ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್, ಎಂ.ಎಸ್. ಧೋನಿ ಭಾರತೀಯ ಕ್ರಿಕೆಟ್ ತಂಡವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇರ್ಫಾನ್ ಪಠಾಣ್ ಅವರನ್ನು ತಂಡದಿಂದ ಹೊರಗಿಟ್ಟಿದ್ದನ್ನು ಉಲ್ಲೇಖಿಸಿ, ಗಂಭೀರ್, ಸೆಹ್ವಾಗ್ ಮತ್ತು ಹರ್ಭಜನ್ ಸಿಂಗ್ ಅವರನ್ನೂ ಇದೇ ರೀತಿ ಹೊರಹಾಕಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಸದ್ಯ ಸುದ್ದಿಯಲ್ಲಿದ್ದಾರೆ. ಮಾಜಿ ಆಟಗಾರ ಇರ್ಫಾನ್ ಪಠಾಣ್ ಅವರ 5 ವರ್ಷ ಹಳೆಯ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಅದರಲ್ಲಿ ಅವರು ತಮ್ಮನ್ನು ತಂಡದಿಂದ ಹೊರಗಿಟ್ಟ ಕುರಿತಂತೆ ಮಾತನಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಈ ಹೇಳಿಕೆ ವೈರಲ್ ಆಗಿದ್ದು, ಈ ನಡುವೆ ಮಾಜಿ ಕ್ರಿಕೆಟಿಗ ಹಾಗೂ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಕೂಡ ಧೋನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಧೋನಿ ವಿರುದ್ಧ ಯೋಗರಾಜ್ ಸಿಂಗ್ ಹೇಳಿದ್ದೇನು?
ಯೋಗರಾಜ್ ಸಿಂಗ್ ಇತ್ತೀಚಿನ ಸಂದರ್ಶನವೊಂದರಲ್ಲಿ ಎಂ ಎಸ್ ಧೋನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಕೇವಲ ಇರ್ಫಾನ್ ಪಠಾಣ್ ಅವರ ಕಥೆಯಲ್ಲ, ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಕೂಡ ತಮ್ಮನ್ನು ತಂಡದಿಂದ ಹೊರಹಾಕಲಾಗಿದೆ ಎಂದು ಹೇಳಿದ್ದಾರೆ. ಧೋನಿ ಮೇಲೆ ಒಂದು ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಎಂ ಎಸ್ ಧೋನಿ ಭಾರತ ಕ್ರಿಕೆಟ್ ತಂಡವನ್ನು ಹಾಳು ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ ಯೋಗರಾಜ್ ಸಿಂಗ್. ಧೋನಿ ಯಾಕೆ ಹೀಗೆ ಮಾಡಿದರು ಎಂದು ಕೇಳಿದರೆ ಅವರು ಉತ್ತರಿಸುವುದಿಲ್ಲ. ಯಾಕೆಂದರೆ ಯಾರಿಗೆ ತಪ್ಪಿತಸ್ಥ ಭಾವನೆ ಇರುತ್ತದೋ ಅವರು ಉತ್ತರಿಸಲು ಬಯಸುವುದಿಲ್ಲ ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.
ಕೆಲದಿನಗಳ ಹಿಂದೆ ಪಾಡ್‌ಕಾಸ್ಟ್‌ನಲ್ಲಿ ತಾವು ಉತ್ತಮ ಫಾರ್ಮ್‌ನಲ್ಲಿ ಇದ್ದ ಹೊರತಾಗಿಯೂ ಧೋನಿ ತಮ್ಮನ್ನು ತಂಡದಿಂದ ಹೊರಗಿಟ್ಟರು ಎಂದು ಇರ್ಫಾನ್ ಪಠಾಣ್ ಹೇಳಿದ್ದರು. ಇದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇರ್ಫಾನ್ ಪಠಾಣ್‌ಗೆ ಯುವಿ ತಂದೆ ಧ್ವನಿಗೂಡಿಸಿದ್ದಾರೆ.
