2025ರ ಏಷ್ಯಾಕಪ್‌ನಲ್ಲಿ ಯುಎಇ ವಿರುದ್ಧದ ಪಂದ್ಯಕ್ಕೆ ರವಿಚಂದ್ರನ್ ಅಶ್ವಿನ್ ಭಾರತದ ಪ್ಲೇಯಿಂಗ್ XI ಆಯ್ಕೆ ಮಾಡಿದ್ದಾರೆ. ಸಂಜು ಸ್ಯಾಮ್ಸನ್‌ರನ್ನು ಕೈಬಿಟ್ಟು ಜಿತೇಶ್ ಶರ್ಮಾ ಅವರಿಗೆ ವಿಕೆಟ್ ಕೀಪರ್ ಆಗಿ ಅವಕಾಶ ನೀಡಿದ್ದಾರೆ. ಆರಂಭಿಕರಾಗಿ ಅಭಿಷೇಕ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಆಯ್ಕೆಯಾಗಿದ್ದಾರೆ.
ದುಬೈ: 2025ರ ಏಷ್ಯಾಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಇಂದು ಹಾಲಿ ಚಾಂಪಿಯನ್ ಭಾರತ ತಂಡವು, ಯುಎಇ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯವು ಇಂದು ಸಂಜೆ 8 ಗಂಟೆಗೆ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಆರಂಭವಾಗಲಿದೆ.
ಇನ್ನು ಈ ಮ್ಯಾಚ್ ಆರಂಭಕ್ಕೂ ಮುನ್ನ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವುದು ಸೂರ್ಯಕುಮಾರ್ ಯಾದವ್ ಅವರ ಮುಂದಿರುವ ದೊಡ್ಡ ಚಾಲೆಂಜ್ ಆಗಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಯುಎಇ ಎದುರಿನ ಏಷ್ಯಾಕಪ್ ಪಂದ್ಯಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ರವಿಚಂದ್ರನ್ ಅಶ್ವಿನ್ ಆಯ್ಕೆ ಮಾಡಿದ ಭಾರತ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ? ಯಾರನ್ನೆಲ್ಲಾ ಕೈಬಿಡಲಾಗಿದೆ ಎನ್ನುವುದನ್ನು ನೋಡೋಣ ಬನ್ನಿ
ಯುಎಇ ಎದುರಿನ ಪಂದ್ಯದಲ್ಲಿ ಅಶ್ವಿನ್ ಆಯ್ಕೆ ಮಾಡಿದ ತಂಡದಲ್ಲಿ ಆರಂಭಿಕ ಬ್ಯಾಟರ್‌ಗಳಾಗಿ ಅಭಿಷೇಕ್ ಶರ್ಮಾ ಹಾಗೂ ಶುಭ್‌ಮನ್ ಗಿಲ್‌ಗೆ ಮಣೆ ಹಾಕಿದ್ದಾರೆ. ಯಾಕೆಂದರೆ ಈ ಇಬ್ಬರು ಆರಂಭಿಕರು ಯಾವುದೇ ಎದುರಾಳಿ ಪಡೆಯ ಬೌಲರ್‌ಗಳಿಗೆ ತಲೆನೋವು ತಂದೊಡ್ಡಬಲ್ಲರು. ಅಭಿಷೇಕ್ ಶರ್ಮಾ ಒಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದರೆ, ಮತ್ತೊಂದು ತುದಿಯಲ್ಲಿ ಶುಭ್‌ಮನ್ ಗಿಲ್ ತಂಡಕ್ಕೆ ಆಧಾರವಾಗಿ ನೆಲೆನಿಲ್ಲುವಂತ ಆಟ ಆಡುತ್ತಾರೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಶುಭ್‌ಮನ್ ಗಿಲ್‌ಗೆ ಯಾವಾಗ ರನ್ ಗಳಿಸಬೇಕು ಎನ್ನುವುದು ಗೊತ್ತಿದೆ. ಅವರದ್ದು ಸ್ಟ್ರೈಕ್‌ರೇಟ್ ಸ್ವಲ್ಪ ಕಡಿಮೆ ಇರಬಹುದು, ಆದರೆ ಅವರು ದೊಡ್ಡ ಇನ್ನಿಂಗ್ಸ್ ಆಡಬಲ್ಲರು. ಅವರು 55 ಎಸೆತಗಳಲ್ಲಿ ಶತಕ ಸಿಡಿಸುವ ಕ್ಷಮತೆಯಿದೆ ಎಂದು ಅಶ್ವಿನ್ ಹೇಳಿದ್ದಾರೆ. ಇನ್ನು ಮೂರು ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಅವರಿಗೆ ಮಣೆ ಹಾಕಿದ್ದಾರೆ. ಸೂರ್ಯ ಅನುಭವ ಹಾಗೂ ತಿಲಕ್ ಮಿಂಚಿನ ಆಟ ಭಾರತಕ್ಕೆ ದೊಡ್ಡ ಸ್ಕೋರ್ ಕಲೆಹಾಕಲು ನೆರವಾಗಲಿದೆ ಎಂದು ಅಶ್ವಿನ್ ಹೇಳಿದ್ದಾರೆ.
