ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ಸರಣಿ ಸಮಬಲಗೊಳಿಸುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಮೊದಲ ಪಂದ್ಯದ ಸೋಲಿನ ಬಳಿಕ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪ್ರದರ್ಶನದ ಮೇಲೆ ಎಲ್ಲರ ಕಣ್ಣಿದ್ದು, ಅಡಿಲೇಡ್‌ನಲ್ಲಿ ಕೊಹ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆಯಲ್ಲಿದ್ದಾರೆ.

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ 2ನೇ ಏಕದಿನ ಪಂದ್ಯ ಇಂದು ನಡೆಯಲಿದ್ದು, ಭಾರತ ತಂಡ ಸರಣಿ ಸಮಬಲಗೊಳಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಆರಂಭಿಕ ಪಂದ್ಯದ ಹೀನಾಯ ಪ್ರದರ್ಶನ ತಂಡದ ಆತ್ಮವಿಶ್ವಾಸ ಕುಗ್ಗಿಸಿದ್ದು, 2ನೇ ಪಂದ್ಯದಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲವಿದೆ. ಪಂದ್ಯಕ್ಕೆ ಅಡಿಲೇಡ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಕೊಹ್ಲಿ-ರೋಹಿತ್ ಮೇಲೆ ಎಲ್ಲರ ಕಣ್ಣು

ಮಳೆ ಪೀಡಿತ ಆರಂಭಿಕ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳು ತೀರಾ ಕಳಪೆ ಪ್ರದರ್ಶನ ನೀಡಿದ್ದರು. 26 ಓವರ್‌ಗಳ ಪಂದ್ಯದಲ್ಲಿ ಭಾರತ 9 ವಿಕೆಟ್ ಕಳೆದುಕೊಂಡು 136 ರನ್ ಗಳಿಸಿತ್ತು. ಪ್ರಮುಖವಾಗಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮಿಂಚಲು ವಿಫಲರಾಗಿದ್ದರು. ಇಡೀ ಸರಣಿಯೇ ವಿರಾಟ್ ಹಾಗೂ ರೋಹಿತ್ ಮೇಲೆಕೇಂದ್ರೀಕೃತವಾಗಿದ್ದರೂ, ಅವರಿಬ್ಬರಿಂದ ದೊಡ್ಡ ಮೊತ್ತ ದಾಖಲಾಗಿರಲಿಲ್ಲ. ದಿಗ್ಗಜರಿಬ್ಬರ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ದೃಷ್ಟಿಯಲ್ಲಿ ಈ ಸರಣಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇರುವುದರಿಂದ, 2ನೇ ಪಂದ್ಯದಲ್ಲಾದರೂ ಅಬ್ಬರಿಸಬಲ್ಲರೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ.

ಉಳಿದಂತೆ ನಾಯಕ ಶುಭಮನ್ ಗಿಲ್, ಉಪನಾಯಕ ಶ್ರೇಯಸ್‌ ಅಯ್ಯರ್‌ರಿಂದಲೂ ತಂಡ ದೊಡ್ಡ ಇನ್ನಿಂಗ್ಸ್‌ಗಾಗಿ ಕಾಯುತ್ತಿದೆ. ವಿಕೆಟ್ ಕೀಪರ್ ಆಗಿರುವ ಕೆ.ಎಲ್.ರಾಹುಲ್ ಮೊದಲ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗಿದ್ದರೂ, ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಿರಲಿಲ್ಲ. ವಿದೇಶಿ ಪಿಚ್‌ಗಳಲ್ಲಿ ಉತ್ತಮ ದಾಖಲೆ ಹೊಂದಿರುವ ಕನ್ನಡಿಗ ಬ್ಯಾಟರ್ ಈ ಪಂದ್ಯದಲ್ಲಿ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. ಮೊದಲ ಪಂದ್ಯದ ಕಳಪೆ ಪ್ರದರ್ಶನ ಹೊರತಾಗಿಯೂ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ.

ಅಡಿಲೇಡ್‌ನಲ್ಲಿ ದಾಖಲೆಯ ಅಂಚಿನಲ್ಲಿ ವಿರಾಟ್

ವಿರಾಟ್ ಕೊಹ್ಲಿ ಅಡಿಲೇಡ್ ಕ್ರೀಡಾಂಗಣದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಈ ಕ್ರೀಡಾಂಗಣದಲ್ಲಿ 17 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕೊಹ್ಲಿ 65ರ ಸರಾಸರಿಯಲ್ಲಿ 975 ರನ್ ಗಳಿಸಿದ್ದಾರೆ. ಇನ್ನು 25 ರನ್ ಗಳಿಸಿದರೆ ಅಡಿಲೇಡಲ್ಲಿ ಸಾವಿರ ರನ್ ಗಳಿಸಿದ ಮೊದಲ ವಿದೇಶಿ ಆಟಗಾರ ಎನಿಸಿಕೊಳ್ಳಲಿದ್ದಾರೆ. ಇನ್ನು, ಅಡಿಲೇಡ್‌ನಲ್ಲಿ ಕೊಹ್ಲಿ 5 ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ. ಏಕದಿನದಲ್ಲಿ 2, ಟೆಸ್ಟ್‌ನಲ್ಲಿ 3 ಸೆಂಚುರಿ ಸಿಡಿಸಿದ್ದಾರೆ. ಮತ್ತೊಂದು ಶತಕ ಬಾರಿಸಿದರೆ, ಆಸ್ಟ್ರೇಲಿಯಾದ ಯಾವುದೇ ಕ್ರೀಡಾಂಗಣವೊಂದರಲ್ಲಿ ಗರಿಷ್ಠ ಶತಕ ಸಿಡಿಸಿದ ವಿದೇಶಿ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ಮತ್ತೊಂದೆಡೆ ಆಸ್ಟ್ರೇಲಿಯಾ ತುಂಬು ಆತ್ಮವಿಶ್ವಾಸ ದಲ್ಲಿದ್ದು, ಸತತ 2ನೇ ಗೆಲುವಿನೊಂದಿಗೆ ಸರಣಿ ಕೈವಶಪಡಿಸಿಕೊಳ್ಳಲು ಕಾತರಿಸುತ್ತಿದೆ. ವೇಗಿಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್ ಮತ್ತೊಮ್ಮೆ ಭಾರತೀಯ ತಾರಾ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಎದುರು ನೋಡುತ್ತಿದ್ದಾರೆ.

09 ಗೆಲುವು: ಭಾರತ ಅಡಿಲೇಡ್‌ನಲ್ಲಿ ಈವರೆಗೂ 15 ಏಕದಿನ ಪಂದ್ಯಗಳನ್ನಾಡಿದ್ದು, 9ರಲ್ಲಿ ಗೆದ್ದು, 5ರಲ್ಲಿ ಸೋತಿದೆ. ಒಂದು ಟೈ ಆಗಿದೆ.

ಪಂದ್ಯ ಆರಂಭ: ಬೆಳಗ್ಗೆ 9 ಗಂಟೆಗೆ

ಪ್ರಸಾರ: ಸ್ಟಾರ್‌ಸ್ಟೋರ್ಟ್ಸ್, ಜಿಯೋ ಹಾಟ್‌ಸ್ಟಾ‌