ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರ ಮನೆಯಲ್ಲಿ ವಿರಾಟ್ ಕೊಹ್ಲಿ ಸಹಿ ಮಾಡಿದ ಜೆರ್ಸಿ ಇದೆ. ಕೊಹ್ಲಿ ಮತ್ತು ಸಿರಾಜ್ ನಡುವಿನ ಬಾಂಧವ್ಯದ ಕುರಿತು ಈ ಲೇಖನ ಒಳನೋಟ ನೀಡುತ್ತದೆ. ಇಂಗ್ಲೆಂಡ್ ವಿರುದ್ಧದ ಸಿರಾಜ್ ಅವರ ಅದ್ಭುತ ಪ್ರದರ್ಶನವನ್ನೂ ಇಲ್ಲಿ ಉಲ್ಲೇಖಿಸಲಾಗಿದೆ.
ಹೈದರಾಬಾದ್: ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಇತ್ತೀಚೆಗಷ್ಟೇ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಮಿಂಚಿದ್ದರು. ಇದೀಗ ಸಿರಾಜ್ ತಮ್ಮ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಹೀಗಿರುವಾಗಲೇ ಸಿರಾಜ್ ಮನೆಯ ಗೋಡೆಯ ಮೇಲಿರುವ ವಿರಾಟ್ ಕೊಹ್ಲಿ ಆಟೋಗ್ರಾಫ್ ಹೊಂದಿರುವ ಜೆರ್ಸಿಯೊಂದು ವೈರಲ್ ಆಗಿದೆ.
ಭಾರತ ತಂಡವು ಕಳೆದ ವರ್ಷದ ಕೊನೆಯಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾ ಪ್ರವಾಸ ಮಾಡಿತ್ತು. ಈ ಸರಣಿಯನ್ನು ಅಸ್ಟ್ರೇಲಿಯಾ ತಂಡವು 3-1 ಅಂತರದಲ್ಲಿ ಜಯ ಸಾಧಿಸಿತ್ತು. ಇದೇ ಟೆಸ್ಟ್ ಸರಣಿ ವಿರಾಟ್ ಕೊಹ್ಲಿ ಪಾಲಿಗೆ ಕೊನೆಯ ಟೆಸ್ಟ್ ಸರಣಿ ಎನಿಸಿಕೊಂಡಿತ್ತು. ಇನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ತೊಟ್ಟಿದ್ದ ಜೆರ್ಸಿಯನ್ನು ಆಟೋಗ್ರಾಫ್ ಸಹಿತ ಸಿರಾಜ್‌ಗೆ ಗಿಫ್ಟ್ ಆಗಿ ನೀಡಿದ್ದರು. ಆ ಜೆರ್ಸಿಯನ್ನು ಮೊಹಮ್ಮದ್ ಸಿರಾಜ್ ಫ್ರೇಮ್ ಹಾಕಿಸಿಕೊಂಡು ತಮ್ಮ ಮನೆಯ ಗೋಡೆಯಲ್ಲಿ ಹಾಕಿಕೊಂಡಿದ್ದಾರೆ. ಈ ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಇದು ಒಬ್ಬ ಗುರುವಿಗೆ ಶಿಷ್ಯ ಕೊಡುವ ಗೌರವ ಎಂದು ಕೊಂಡಾಡಿದ್ದಾರೆ.
ವಿರಾಟ್ ಕೊಹ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವುದರ ಹಿಂದೆ ಅವರ ಶ್ರಮದ ಜತೆಗೆ ಆಗ ಟೀಂ ಇಂಡಿಯಾ ನಾಯಕರಾಗಿದ್ದ ವಿರಾಟ್ ಕೊಹ್ಲಿ ಪಾತ್ರವೂ ಇದೆ. ವಿರಾಟ್ ಕೊಹ್ಲಿಯನ್ನು ಸಿರಾಜ್ ತಮ್ಮ ಹಿರಿಯಣ್ಣನಂತೆಯೇ ಗೌರವಿಸುತ್ತಾ ಬಂದಿದ್ದಾರೆ. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮಿಂಚಿದ್ದ ಸಿರಾಜ್, ಆಬಳಿಕ ಟೀಂ ಇಂಡಿಯಾ ಪರವೂ ಹಲವು ಅವಿಸ್ಮರಣೀಯ ಬೌಲಿಂಗ್ ದಾಳಿ ಸಂಘಟಿಸಿ ಮಿಂಚಿದ್ದರು.
ಇನ್ನು ಇತ್ತೀಚೆಗಷ್ಟೇ ಮುಕ್ತಾಯವಾದ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಬರೋಬ್ಬರಿ 185.3 ಓವರ್ ಬೌಲಿಂಗ್ ಮಾಡಿ 23 ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಓವಲ್ ಟೆಸ್ಟ್‌ನಲ್ಲಿ ಕೊನೆಯ ದಿನ ಇಂಗ್ಲೆಂಡ್ ಗೆಲ್ಲಲು ಕೇವಲ 35 ರನ್ ಅಗತ್ಯವಿದ್ದಾಗ ಬೆಂಕಿಯುಂಡೆಯಂತೆ ಬೌಲಿಂಗ್ ದಾಳಿ ನಡೆಸಿ ಇಂಗ್ಲೆಂಡ್ ಎದುರು ಭಾರತ 6 ರನ್ ರೋಚಕ ಗೆಲುವು ಸಾಧಿಸುವಲ್ಲಿ ಸಿರಾಜ್ ಪ್ರಮುಖ ಪಾತ್ರವಹಿಸಿದ್ದರು. ಸಿರಾಜ್ ಓವಲ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 4 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಇದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ವಿರಾಟ್ ಕೊಹ್ಲಿ, 'ಭಾರತ ತಂಡದ ಗ್ರೇಟ್ ವಿನ್. ಪ್ರಸಿದ್ದ್ ಕೃಷ್ಣ ಹಾಗೂ ಮೊಹಮ್ಮದ್ ಸಿರಾಜ್ ಅವರ ಕೆಚ್ಚೆದೆಯ ಹೋರಾಟ ಗೆಲುವಿಗೆ ಕಾರಣವಾಯಿತು. ಅದರಲ್ಲೂ ಗೆಲುವಿಗಾಗಿ ಸಿರಾಜ್ ಹೋರಾಡಿದ ರೀತಿಯಂತೂ ಅದ್ಭುತವಾಗಿತ್ತು. ಅವರ ಪ್ರದರ್ಶನ ನಿಜಕ್ಕೂ ಖುಷಿಕೊಟ್ಟಿತು ಎಂದು ಸಿರಾಜ್ ಅವರನ್ನು ಕಿಂಗ್ ಕೊಹ್ಲಿ ಕೊಂಡಾಡಿದ್ದರು.
ಕೊಹ್ಲಿ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮೊಹಮ್ಮದ್ ಸಿರಾಜ್, ಧನ್ಯವಾದಗಳು ಅಣ್ಣ, ನನ್ನ ಮೇಲೆ ನಂಬಿಕೆಯಿಟ್ಟಿದ್ದಕ್ಕೆ ಎಂದು ರೀಟ್ವೀಟ್ ಮಾಡಿದ್ದರು.
2018ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಮೊಹಮ್ಮದ್ ಸಿರಾಜ್ ಅವರನ್ನು 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ರಿಲೀಸ್ ಮಾಡಿತ್ತು. ಸಿರಾಜ್ ಅವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಖರೀದಿಸಿತ್ತು. ಇನ್ನು ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಬರೋಬ್ಬರಿ 17 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
