ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಕ್ಕೆಲುಬಿನ ಗಾಯದಿಂದಾಗಿ ಆಂತರಿಕ ರಕ್ತಸ್ರಾವ ಉಂಟಾಗಿದ್ದು, ಅವರನ್ನು ಸಿಡ್ನಿಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿದೆ.
ಸಿಡ್ನಿ: ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಗಾಯ ಗಂಭೀರವಾಗಿದೆ ಎಂದು ವರದಿಯಾಗಿದೆ. ಸರಣಿಯ ನಂತರ ಅವರು ಭಾರತಕ್ಕೆ ಹಿಂತಿರುಗಿರಲಿಲ್ಲ. ಪಕ್ಕೆಲುಬಿನ ಗಾಯದಿಂದಾಗಿ ಶ್ರೇಯಸ್ ಸಿಡ್ನಿಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ. ಶ್ರೇಯಸ್‌ಗೆ ಆಂತರಿಕ ರಕ್ತಸ್ರಾವವಾಗಿದೆ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಅವರು ಐಸಿಯುನಲ್ಲಿದ್ದಾರೆ.
ಶ್ರೇಯಸ್ ಅಯ್ಯರ್ ಅವರ ಗಾಯದ ಅಪ್‌ಡೇಟ್ಸ್
ಡ್ರೆಸ್ಸಿಂಗ್ ರೂಮ್‌ನಲ್ಲಿ ಅವರಿಗೆ ತಕ್ಷಣದ ಚಿಕಿತ್ಸೆ ನೀಡದಿದ್ದರೆ ಗಾಯವು ಮಾರಣಾಂತಿಕವಾಗುತ್ತಿತ್ತು ಎಂದು ವರದಿ ಬಹಿರಂಗಪಡಿಸಿದೆ. ಶ್ರೇಯಸ್ ಕನಿಷ್ಠ ಒಂದು ವಾರ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಪಿಟಿಐ ವರದಿಯಲ್ಲಿ ಹೀಗೆ ಹೇಳಲಾಗಿದೆ. ''ಕಳೆದ ಎರಡು ದಿನಗಳಿಂದ ಶ್ರೇಯಸ್ ಐಸಿಯುನಲ್ಲಿದ್ದರು. ಅವರಿಗೆ ಆಂತರಿಕ ರಕ್ತಸ್ರಾವವಾಗಿದೆ ಎಂದು ವೈದ್ಯಕೀಯ ವರದಿ ಹೇಳುತ್ತದೆ. ರಕ್ತಸ್ರಾವದಿಂದ ಸೋಂಕು ಹರಡುವುದನ್ನು ತಡೆಯಲು ಅವರು ಎರಡರಿಂದ ಏಳು ದಿನಗಳವರೆಗೆ ನಿಗಾದಲ್ಲಿರುತ್ತಾರೆ. ತಂಡದ ವೈದ್ಯರು ಮತ್ತು ಫಿಸಿಯೋ ಶ್ರೇಯಸ್ ಅವರನ್ನು ಆದಷ್ಟು ಬೇಗ ಆಸ್ಪತ್ರೆಗೆ ಸೇರಿಸಿ ಪರಿಸ್ಥಿತಿ ಸುಲಭಗೊಳಿಸಿದರು. ಆದರೆ ಅದು ಮಾರಣಾಂತಿಕವಾಗಬಹುದಿತ್ತು. ಆದಾಗ್ಯೂ, ಶ್ರೇಯಸ್ ಶೀಘ್ರದಲ್ಲೇ ಚೇತರಿಸಿಕೊಂಡು ಪಂದ್ಯಕ್ಕೆ ಮರಳಲಿದ್ದಾರೆ'' ಎಂದು ಪಿಟಿಐ ವರದಿ ಮಾಡಿದೆ.
ನವೆಂಬರ್ 30 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಭಾಗವಹಿಸಲು ಸಾಧ್ಯವಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅವರು ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಆಸೀಸ್ ಎದುರಿನ ಮೂರನೇ ಏಕದಿನ ಪಂದ್ಯದ ವೇಳೆ ಗಾಯ
ಭಾರತ ಹಾಗೂ ಅಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಅಲೆಕ್ಸ್ ಕ್ಯಾರಿ ಅವರನ್ನು ಔಟ್ ಮಾಡಲು ಹಿಂದಕ್ಕೆ ಓಡಿ ಕ್ಯಾಚ್ ತೆಗೆದುಕೊಳ್ಳುವಾಗ ಶ್ರೇಯಸ್‌ಗೆ ಗಾಯವಾಗಿತ್ತು. ಶ್ರೇಯಸ್ ಜಾರಿ ಬಿದ್ದು ಪಕ್ಕೆಲುಬಿಗೆ ಗಾಯ ಮಾಡಿಕೊಂಡರು. ಹೀಗಾಗಿ ಶ್ರೇಯಸ್ ಅಯ್ಯರ್ ತಕ್ಷಣವೇ ಮೈದಾನ ತೊರೆದಿದ್ದರು.
ಕೊನೆಯ ಪಂದ್ಯ ಗೆದ್ದರೂ ಏಕದಿನ ಸರಣಿ ಸೋತ ಭಾರತ:
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಗೂ ಮುನ್ನ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಶುಭ್‌ಮನ್ ಗಿಲ್‌ಗೆ ಪಟ್ಟ ಕಟ್ಟಲಾಗಿತ್ತು.ಇನ್ನು ಶ್ರೇಯಸ್ ಅಯ್ಯರ್‌ಗೆ ಉಪನಾಯಕ ಪಟ್ಟ ನೀಡಲಾಗಿತ್ತು. ಮೊದಲ ಏಕದಿನ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಶ್ರೇಯಸ್ ಅಯ್ಯರ್, ಎರಡನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದರು. ಹೀಗಿದ್ದೂ ಭಾರತ ತಂಡವು ಮೊದಲೆರಡು ಪಂದ್ಯ ಸೋಲುವ ಮೂಲಕ ಸರಣಿ ಕೈಚೆಲ್ಲಿತ್ತು.
ಆದರೆ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ಬಾರಿಸಿದ ಆಕರ್ಷಕ ಶತಕ ಹಾಗೂ ವಿರಾಟ್ ಕೊಹ್ಲಿ ಬಾರಿಸಿದ ಅಜೇಯ ಅರ್ಧಶತಕದ ನೆರವಿನಿಂದ ಭಾರತ 9 ವಿಕೆಟ್ ಅಂತರದ ಸುಲಭ ಗೆಲುವು ದಾಖಲಿಸಿತ್ತು. ಇದರ ಜತೆಗೆ ಗೆಲುವಿನೊಂದಿಗೆ ಏಕದಿನ ಸರಣಿಯಲ್ಲಿ ಭಾರತ ತನ್ನ ಅಭಿಯಾನ ಮುಗಿಸಿತ್ತು.
