ಏಕದಿನ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡದ ಸೆಮಿಫೈನಲ್ ಹಾದಿ ಕಠಿಣವಾಗಿದೆ. ಸೆಮೀಸ್ ರೇಸ್‌ನಲ್ಲಿ ಉಳಿಯಲು, ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಅಜೇಯ ಇಂಗ್ಲೆಂಡ್ ತಂಡವನ್ನು ಸೋಲಿಸಲೇಬೇಕಾದ ಒತ್ತಡದಲ್ಲಿದೆ. ಆರನೇ ಬೌಲರ್ ಕೊರತೆ ಹಾಗೂ ಎಡಗೈ ಸ್ಪಿನ್ನರ್‌ಗಳ ಎದುರಿನ ದೌರ್ಬಲ್ಯ ತಂಡಕ್ಕೆ ದೊಡ್ಡ ಸವಾಲಾಗಿದೆ.
ಇಂದೋರ್: ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ನಿರೀಕ್ಷೆಗೆ ತಕ್ಕಂತೆ ಆಡಲು ವಿಫಲವಾಗಿದೆ. ಆಡಿರುವ 4 ಪಂದ್ಯಗಳಿಂದ ಕೇವಲ 4 ಅಂಕ ಗಳಿಸಿರುವ ಭಾರತ, ಸೆಮಿಫೈನಲ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಭಾನುವಾರ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಗೆಲ್ಲಬೇಕಿದೆ. ದ.ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧ ಸೋತಂತೆ ಈ ಪಂದ್ಯದಲ್ಲೂ ಸೋತರೆ, ಕೊನೆ 2 ಪಂದ್ಯಗಳು ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಲಿವೆ.
ಭಾರತಕ್ಕೆ ಕಾಡುತ್ತಿದೆ ಆರನೇ ಬೌಲರ್ ಸಮಸ್ಯೆ
ಭಾರತ ತಂಡ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, 6ನೇ ಬೌಲರ್‌ಗಳ ಕೊರತೆ ಪ್ರಮುಖ ಸಮಸ್ಯೆ ಎನಿಸಿದೆ. ಆದರೂ, ಭಾರತ ಕೇವಲ ಐವರು ಬೌಲರ್‌ಗಳೊಂದಿಗೇ ಈ ಪಂದ್ಯವನ್ನೂ ಆಡುವ ಸಾಧ್ಯತೆ ಹೆಚ್ಚು. ಅವಶ್ಯಕತೆ ಬಿದ್ದರೆ ಹರ್ಮನ್ ಪ್ರೀತ್ ಕೆಲ ಓವರ್ ಬೌಲ್ ಮಾಡಲಿದ್ದಾರೆ. ಆದರೆ, ಅಮನ್‌ಜೋನ್ ಕೌರ್ ಬದಲು ರೇಣುಕಾ ಸಿಂಗ್ ಆಡಬಹುದು.
ಇನ್ನು, ಭಾರತ ಈ ಟೂರ್ನಿಯಲ್ಲಿ ಎಡಗೈ ಸ್ಪಿನ್ನರ್‌ಗಳ ಎದುರು 15 ವಿಕೆಟ್ ಕಳೆದುಕೊಂಡಿದೆ. ಇಂಗ್ಲೆಂಡ್ ತಂಡದಲ್ಲಿ ಇಬ್ಬರು ಎಡಗೈ ಸ್ಪಿನ್ನರ್‌ಗಳಿದ್ದು, ಈ ಪೈಕಿ ಸೋಫಿ ಎಕ್ಲಸ್ಟೋನ್ ಅತ್ಯಂತ ಅಪಾಯಕಾರಿ ಬೌಲರ್. ಹೀಗಾಗಿ, ಭಾರತೀಯ ಬ್ಯಾಟರ್‌ಗಳು ಎಚ್ಚರಿಕೆಯಿಂದ ಆಡಬೇಕಿದೆ. ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್ ಹಾಗೂ ಇಂಗ್ಲೆಂಡ್ ನಾಯಕಿ ನಥಾಲಿ ಸ್ಟೀವರ್ ಬ್ರಂಟ್ ಇಬ್ಬರೂ ಡಬ್ಲ್ಯುಪಿಎಲ್‌ನಲ್ಲಿ ಮುಂಬೈ ತಂಡದಲ್ಲಿ ಆಡುತ್ತಾರೆ. ಇನ್ನು ಇಂಗ್ಲೆಂಡ್‌ನ ಹಾಲಿ ಕೋಚ್ ಕ್ಯಾರೊಲೆ ಎಡ್ವರ್ಡ್ಸ್ 3 ವರ್ಷ ಮುಂಬೈ ಕೋಚ್ ಆಗಿದ್ದವರು. ಇಂಗ್ಲೆಂಡ್‌ನ ಸಹಾಯಕ ಕೋಚ್ ಲ್ಯೂಕ್ ವಿಲಿಯಮ್ಸ್, ಆರ್‌ಸಿಬಿ ಮಹಿಳಾ ತಂಡದ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಇನ್ನು, ಟೂರ್ನಿಯಲ್ಲಿ ಇಂಗ್ಲೆಂಡ್ ಅಜೇಯವಾಗಿ ಉಳಿದಿದ್ದು ಪಂದ್ಯದಲ್ಲಿ ಗೆಲ್ಲುವ ಮೂಲಕ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಎದುರು ನೋಡುತ್ತಿದೆ.
