ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಸ್ಥಾನಕ್ಕಾಗಿ ಭಾರತ ಇಂದು ನವಿ ಮುಂಬೈನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಬಲಿಷ್ಠ ಕಾಂಗರೂ ಪಡೆಯ ಜೊತೆಗೆ ಮಳೆಯೂ ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಯಿದ್ದು, ಮೀಸಲು ದಿನದ ನಿಯಮಗಳು ಕುತೂಹಲ ಕೆರಳಿಸಿವೆ.
ನವಿ ಮುಂಬೈ: ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸ್ಥಾನ ಪಡೆಯಲು ಭಾರತ ಇಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುತ್ತಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ. ಇಂದು ಗೆದ್ದವರು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದಾರೆ. ತವರಿನಲ್ಲಿ ನಡೆಯುತ್ತಿರುವ ಈ ವಿಶ್ವಕಪ್ ಪಂದ್ಯದಲ್ಲಿ ಭಾರತದ ಹಾದಿ ಸುಲಭವಾಗಿರಲಿಲ್ಲ. ಏಳು ಪಂದ್ಯಗಳಲ್ಲಿ ಮೂರು ಜಯ ಮತ್ತು ಮೂರು ಸೋಲು ಕಂಡಿದೆ. ಗುಂಪು ಹಂತದಲ್ಲಿ ಭಾರತವನ್ನು ಸೋಲಿಸಿದ ತಂಡಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದು. 330 ರನ್ ಗಳಿಸಿದ ನಂತರವೂ ಭಾರತ ತಂಡವನ್ನು ಕಾಂಗರೂ ಪಡೆ ಸೋಲಿಸಿತ್ತು.
ಇಂದು ಪಂದ್ಯ ನಡೆಯೋದೇ ಡೌಟ್!
ಆದರೆ ಭಾರತವು ಆಸ್ಟ್ರೇಲಿಯಾವನ್ನು ಮಾತ್ರವಲ್ಲ, ಮಳೆಯನ್ನೂ ಎದುರಿಸಬೇಕಾಗಿದೆ. ಈ ವಾರ ಪೂರ್ತಿ ನವಿ ಮುಂಬೈನಲ್ಲಿ ಮಳೆಯಾಗಿತ್ತು. ಇಂದೂ ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಗ್ಗಿನಿಂದಲೇ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಆಕಾಶ ಮೋಡ ಕವಿದಿರುತ್ತದೆ. ಮಧ್ಯಾಹ್ನದ ನಂತರ ಆಕಾಶ ತಿಳಿಯಾಗುವ ನಿರೀಕ್ಷೆಯಿದ್ದರೂ, ಆಗಾಗ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಇದು ಪಂದ್ಯದ ಮೇಲೂ ಪರಿಣಾಮ ಬೀರಲಿದೆ. ಮೋಡ ಕವಿದ ವಾತಾವರಣ ಬೌಲರ್‌ಗಳಿಗೆ ಸಹಾಯ ಮಾಡಬಹುದು. ಹಾಗಾಗಿ ಟಾಸ್ ನಿರ್ಣಾಯಕವಾಗಲಿದೆ.
ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಏನಾಗುತ್ತದೆ?
ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ. ಇಂದು ಮಳೆಯಿಂದ ಪಂದ್ಯ ನಿಂತರೆ ನಾಳೆ ಪುನರಾರಂಭವಾಗಲಿದೆ. ಎಲ್ಲಾ ನಾಕೌಟ್ ಪಂದ್ಯಗಳಿಗೂ ಐಸಿಸಿ ಮೀಸಲು ದಿನಗಳನ್ನು ನಿಗದಿಪಡಿಸಿದೆ. ಮೀಸಲು ದಿನದಂದೂ ಹವಾಮಾನ ಅನುಕೂಲಕರವಾಗಿಲ್ಲದಿದ್ದರೆ, ಆಸ್ಟ್ರೇಲಿಯಾ ಫೈನಲ್‌ಗೆ ಪ್ರವೇಶಿಸುತ್ತದೆ. ಲೀಗ್ ಸುತ್ತಿನಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ತಂಡವನ್ನು ಫೈನಲ್‌ಗೆ ಕಳುಹಿಸಲಾಗುತ್ತದೆ. ಲೀಗ್ ಹಂತದ ಪಂದ್ಯಗಳು ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಭಾರತ ನಾಲ್ಕನೇ ಸ್ಥಾನದಲ್ಲಿತ್ತು.
