ಅಕ್ಟೋಬರ್ 19 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡ ಶೀಘ್ರದಲ್ಲೇ ಪ್ರಕಟವಾಗಲಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಸರಣಿಗೆ ಮರಳುವ ನಿರೀಕ್ಷೆಯಿದ್ದು, ಗಿಲ್ ಮತ್ತು ಬುಮ್ರಾಗೆ ವಿಶ್ರಾಂತಿ ಹಾಗೂ ಗಾಯಾಳು ಪಾಂಡ್ಯ ಅಲಭ್ಯರಾಗುವ ಸಾಧ್ಯತೆಯಿದೆ.
ನವದೆಹಲಿ: ಅ.19ರಿಂದ ನ.8ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿಗಾಗಿ ಶನಿವಾರ ಆಯ್ಕೆ ಸಮಿತಿ ಸಭೆ ನಡೆಯಲಿದ್ದು, ಬಳಿಕ ತಂಡ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮತ್ತೊಮ್ಮೆ ನಾಯಕನಾಗಿ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.
ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಕೊಹ್ಲಿ-ರೋಹಿತ್ ರೆಡಿ
ತಾರಾ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಏಕದಿನ ಸರಣಿಯ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಅಂ.ರಾ. ಟಿ20, ಟೆಸ್ಟ್‌ಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಏಕದಿನದಲ್ಲಿ ಮಾತ್ರ ಮುಂದುವರಿದಿದ್ದಾರೆ. 2025ರ ಮಾರ್ಚ್ 09ರಂದು ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ರೋಹಿತ್ ಹಾಗೂ ಕೊಹ್ಲಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ. ಇದೀಗ ಎಂಟು ತಿಂಗಳ ಬಳಿಕ ಟೀಂ ಇಂಡಿಯಾ ಜೆರ್ಸಿ ತೊಟ್ಟು ಕಣಕ್ಕಿಳಿಯಲು ರೆಡಿಯಾಗಿದ್ದಾರೆ.
ಗಿಲ್-ಬುಮ್ರಾಗೆ ಸಿಗುತ್ತಾ ರೆಸ್ಟ್
ಸರಣಿಯಿಂದ ಗಿಲ್‌ಗೆ ವಿಶ್ರಾಂತಿ ಸಿಗುವ ಸಾಧ್ಯತೆಯಿದ್ದು, ಜಸ್ಪ್ರೀತ್ ಬುಮ್ರಾ ಬಗ್ಗೆ ಕುತೂಹಲವಿದೆ. ಆರಂಭಿಕ ಸ್ಥಾನಕ್ಕೆ ಅಭಿಷೇಕ್ -ಜೈಸ್ವಾಲ್ ನಡುವೆ ಪೈಪೋಟಿಯಿದೆ. ಒಂದು ವೇಳೆ ಶುಭ್‌ಮನ್ ಗಿಲ್, ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೆ ವಿಶ್ರಾಂತಿ ಪಡೆದರೆ, ಯಶಸ್ವಿ ಜೈಸ್ವಾಲ್ ಭಾರತದ ಮೊದಲ ಆಯ್ಕೆಯ ಆರಂಭಿಕ ಬ್ಯಾಟರ್ ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತದೆ. ಇನ್ನು ಕೆ ಎಲ್ ರಾಹುಲ್ ರಾಹುಲ್ ಜತೆಗೆ ಬ್ಯಾಕ್‌ಅಪ್ ವಿಕೆಟ್ ಕೀಪರ್ ರೂಪದಲ್ಲಿ ಕೇರಳ ಮೂಲದ ಸಂಜು ಸ್ಯಾಮ್ಸನ್ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತದೆ. ರಿಷಭ್ ಪಂತ್ ಸಂಪೂರ್ಣ ಫಿಟ್ ಆಗಿದ್ದಾರೆ ಅಥವಾ ಇಲ್ಲವೇ ಎನ್ನುವುದಕ್ಕೆ ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.
ಏಷ್ಯಾಕಪ್ ಟೂರ್ನಿಯ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿ ಫೈನಲ್ ಪಂದ್ಯದಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ, ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಂದು ವೇಳೆ ಪಾಂಡ್ಯ ಆಸೀಸ್ ಪ್ರವಾಸಕ್ಕೆ ಅಲಭ್ಯರಾದರೇ, ಅವರ ಸ್ಥಾನಕ್ಕೆ ಶಿವಂ ದುಬೆ ಹಾಗೂ ನಿತೀಶ್ ಕುಮಾರ್ ರೆಡ್ಡಿ ಈ ಇಬ್ಬರ ಪೈಕಿ ಒಬ್ಬರಿಗೆ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾ ಎದುರಿನ ಸೀಮಿತ ಓವರ್‌ಗಳ ಸರಣಿ
ಭಾರತ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲ್ಲಿದ್ದು, ಅಕ್ಟೋಬರ್ 19(ಪರ್ತ್), ಅಕ್ಟೋಬರ್ 23(ಅಡಿಲೇಡ್) ಹಾಗೂ ಅಕ್ಟೋಬರ್ 25ರಂದು ಸಿಡ್ನಿಯಲ್ಲಿ ಏಕದಿನ ಸರಣಿಯನ್ನಾಡಲಿದೆ. ಇದಾದ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯು ಅಕ್ಟೋಬರ್ 29ರಿಂದ ನವೆಂಬರ್ 08ರ ವರೆಗೆ ನಡೆಯಲಿದೆ.
ಆಸ್ಟ್ರೇಲಿಯಾ ಪ್ರವಾಸ ಮುಗಿಯುತ್ತಿದ್ದಂತೆಯೇ ಭಾರತ ತಂಡವು ತವರಿನಲ್ಲಿ ದಕ್ಷಿಣ ಆಫ್ರಿಕಾ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್ ಪಂದ್ಯವು ನವೆಂಬರ್ 14ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಹೀಗಾಗಿ ಮಹತ್ವದ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿಯು ಟೆಸ್ಟ್ ತಂಡದ ನಾಯಕ ಶುಭ್‌ಮನ್ ಗಿಲ್, ಜಸ್ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್ ಯಾದವ್ ಅವರಿಗೆ ವಿಶ್ರಾಂತಿ ಸಿಗುವ ಸಾಧ್ಯತೆಯಿದೆ. ಇನ್ನು ಅನುಭವಿ ವೇಗಿ ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ವೇಗದ ಬೌಲರ್ ರೂಪದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
