ಆರಂಭಿಕ ಆಘಾತದ ಹೊರತಾಗಿಯೂ, ರೋಹಿತ್ ಶರ್ಮಾ (73) ಮತ್ತು ಶ್ರೇಯಸ್ ಅಯ್ಯರ್ (61) ಅವರ ಅರ್ಧಶತಕಗಳ ನೆರವಿನಿಂದ ಭಾರತ ಚೇತರಿಸಿಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್, ಕೊನೆಯಲ್ಲಿ ಹರ್ಷಿತ್ ರಾಣಾ ಅವರ ಉಪಯುಕ್ತ ಆಟದಿಂದ ಟೀಂ ಇಂಡಿಯಾ, ಆಸ್ಟ್ರೇಲಿಯಾಕ್ಕೆ 265 ರನ್‌ಗಳ ಸವಾಲಿನ ಗುರಿ ನೀಡಿದೆ.
ಅಡಿಲೇಡ್: ಆಡಂ ಜಂಪಾ ಮಾರಕ ದಾಳಿಯ ಹೊರತಾಗಿಯೂ ರೋಹಿತ್ ಶರ್ಮಾ(73) ಮತ್ತು ಶ್ರೇಯಸ್ ಅಯ್ಯರ್(61) ಬಾರಿಸಿದ ಆಕರ್ಷಕ ಅರ್ಧಶತಕ ಹಾಗೂ ಅಕ್ಷರ್ ಪಟೇಲ್ ಮತ್ತು ಕೊನೆಯಲ್ಲಿ ಹರ್ಷಿತ್ ರಾಣಾ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡು 264 ರನ್ ಬಾರಿಸಿದ್ದು, ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಎರಡನೇ ಪಂದ್ಯದಲ್ಲಿ ಸವಾಲಿನ ಗುರಿ ನೀಡಿದೆ.
ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಟೀಂ ಇಂಡಿಯಾ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. 17 ರನ್ ಗಳಿಸುವಷ್ಟರಲ್ಲಿ ನಾಯಕ ಶುಭ್‌ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡ ಭಾರತ ಆರಂಭಿಕ ಆಘಾತಕ್ಕೆ ಒಳಗಾಯಿತು. ಗಿಲ್ 9 ರನ್ ಗಳಿಸಿ ಕ್ಸೇವಿಯರ್ ಬರ್ಟೆಲ್ಟ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಅದೇ ಓವರ್‌ನಲ್ಲಿ ಕೊಹ್ಲಿ ಕೂಡಾ ಖಾತೆ ತೆರೆಯದೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಕೊಹ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ರೋಹಿತ್-ಶ್ರೇಯಸ್ ಜುಗಲ್ಬಂದಿ
ಕಳೆದ ಪಂದ್ಯದಲ್ಲಿ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದ ಮಾಜಿ ನಾಯಕ ರೋಹಿತ್ ಶರ್ಮಾ, ಎರಡನೇ ಪಂದ್ಯದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ಆರಂಭದಲ್ಲಿ ರನ್ ಗಳಿಸಲು ಪರದಾಡಿದ ರೋಹಿತ್ ಆ ಬಳಿಕ ನಿರಾಯಾಸವಾಗಿ ರನ್ ಗಳಿಸಲು ಆರಂಭಿಸಿದರು. ರೋಹಿತ್‌ಗೆ ಶ್ರೇಯಸ್ ಅಯ್ಯರ್ ಉತ್ತಮ ಸಾಥ್ ನೀಡಿದರು. ಈ ಜೋಡಿ ಮೂರನೇ ವಿಕೆಟ್‌ಗೆ 136 ಎಸೆತಗಳನ್ನು ಎದುರಿಸಿ 118 ರನ್‌ಗಳ ಜತೆಯಾಟವಾಡಿದರು.
ಅರ್ಧಶತಕ ಸಿಡಿಸಿದ ಹಿಟ್‌ಮ್ಯಾನ್, ಅಯ್ಯರ್
ಆಕರ್ಷಕ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ 97 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ ಎರಡು ಆಕರ್ಷಕ ಸಿಕ್ಸರ್ ಸಹಿತ 73 ರನ್ ಸಿಡಿಸಿ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಉಪನಾಯಕ ಶ್ರೇಯಸ್ ಅಯ್ಯರ್ 77 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 61 ರನ್ ಸಿಡಿಸಿ ಜಂಪಾಗೆ ವಿಕೆಟ್ ಒಪ್ಪಿಸಿದರು.
ಇನ್ನು ಆಲ್ರೌಂಡರ್ ಅಕ್ಷರ್ ಪಟೇಲ್ ಮಧ್ಯಮ ಕ್ರಮಾಂಕದಲ್ಲಿ 44 ರನ್ ಸಿಡಿಸುವ ಮೂಲಕ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಇನ್ನು ಕೊನೆಯಲ್ಲಿ ಹರ್ಷಿತ್ ರಾಣಾ ಅಜೇಯ 24 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 260ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಜಂಪಾ ಮಾರಕ ದಾಳಿ:
ವೈಯುಕ್ತಿಕ ಕಾರಣದಿಂದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಆಸೀಸ್ ತಜ್ಞ ಸ್ಪಿನ್ನರ್ ಆಡಂ ಜಂಪಾ, ಕಮ್‌ಬ್ಯಾಕ್ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿವ ಮೂಲಕ ಭಾರತದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಜಂಪಾ ಭಾರತದ ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆ ಎಲ್ ರಾಹುಲ್ ಹಾಗೂ ನಿತೀಶ್ ಕುಮಾರ್ ರೆಡ್ಡಿಗೆ ಪೆವಿಲಿಯನ್ ಹಾದಿ ತೋರಿಸಿದರು.
ಇನ್ನುಳಿದಂತೆ ಕ್ಸೇವಿಯರ್ ಬಾರ್ಟ್‌ಲೆಟ್ ಮೂರು ಹಾಗೂ ಮಿಚೆಲ್ ಸ್ಟಾರ್ಕ್ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
