ಐಸಿಸಿ ಮಹಿಳಾ ವಿಶ್ವಕಪ್‌ನ ರೋಚಕ ಪಂದ್ಯದಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶ ವಿರುದ್ಧ 7 ರನ್‌ಗಳ ಜಯ ಸಾಧಿಸಿದೆ. ಗೆಲುವಿನ ಸನಿಹದಲ್ಲಿದ್ದ ಬಾಂಗ್ಲಾ, ಕೊನೆಯ ಓವರ್‌ನಲ್ಲಿ 4 ವಿಕೆಟ್ ಕಳೆದುಕೊಂಡು ವೀರೋಚಿತ ಸೋಲು ಅನುಭವಿಸಿತು. 

ಕೊಲಂಬೊ: ಗೆಲುವಿನ ಸನಿಹದಲ್ಲಿ ಎಡವಿದ ಬಾಂಗ್ಲಾದೇಶ ತಂಡ, ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಸೋಮವಾರ ಶ್ರೀಲಂಕಾ ವಿರುದ್ಧ 7 ರನ್ ಗಳ ವೀರೋಚಿತ ಸೋಲು ಕಂಡಿದೆ. ಇದರೊಂದಿಗೆ ಲಂಕಾ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದರೆ, ಬಾಂಗ್ಲಾ 5 ಸೋಲಿನೊಂದಿಗೆ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ.

ಕೊನೆಯ ಓವರ್‌ನಲ್ಲಿ ಲಂಕಾಗೆ ರೋಚಕ ಜಯ

ಮೊದಲು ಬ್ಯಾಟ್ ಮಾಡಿದ ಲಂಕಾ 48.4 ಓವರ್‌ಗಳಲ್ಲಿ 202 ರನ್‌ಗೆ ಆಲೌಟಾಯಿತು. ಹಸಿನಿ ಪೆರೆರಾ 85, ನಾಯಕಿ ಚಾಮರಿ ಅಟ್ಟಪಟ್ಟು 46, ನಿಲಾಕ್ಷಿ ಸಿಲ್ವಾ 37 ರನ್ ಗಳಿಸಿದರು. ಬಾಂಗ್ಲಾ ಪರ ಶೋರ್ನಾ ಅಖ್ತರ್ 10 ಓವರಲ್ಲಿ 27 ರನ್‌ಗೆ 3 ವಿಕೆಟ್ ಕಿತ್ತರು. ಸುಲಭ ಗುರಿ ಸಿಕ್ಕರೂ ಬಾಂಗ್ಲಾ ಬ್ಯಾಟರ್ ಗಳು ವಿಫಲರಾದರು. ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 195 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೊನೆ ಓವರ್‌ನಲ್ಲಿ 9 ರನ್ ಬೇಕಿದ್ದಾಗ ಆರಂಭಿಕ 4 ಎಸೆತಗಳಲ್ಲಿ 4 ವಿಕೆಟ್ ಕಳೆದುಕೊಂಡಿತು. ಈ ಓವರ್‌ನಲ್ಲಿ ಬಾಂಗ್ಲಾದೇಶ ತಂಡ ಕೇವಲ 1 ರನ್ ಗಳಿಸಿತು. ಶರ್ಮಿನ್ ಅಖ್ತರ್ ಔಟಾಗದೆ 64, ನಾಯಕಿ ನಿಗಾರ್ ಸುಲ್ತಾನ 77 ರನ್ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಕೊನೆಯ ಎರಡು ಓವರ್‌ನಲ್ಲಿ ಬಾಂಗ್ಲಾದೇಶ ಗೆಲ್ಲಲು 12 ಎಸೆತಗಳಲ್ಲಿ 12 ರನ್ ಅಗತ್ಯವಿತ್ತು. ಇದರ ಜತೆಗೆ ಆರು ವಿಕೆಟ್‌ಗಳು ಕೈಯಲ್ಲಿದ್ದವು. 49ನೇ ಓವರ್ ಬೌಲಿಂಗ್ ಮಾಡಿದ ಸುಗಂಧಿಕಾ ಕುಮಾರಿ ಕೇವಲ 3 ರನ್ ನೀಡಿ ಒಂದು ವಿಕೆಟ್ ಪಡೆದರು. ಇನ್ನು ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತುಕೊಂಡ ನಾಯಕಿ ಚಾಮಾರಿ ಅಟಪಟ್ಟು 9 ರನ್ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ವನಿತಾ ವಿಶ್ವಕಪ್: ಇಂದು ದ.ಆಫ್ರಿಕಾ vs ಪಾಕಿಸ್ತಾನ ಫೈಟ್

ಕೊಲಂಬೊ: ಈ ಬಾರಿ ಮಹಿಳಾ ವಿಶ್ವಕಪ್‌ನಲ್ಲಿ ಈಗಾಗಲೇ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿರುವ ದಕ್ಷಿಣ ಆಫ್ರಿಕಾ, ಮಂಗಳವಾರ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಅಗ್ರ-2 ಸ್ಥಾನದ ಮೇಲೆ ಕಣ್ಣಿಟ್ಟಿರುವ ಹರಿಣ ಪಡೆಗೆ ಪಾಕಿಸ್ತಾನ ಸುಲಭ ತುತ್ತಾಗುವ ಸಾಧ್ಯತೆಯಿದೆ.

ಈವರೆಗೆ ಒಮ್ಮೆಯೂ ಏಕದಿನ ವಿಶ್ವಕಪ್ ನಲ್ಲಿ ಫೈನಲ್‌ಗೇರದ ದ.ಆಫ್ರಿಕಾ, ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಆಡಿರುವ 5 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿದ್ದು, 8 ಅಂಕಗಳೊಂದಿಗೆ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ವಿರುದ್ಧ ಆರಂಭಿಕ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ತಂಡ, ಬಳಿಕ ಸತತ 4ರಲ್ಲೂ ಜಯಭೇರಿ ಬಾರಿಸಿದೆ.

ಮತ್ತೊಂದೆಡೆ ಪಾಕ್ ತಂಡ ಈ ಬಾರಿ ಟೂರ್ನಿಯಲ್ಲಿ 5 ಪಂದ್ಯ ಗಳನ್ನಾಡಿದ್ದು, ಒಂದರಲ್ಲೂ ಗೆದ್ದಿಲ್ಲ. 3ರಲ್ಲಿ ಸೋತಿದ್ದರೆ, 2 ಪಂದ್ಯಗಳು ಮಳೆಗೆ ರದ್ದಾಗಿದೆ. ತೀರಾ ಕಳಪೆ ಪ್ರದರ್ಶನ ನೀಡುತ್ತಿರುವ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಸುಧಾರಿತ ಆಟವಾಡಲು ಕಾಯುತ್ತಿದೆ. ಇನ್ನು ಪಂದ್ಯದಲ್ಲೂ ಪಾಕಿಸ್ತಾನ ತಂಡವು ಸೋತರೇ, ಅಧಿಕೃತವಾಗಿ ಸೆಮಿಫೈನಲ್ ರೇಸ್‌ನಿಂದ ಹೊರಬೀಳಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 3 ಗಂಟೆಗೆ