ಧೋನಿ ವಿರುದ್ಧ ವಿವಾದ ಹೇಗೆ ಪ್ರಾರಂಭವಾಯಿತು?
ಇರ್ಫಾನ್ ಪಠಾಣ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ತಮ್ಮ ತಂಡದ ಆಯ್ಕೆಯ ಬಗ್ಗೆ ಮಾತನಾಡಿದ್ದಾರೆ.
ಇರ್ಫಾನ್ ಪಠಾಣ್ 2012ರ ಬಳಿಕ ಮತ್ತೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಕುರಿತಂತೆ 2020ರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇರ್ಫಾನ್ ಪಠಾಣ್, ಯಾರಿಗೂ ನಾನು ಹುಕ್ಕಾ ವ್ಯವಸ್ಥೆ ಮಾಡಿದ ಅನುಭವವಿಲ್ಲ ಎಂದು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು.
ಒಂದು ಟ್ವೀಟ್‌ನಲ್ಲಿ, ಅವರು ಅಭಿಮಾನಿಗಳಿಗೆ ಉತ್ತರಿಸುತ್ತಾ, ಧೋನಿ ಮತ್ತು ಅವರು ಒಟ್ಟಿಗೆ ಕುಳಿತು ಹುಕ್ಕಾ ಸೇದುತ್ತಾರೆ ಎಂದು ಹೇಳಿದರು. ಇದು ಬೆಂಕಿಗೆ ತುಪ್ಪ ಸುರಿಯುವಂತೆ ಮಾಡಿತ್ತು. ಆದರೆ ಅವರು ಎಂದರೆ ಯಾರು ಎನ್ನುವುದನ್ನು ಪಠಾಣ್ ಸ್ಪಷ್ಟನೆ ನೀಡಿರಲಿಲ್ಲ. ಇನ್ನು ಇರ್ಫಾನ್ ಪಠಾಣ್ ಅವರ ಬಗ್ಗೆಯಾಗಲಿ ಅಥವಾ ಯೋಗರಾಜ್ ಸಿಂಗ್ ಆರೋಪಗಳ ಕುರಿತಾಗಲಿ ಎಂ ಎಸ್ ಧೋನಿ ಇದುವರೆಗೂ ತುಟಿಬಿಚ್ಚಿಲ್ಲ.
ಕಪಿಲ್ ದೇವ್, ಬಿಷನ್ ಸಿಂಗ್ ಬೇಡಿ ಮೇಲೂ ಯೋಗರಾಜ್ ಟೀಕೆ:
ಧೋನಿಯಂತೆ ಟೀಂ ಇಂಡಿಯಾ ನಾಯಕರಾಗಿದ್ದ ಕಪಿಲ್ ದೇವ್ ಹಾಗೂ ಬಿಷನ್ ಸಿಂಗ್ ಬೇಡಿ ಅವರು ಕೂಡಾ ಸಹ ಆಟಗಾರರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಯೋಗರಾಜ್ ಸಿಂಗ್ ಟೀಕಿಸಿದ್ದಾರೆ. ನಮ್ಮ ನಾಯಕರೇ ನಮ್ಮ ಕ್ರಿಕೆಟಿಗರನ್ನು ಹಾಗೂ ತಂಡವನ್ನು ಹಾಳು ಮಾಡಿದರು. ತಪ್ಪು ಯಾವತ್ತಿದ್ದರೂ ತಪ್ಪೇ, ನಮ್ಮ ಕ್ಯಾಪ್ಟನ್ಸ್, ನಮ್ಮ ಟೀಮ್ ಹಾಳು ಮಾಡಿದರು ಎನ್ನುವುದನ್ನು ಯಾವುದೇ ಅಳುಕಿಲ್ಲದೇ ಬಹಿರಂಗವಾಗಿ ಹೇಳುತ್ತೇನೆ ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.
