ಆಸ್ಟ್ರೇಲಿಯಾ ಸರಣಿಯಿಂದ ಕೈಬಿಟ್ಟಿದ್ದಕ್ಕೆ ಆಯ್ಕೆಗಾರ ಅಜಿತ್ ಅಗರ್ಕರ್ ವಿರುದ್ಧ ಮೊಹಮ್ಮದ್ ಶಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿವಾದದ ಕುರಿತು ಮಾತನಾಡಿರುವ ಆರ್. ಅಶ್ವಿನ್, ಆಟಗಾರರು ಮತ್ತು ಆಯ್ಕೆಗಾರರ ನಡುವಿನ ನೇರ ಸಂವಹನದ ಕೊರತೆಯೇ ಇಂತಹ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚೆನ್ನೈ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡಕ್ಕೆ ಆಯ್ಕೆ ಮಾಡದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ವಿರುದ್ಧ ಭಾರತದ ವೇಗಿ ಮೊಹಮ್ಮದ್ ಶಮಿ ನೀಡಿದ ಹೇಳಿಕೆಗಳನ್ನು ಮಾಜಿ ಆಟಗಾರ ಆರ್ ಅಶ್ವಿನ್ ಬೆಂಬಲಿಸಿದ್ದಾರೆ. ಆಟಗಾರರೊಂದಿಗೆ ನೇರವಾಗಿ ಸಂವಹನ ನಡೆಸದ ಕಾರಣ ಇಂತಹ ಟೀಕೆಗಳು ಉಂಟಾಗುತ್ತವೆ ಮತ್ತು ಆಟಗಾರರಿಗೆ ವಿಷಯಗಳನ್ನು ಸ್ಪಷ್ಟವಾಗಿ ಹೇಳಿದ್ದರೆ ಇದನ್ನು ತಪ್ಪಿಸಬಹುದಿತ್ತು ಎನ್ನುವ ಮೂಲಕ ಅಶ್ವಿನ್ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

ಶಮಿ ಬೆನ್ನಿಗೆ ನಿಂತ ಅಶ್ವಿನ್

ಈಗಿನ ಭಾರತೀಯ ಕ್ರಿಕೆಟ್‌ನಲ್ಲಿ ವಿಷಯಗಳನ್ನು ನೇರವಾಗಿ ಹೇಳುವ ಬದಲು ಸುತ್ತಿ ಬಳಸಿ ಹೇಳುವ ಪದ್ಧತಿ ಇದೆ. ಅದು ಬದಲಾಗಬೇಕೆಂದು ನಾನು ಬಯಸುತ್ತೇನೆ. ಇದು ಆಟಗಾರರು ಮತ್ತು ಆಯ್ಕೆಗಾರರ ಕಡೆಯಿಂದಲೂ ಬರಬೇಕಾದ ವಿಷಯ. ಪರೋಕ್ಷವಾಗಿ ಹೇಳಿದ ಹಲವು ವಿಷಯಗಳು ಬೇರೆ ರೀತಿಯಲ್ಲಿ ಹೊರಬರುತ್ತವೆ. ಆಗ ಆಟಗಾರರಿಗೆ ಆಯ್ಕೆಗಾರರನ್ನು ಸಂಪರ್ಕಿಸಿ, 'ಇದು ನನ್ನ ಮನಸ್ಸಿನಲ್ಲಿದೆ' ಎಂದು ಹೇಳಲು ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಶಮಿ ಪತ್ರಿಕಾಗೋಷ್ಠಿಯಲ್ಲಿ ಆಯ್ಕೆಗಾರರನ್ನು ಟೀಕಿಸಿದರು. ಅವನು ಯಾಕೆ ಹಾಗೆ ಮಾಡಿದ ಎಂದು ಕೇಳಿದರೆ, ಅವನನ್ನು ಯಾಕೆ ಪರಿಗಣಿಸುತ್ತಿಲ್ಲ ಎಂಬುದರ ಬಗ್ಗೆ ಅವನಿಗೆ ಸ್ಪಷ್ಟತೆ ಇಲ್ಲದಿರುವುದೇ ಕಾರಣ. ಆಯ್ಕೆಗಾರರ ವಿಷಯದಲ್ಲಿ ನನಗೆ ಇಷ್ಟವಾದ ಸಂಗತಿಯೆಂದರೆ, ಪ್ರತಿ ಬಾರಿ ತಂಡದ ಆಯ್ಕೆ ಮುಗಿದಾಗ, ಮುಖ್ಯ ಆಯ್ಕೆಗಾರ ಅಥವಾ ನಾಯಕ ಮಾಧ್ಯಮಗಳನ್ನು ಭೇಟಿಯಾಗಿ ವಿಷಯಗಳನ್ನು ವಿವರಿಸುತ್ತಾರೆ. . ಹಲವು ವಿಷಯಗಳನ್ನು ನೇರವಾಗಿ ಹೇಳದೆ, ಸುತ್ತಿ ಬಳಸಿ ಹೇಳುವುದು ನಿಜಕ್ಕೂ ಚಿಂತೆಯ ವಿಷಯ ಎಂದು ಅಶ್ವಿನ್ ಹೇಳಿದರು.

