ಮಹಿಳಾ ವಿಶ್ವಕಪ್ ವೇಳೆ ಇಂದೋರ್‌ನಲ್ಲಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟಿಗರಿಗೆ ಕಿರುಕುಳ ನೀಡಿದ್ದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದು, ಆತನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.
ಇಂದೋರ್: ಬಹುನಿರೀಕ್ಷಿತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯು ನಿರ್ಣಾಯಕ ಘಟ್ಟದತ್ತ ಸಾಗುತ್ತಿದೆ. ಟೂರ್ನಿಯಲ್ಲಿ ಪಾಲ್ಗೊಂಡಿದ್ದ 8 ತಂಡಗಳ ಪೈಕಿ 4 ತಂಡಗಳು ಸೆಮಿಫೈನಲ್ ಪ್ರವೇಶಿಸಿದರೆ, ಇನ್ನು ನಾಲ್ಕು ತಂಡಗಳು ಟೂರ್ನಿಯಲ್ಲಿ ಹೊರಬಿದ್ದಿವೆ. ಈ ವಿಶ್ವಕಪ್ ಟೂರ್ನಿಯು ಒಂದು ಕಡೆ ಭರ್ಜರಿಯಾಗಿ ಸಾಗುತ್ತಿದ್ದರೇ, ಮತ್ತೊಂದು ಕಡೆ, ಪೋಲಿಗಳಿಬ್ಬರು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಕಿರುಕುಳ ನೀಡಿದ್ದರು. ಇದು ದೇಶದ ಆಡಳಿತ ವ್ಯವಸ್ಥೆಯೇ ತಲೆತಗ್ಗಿಸುವಂತೆ ಮಾಡಿತ್ತು. ಇದೀಗ ಆ ಪೋಲಿಗಳ ಪೈಕಿ ಒಬ್ಬ ಆರೋಪಿಯನ್ನು ಹೆಡೆಮುರಿ ಕಟ್ಟಿರುವ ಪೊಲೀಸರು ಸರಿಯಾಗಿಯೇ ಟ್ರೀಟ್‌ಮೆಂಟ್ ನೀಡಿದ್ದಾರೆ. ಆ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಹೌದು, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಂದೋರ್‌ನ ಹೋಲ್ಕರ್ ಮೈದಾನ ಆತಿಥ್ಯ ವಹಿಸಿತ್ತು. ಆದರೆ ಈ ಪಂದ್ಯವನ್ನಾಡಲು ಇಂದೋರ್‌ಗೆ ಬಂದಿದ್ದ ಆಸ್ಟ್ರೇಲಿಯಾ ಆಟಗಾರ್ತಿಯರಿಗೆ ಇಲ್ಲಿನ ಪುಂಡರು ಕಿರುಕುಳ ನೀಡಿದ್ದರು. ಇದು ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಬಿಸಿಸಿಐ ನಿಜಕ್ಕೂ ತಲೆತಗ್ಗಿಸುವಂತೆ ಮಾಡಿತ್ತು. ಇದಷ್ಟೇ ಅಲ್ಲದೇ ಮಹಿಳೆಯರ ಸುರಕ್ಷತೆಯ ಬಗ್ಗೆ ದೇಶಾದ್ಯಂತ ಪ್ರಶ್ನೆಗಳು ಎದ್ದಿದ್ದವು.
ಆರೋಪಿ ಹೆಡೆಮುರಿ ಕಟ್ಟಿದ ಪೊಲೀಸರು
ಆಸ್ಟ್ರೇಲಿಯಾ ಆಟಗಾರ್ತಿಯರು ತಾವು ಉಳಿದುಕೊಂಡಿದ್ದ ಖಾಸಗಿ ಹೋಟೆಲ್‌ನಿಂದ ಅಲ್ಲೇ ಹತ್ತಿರದಲ್ಲೇ ಇದ್ದ ಕೆಫೆಗೆ ಬೆಳಗ್ಗೆ ನಡೆದುಕೊಂಡು ಹೋಗುತ್ತಿದ್ದಾಗ ಅಖೀಲ್ ಹಾಗೂ ಆತನ ಸಹಚರ ಬೈಕ್‌ನಲ್ಲಿ ಬಂದು ಅಡ್ಡಗಟ್ಟಿ, ಮಹಿಳಾ ಆಟಗಾರ್ತಿಯೊಬ್ಬರನ್ನು ಅನುಚಿತವಾಗಿ ಸ್ಪರ್ಷಿಸಿದ್ದು ಅಲ್ಲದೇ ಕಿರುಕುಳ ನೀಡಿದ್ದ. ಆ ಬಳಿಕ ಅಲ್ಲಿಂದ ಪರಾರಿಯಾಗಿದ್ದ. ಈ ಘಟನೆ ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ನಡೆದಿತ್ತು ಎಂದು ವರದಿಯಾಗಿತ್ತು.
ಈ ಘಟನೆಯ ಕುರಿತಂತೆ ಪೊಲೀಸರಿಗೆ ದೂರು ನೀಡಲಾಗಿತ್ತು. ತಕ್ಷಣ ಕಾರ್ಯಪ್ರೌವೃತ್ತರಾದ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಘಟನೆ ನಡೆದ ಕೇವಲ ಎರಡು ದಿನಗಳೊಳಗಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜತೆಗೆ ಕೈಕಾಲು ಮುರಿಯುವಂತೆ ವರ್ಕೌಟ್ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ರಾಜಕೀಯ ತಿರುವು ಪಡೆದುಕೊಂಡ ಪ್ರಕರಣ
ಇನ್ನು ಈ ಘಟನೆ ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಮಾತನಾಡಿದ ಮಧ್ಯಪ್ರದೇಶ ಸಚಿವ ಕೈಲಾಶ್ ವಿಜಯ್‌ವರ್ಗಿಯ, 'ದೇಶದ ಗೌರವಕ್ಕೆ ಧಕ್ಕೆ ತರುವಂತೆ ಮಾಡಿದ ಘಟನೆಯಿದು' ಎಂದು ಹೇಳಿದ್ದರು. ಇನ್ನು ಬಿಜೆಪಿ ಶಾಸಕ ರಾಮೇಶ್ವರ್ ಶರ್ಮಾ ಈ ಬಗ್ಗೆ ಮಾತನಾಡಿ, 'ಈ ಘಟನೆ ಇಡೀ ಇಂದೋರ್ ತಲೆತಗ್ಗಿಸುವಂತೆ ಮಾಡಿದೆ. ಅದು ಆಸ್ಟ್ರೇಲಿಯಾದ ಮಗಳೇ ಆಗಿರಲಿ ಅಥವಾ ಇಂಗ್ಲೆಂಡ್‌ನ ಹೆಣ್ಣುಮಗಳೇ ಆಗಿರಲಿ. ಅವರ ಸುರಕ್ಷತೆ ನಮ್ಮ ಜವಾಬ್ದಾರಿಯಾಗಿದೆ. ಈ ಘಟನೆಯ ಕುರಿತಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದರು.