ಆರಂಭಿಕ ವೈಫಲ್ಯಗಳ ನಂತರ ಸೂಪರ್ ಸ್ಟಾರ್ ಸ್ಮೃತಿ ಮಂಧಾನ ಫಾರ್ಮ್‌ಗೆ ಮರಳಿರುವುದು ಭಾರತಕ್ಕೆ ಸಮಾಧಾನ ತಂದಿದೆ. ಏಳು ಪಂದ್ಯಗಳಿಂದ 365 ರನ್ ಗಳಿಸಿದ್ದಾರೆ. ಸ್ಮೃತಿ ಅಬ್ಬರಿಸಿದರೆ ಭಾರತಕ್ಕೆ ಗೆಲುವು ಸುಲಭ. ಗಾಯಗೊಂಡಿರುವ ಪ್ರತೀಕಾ ರಾವಲ್ ಬದಲಿಗೆ ಶಫಾಲಿ ವರ್ಮಾ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ. ಶಫಾಲಿ ಸರ್ಪ್ರೈಸ್ ಹಿಟ್ ಆಗುವ ನಿರೀಕ್ಷೆಯಿದೆ. ನಾಯಕಿ ಹರ್ಮನ್‌ಪ್ರೀತ್ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದರೆ, ಜೆಮಿಮಾ ಮತ್ತು ಹರ್ಲೀನ್ ಡಿಯೋಲ್ ಮೇಲೆ ದೊಡ್ಡ ಹೊಡೆತಗಳನ್ನು ಬಾರಿಸಬೇಕಾದ ಜವಾಬ್ದಾರಿ ಇದೆ. ಮೊದಲು ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತ ಕಲೆಹಾಕುವುದೇ ತಂಡದ ಗುರಿಯಾಗಿದೆ. ಬೌಲಿಂಗ್‌ನಲ್ಲಿ ದೀಪ್ತಿ ಶರ್ಮಾ, ಶ್ರೀ ಚರಣಿ, ಕ್ರಾಂತಿ ಗೌಡ್ ತ್ರಿವಳಿಗಳು ಭಾರತದ ಭರವಸೆಯಾಗಿದ್ದಾರೆ. ದೀಪ್ತಿ ಏಳು ಪಂದ್ಯಗಳಿಂದ 15 ವಿಕೆಟ್ ಪಡೆದಿದ್ದಾರೆ.
ನವೆಂಬರ್ 02ರಂದು ಫೈನಲ್ ಮ್ಯಾಚ್:
ಇನ್ನು ಈ ಬಾರಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವು ಇದೇ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮುಂಬರುವ ನವೆಂಬರ್ 02ರಂದು ನಡೆಯಲಿದೆ. ಈಗಾಗಲೇ ಮೊದಲ ಸೆಮಿಫೈನಲ್‌ನಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮಣಿಸಿರುವ ದಕ್ಷಿಣ ಆಫ್ರಿಕಾ ತಂಡವು ಇದೇ ಮೊದಲ ಸಲ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದೀಗ ಪ್ರಶಸ್ತುಗಾಗಿ ಹರಿಣಗಳ ಜತೆ ಕಾದಾಡೋದು ಯಾರು ಎನ್ನುವ ಕುತೂಹಲ ಜೋರಾಗಿದೆ.
ಪಂದ್ಯ ಆರಂಭ: ಮಧ್ಯಾಹ್ನ 3 ಗಂಟೆಗೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