ಆಟದ ಮೂಲಕವೇ ಅಗರ್ಕರ್‌ಗೆ ಉತ್ತರ ಕೊಟ್ಟ ಶಮಿ

ಜಾರ್ಖಂಡ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಿಂದ ಏಳು ವಿಕೆಟ್ ಪಡೆದು ಬಂಗಾಳದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಮಿ, ಅಗರ್ಕರ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದರು. 'ಅಗರ್ಕರ್ ಏನು ಬೇಕಾದರೂ ಹೇಳಲಿ, ನಾನು ಫಿಟ್ ಆಗಿದ್ದೇನೆಯೇ ಇಲ್ಲವೇ ಎಂಬುದು ಈ ಪಂದ್ಯ ನೋಡಿದ ನಿಮೆಗೆಲ್ಲರಿಗೂ ಗೊತ್ತಾಗಿದೆ' ಎಂದು ಶಮಿ ಹೇಳಿದ್ದರು.

ತಂಡದಿಂದ ಕೈಬಿಟ್ಟ ಬಗ್ಗೆ ಮತ್ತು ಫಿಟ್ನೆಸ್ ಬಗ್ಗೆ ಶಮಿ ನನ್ನೊಂದಿಗೆ ಮಾತನಾಡಿದ್ದರೆ, ಆಗಲೇ ಉತ್ತರ ನೀಡುತ್ತಿದ್ದೆ ಎಂದು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಹೇಳಿದ್ದರು.

ಅದಕ್ಕೂ ಮುನ್ನ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ತಂಡಗಳನ್ನು ಪ್ರಕಟಿಸಿದ ಪತ್ರಿಕಾಗೋಷ್ಠಿಯಲ್ಲಿ ಶಮಿಯ ಫಿಟ್ನೆಸ್ ಬಗ್ಗೆ ಕೇಳಿದಾಗ, ತನಗೆ ಯಾವುದೇ ಅಪ್‌ಡೇಟ್ ಇಲ್ಲ ಎಂದು ಅಗರ್ಕರ್ ಹೇಳಿದ್ದರು. ಆದರೆ ಫಿಟ್ನೆಸ್ ಬಗ್ಗೆ ಅಪ್‌ಡೇಟ್ ಮಾಡುವುದು ನನ್ನ ಜವಾಬ್ದಾರಿಯಲ್ಲ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬಂದು ಪಂದ್ಯಗಳಿಗೆ ಸಿದ್ಧತೆ ಮಾಡಿಕೊಳ್ಳುವುದು ಮಾತ್ರ ನನ್ನ ಕೆಲಸ ಎಂದು ಶಮಿ ಆಗ ಉತ್ತರಿಸಿದ್ದರು.