ಇನ್ನು ಯುಎಇ ಎದುರಿನ ಪಂದ್ಯಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟು ಜಿತೇಶ್ ಶರ್ಮಾ ಅವರನ್ನು ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಸಂಜು ಕೈಬಿಟ್ಟು ಜಿತೇಶ್‌ಗೆ ಮಣೆಹಾಕಿದ್ದೇಕೆ ಎನ್ನುವುದನ್ನು ಅಶ್ವಿನ್ ಎಳೆಎಳೆಯಾಗಿ ವಿವರಿಸಿದ್ದಾರೆ. ಆರಂಭಿಕನಾಗಿ ಸಂಜುಗೆ ಸ್ಥಾನ ಸಿಗುತ್ತಿಲ್ಲ, ಇನ್ನು ಫಿನಿಶರ್ ಸ್ಥಾನಕ್ಕೆ ಸಂಜು ಫಿಟ್ ಆಗೊಲ್ಲ. ಹೀಗಾಗಿ ವಿಕೆಟ್ ಕೀಪರ್ ಬ್ಯಾಟರ್ ಹಾಗೂ ಮ್ಯಾಚ್ ಫಿನಿಶರ್ ಆಗಿ ಜಿತೇಶ್ ಶರ್ಮಾಗೆ ಅವಕಾಶ ನೀಡಿರುವುದಾಗಿ ಅಶ್ವಿನ್ ಹೇಳಿದ್ದಾರೆ. ಜಿತೇಶ್ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಗೇಮ್ ಚೇಂಜರ್ ಆಗಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೌಲಿಂಗ್‌ನಲ್ಲಿ ಆರು ಆಯ್ಕೆ ಮುಂದಿಟ್ಟ ಅಶ್ವಿನ್:
ಇನ್ನು ಯುಎಇ ಎದುರಿನ ಪಂದ್ಯಕ್ಕೆ ಅಶ್ವಿನ್ ಮೂವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಸ್ಪಿನ್ನರ್‌ಗಳ ರೂಪದಲ್ಲಿ ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿಯವರಿಗೆ ಮಣೆ ಹಾಕಿದ್ದಾರೆ. ಇನ್ನು ವೇಗದ ಬೌಲಿಂಗ್ ರೂಪದಲ್ಲಿ ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ಆಲ್ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಕ್ರಮವಾಗಿ ಆರು ಹಾಗೂ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಇನ್ನು ಎಂಟನೇ ಕ್ರಮಾಂಕದಲ್ಲಿ ವರುಣ್ ಚಕ್ರವರ್ತಿ, 9ನೇ ಕ್ರಮಾಂಕದಲ್ಲಿ ಕುಲ್ದೀಪ್ ಯಾದವ್, 10ನೇ ಕ್ರಮಾಂಕದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ 11ನೇ ಕ್ರಮಾಂಕದಲ್ಲಿ ಅರ್ಶದೀಪ್ ಸಿಂಗ್‌ಗೆ ಅಶ್ವಿನ್ ಸ್ಥಾನ ನೀಡಿದ್ದಾರೆ.
ಯುಎಇ ಎದುರಿನ ಪಂದ್ಯಕ್ಕೆ ಅಶ್ವಿನ್ ಆಯ್ಕೆ ಮಾಡಿದ ಭಾರತದ ಪ್ಲೇಯಿಂಗ್ 11 ಹೀಗಿದೆ:
ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಜಿತೇಶ್ ಶರ್ಮಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