ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌ ತಂಡ ಶಿವಮೊಗ್ಗ ಲಯನ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಕ್ವಾಲಿಫೈಯರ್‌-1ಕ್ಕೆ ಲಗ್ಗೆ ಇಟ್ಟಿದೆ. ಮಂಗಳೂರು ಡ್ರ್ಯಾಗನ್ಸ್‌ ಕೂಡ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ ಗೆದ್ದು ಅಗ್ರ-2 ಸ್ಥಾನ ಭದ್ರಪಡಿಸಿಕೊಂಡಿದೆ. 

ಮೈಸೂರು: ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಲೀಗ್‌ ಹಂತದ ಪಂದ್ಯಗಳಿಗೆ ತೆರೆ ಬಿದ್ದಿದೆ. ಬುಧವಾರ ಲೀಗ್‌ನ 2 ಕೊನೆ ಪಂದ್ಯಗಳು ನಡೆದಿದ್ದು, ಪ್ಲೇ-ಆಫ್‌ ಪಂದ್ಯಗಳು ಗುರುವಾರ ಆರಂಭಗೊಳ್ಳಲಿವೆ.

ಲೀಗ್‌ ಹಂತ ಮುಕ್ತಾಯಕ್ಕೆ ಮಂಗಳೂರು ಡ್ರ್ಯಾಗನ್ಸ್‌(15 ಅಂಕ) ಹಾಗೂ ಹುಬ್ಬಳ್ಳಿ ಟೈಗರ್ಸ್‌(14 ಅಂಕ) ಅಗ್ರ-2 ಸ್ಥಾನಗಳನ್ನು ಪಡೆದು ಕ್ವಾಲಿಫೈಯರ್‌-1ಕ್ಕೆ ಅರ್ಹತೆ ಪಡೆದುಕೊಂಡಿತು. ಇದರಲ್ಲಿ ಗೆದ್ದ ತಂಡಕ್ಕೆ ನೇರವಾಗಿ ಫೈನಲ್‌ಗೇರುವ ಅವಕಾಶ ಸಿಗಲಿದೆ. ಗುಲ್ಬರ್ಗ ಮಿಸ್ಟಿಕ್ಸ್‌(12 ಅಂಕ) ಹಾಗೂ ಬೆಂಗಳೂರು ಬ್ಲಾಸ್ಟರ್ಸ್‌(10 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನಿಯಾಗಿದ್ದು, ಎಲಿಮಿನೇಟರ್‌ನಲ್ಲಿ ಪರಸ್ಪರ ಆಡಲಿದೆ. ಈ ಎರಡೂ ಪಂದ್ಯಗಳು ಮಂಗಳವಾರ ನಡೆಯಲಿವೆ.

ನಾಳೆ ಕ್ವಾಲಿಫೈಯರ್‌-2:

ಟೂರ್ನಿಯ ಕ್ವಾಲಿಫೈಯರ್‌-2 ಪಂದ್ಯ ಬುಧವಾರ ನಡೆಯಬೇಕಿದೆ. ಕ್ವಾಲಿಫೈಯರ್‌-1ರಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್‌ನಲ್ಲಿ ಗೆದ್ದ ತಂಡಗಳು ಇದರಲ್ಲಿ ಆಡಲಿವೆ. ಗೆದ್ದ ತಂಡ ಫೈನಲ್‌ ಪ್ರವೇಶಿಸಲಿದೆ. ಫೈನಲ್‌ ಪಂದ್ಯ ಆ.28ರಂದು ನಡೆಯಲಿದೆ.

