದರೆ, ಆಸ್ಟ್ರೇಲಿಯಾ ಮೂರು ಬದಲಾವಣೆಗಳನ್ನು ಮಾಡಿದೆ.

ಉಭಯ ತಂಡಗಳ ಆಟಗಾರರ ಪಟ್ಟಿ

ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್: ಮಿಚೆಲ್ ಮಾರ್ಷ್ (ನಾಯಕ), ಟ್ರಾವಿಸ್ ಹೆಡ್, ಮ್ಯಾಥ್ಯೂ ಶಾರ್ಟ್, ಮ್ಯಾಟ್ ರೆನ್ಶಾ, ಅಲೆಕ್ಸ್ ಕ್ಯಾರಿ, ಕೂಪರ್ ಕೊನೊಲಿ, ಮಿಚೆಲ್ ಓವನ್, ಕ್ಸೇವಿಯರ್ ಬಾರ್ಟ್ಲೆಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹೇಝಲ್‌ವುಡ್.

ಭಾರತ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.