ಉಭಯ ತಂಡಗಳ ಆಟಗಾರ್ತಿಯರ ಪಟ್ಟಿ:
ಭಾರತ: ಸ್ಮೃತಿ ಮಂಧನಾ, ಪ್ರತಿಕಾ ರಾವಲ್, ಹರ್ಲಿನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ಜೆಮಿಯಾ ರೋಡ್ರಿಗ್ಸ್, ರಿಚಾ ಘೋಷ್(ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಸ್ನೆಹ್ ರಾಣಾ, ಅಮನ್‌ಜೋತ್ ಕೌರ್/ಕ್ರಾಂತಿ ಗೌಡ್, ಶ್ರೀ ಚಾರಿಣಿ, ರೇಣುಕಾ ಠಾಕೂರ್.
ಇಂಗ್ಲೆಂಡ್: ಟಾಮಿ ಬಿಯೂಮೂಟ್, ಆಮಿ ಜೋನ್ಸ್(ವಿಕೆಟ್ ಕೀಪರ್), ಹೀಥರ್ ನೈಟ್, ನಥಾಲಿ ಸ್ಕೀವರ್ ಬ್ರಂಟ್, ಸೋಫಿಯಾ ಡಂಕ್ಲಿ, ಎಮ್ಮಾ ಲ್ಯಾಂಬ್, ಅಲಿಸ್ ಕ್ಯಾಪ್ಸಿ, ಚಾರ್ಲೆಟ್ಟೇ ಡೀನ್, ಸೋಫಿ ಎಕ್ಲೆಸ್ಟೋನ್,ಲಿನ್ಸೇ ಸ್ಮಿತ್, ಲೌರೆನ್ ಬೆಲ್.
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಹಾಟ್‌ಸ್ಟಾರ್
ಪಾಕ್-ನ್ಯೂಜಿಲೆಂಡ್ ಮಹಿಳಾ ವಿಶ್ವಕಪ್ ಪಂದ್ಯ ಮಳೆಗೆ ಬಲಿ
ಕೊಲಂಬೊ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಶನಿವಾರ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾಯಿತು. ಪರಿಣಾಮ ದಕ್ಷಿಣ ಆಫ್ರಿಕಾ 2ನೇ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.
ಶನಿವಾರ ಭಾರೀ ಮಳೆಯಿಂದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ 2 ಬಾರಿ ಸ್ಥಗಿತಗೊಂಡಿತು. ಪಂದ್ಯ ರದ್ದಾದಾಗ ಪಾಕ್‌ನ ಸ್ಕೋರ್ 25 ಓವರಲ್ಲಿ 5 ವಿಕೆಟ್‌ಗೆ 92 ರನ್ ಆಗಿತ್ತು. ಉಭಯ ತಂಡಗಳಿಗೆ ತಲಾ 1 ಅಂಕ ನೀಡಲಾಗಿದ್ದು, ನ್ಯೂಜಿಲೆಂಡ್ 5ನೇ ಸ್ಥಾನದಲ್ಲೇ ಉಳಿದಿದೆ. ಒಂದೂ ಗೆಲುವು ಕಾಣದ ಪಾಕಿಸ್ತಾನ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ.
ಈಗಾಗಲೇ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದು, ಇನ್ನೆರಡು ಸ್ಥಾನಕ್ಕೆ ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ನಡುವೆ ಪೈಪೋಟಿಯಿದೆ.