ಹುಬ್ಬಳ್ಳಿ ಅಬ್ಬರಕ್ಕೆ ಶಿವಮೊಗ್ಗ ತತ್ತರ

ಮೈಸೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಲೀಗ್‌ ಹಂತದ ತನ್ನ ಕೊನೆ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ ಅಬ್ಬರಿಸಿ ಬೊಬ್ಬಿರಿಸಿದೆ. ಸೋಮವಾರ ಶಿವಮೊಗ್ಗ ಲಯನ್ಸ್‌ ವಿರುದ್ಧ ಪಂದ್ಯದಲ್ಲಿ ಹುಬ್ಬಳ್ಳಿ 105 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ತಂಡ 7ನೇ ಗೆಲುವಿನೊಂದಿಗೆ ಅಂಕಪಟ್ಟಿಯ ಅಗ್ರ-2ರಲ್ಲಿ ಸ್ಥಾನ ಪಡೆದು, ಕ್ವಾಲಿಫೈಯರ್‌-1ಕ್ಕೆ ಅರ್ಹತೆ ಗಿಟ್ಟಿಸಿಕೊಂಡಿತು. ಶಿವಮೊಗ್ಗ 10ರಲ್ಲಿ 8ನೇ ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿತು.

ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ 3 ವಿಕೆಟ್‌ಗೆ 195 ರನ್‌ ಕಲೆಹಾಕಿತು. ದೇವದತ್‌ ಪಡಿಕ್ಕಲ್‌ 15 ಎಸೆತಕ್ಕೆ 33 ರನ್‌ ಗಳಿಸಿ ಔಟಾದರೆ, ಮೊಹಮ್ಮದ್‌ ತಾಹ(15 ಎಸೆತಕ್ಕೆ 8 ರನ್‌) ನಿರಾಸೆ ಅನುಭವಿಸಿದರು. ಆದರೆ ಕೃಷ್ಣನ್‌ ಶ್ರೀಜಿತ್‌ ಹಾಗೂ ಅಭಿನವ್‌ ಮನೋಹರ್‌ ತಂಡಕ್ಕೆ ದೊಡ್ಡ ಮೊತ್ತ ಕಲೆಹಾಕಲು ನೆರವಾದರು. ಶ್ರೀಜಿತ್‌ 40 ಎಸೆತಕ್ಕೆ 2 ಬೌಂಡರಿ, 6 ಸಿಕ್ಸರ್‌ನೊಂದಿಗೆ ಔಟಾಗದೆ 66 ರನ್‌ ಸಿಡಿಸಿದರೆ, ಅಭಿನವ್‌ 35 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ನೊಂದಿಗೆ ಔಟಾಗದೆ 63 ರನ್‌ ಚಚ್ಚಿದರು. ಈ ಜೋಡಿ ಮುರಿಯದ 4ನೇ ವಿಕೆಟ್‌ಗೆ 126 ರನ್‌ ಸೇರಿಸಿತು.

ದೊಡ್ಡ ಗುರಿ ನೋಡಿಗೆ ಕಂಗಾಲಾದ ಶಿವಮೊಗ್ಗ 15.5 ಓವರ್‌ಗಳಲ್ಲಿ ಕೇವಲ 90 ರನ್‌ಗೆ ಆಲೌಟಾಯಿತು. ಧ್ರುವ್‌ ಪ್ರಭಾಕರ್‌(29) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರು. ಯಶ್‌ ರಾಜ್‌ ಪೂಂಜ 3 ವಿಕೆಟ್‌ ಕಿತ್ತರು.

ಮಂಗ್ಳೂರಿಗೆ ಭರ್ಜರಿ ಗೆಲುವಿನ ಸಿಹಿ

2ನೇ ಪಂದ್ಯದಲ್ಲಿ ಗುಲ್ಬರ್ಗ ವಿರುದ್ಧ ಮಂಗಳೂರು 39 ರನ್‌ಗಳಲ್ಲಿ ಗೆದ್ದಿತು. ಮಂಗಳೂರು 6 ವಿಕೆಟ್‌ಗೆ 180 ರನ್‌ ಗಳಿಸಿತು. ಶಿವರಾಜ್‌ 22 ಎಸೆತಕ್ಕೆ ಔಟಾಗದೆ 46 ರನ್‌ ಸಿಡಿಸಿದರು. ಗುಲ್ಬರ್ಗ 9 ವಿಕೆಟ್‌ಗೆ 141 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.