ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತವು ಅಜೇಯ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಸ್ಮೃತಿ ಮಂಧಾನ ಅವರ ಫಾರ್ಮ್ ತಂಡಕ್ಕೆ ಬಲವಾದರೂ, ಗಾಯದ ಸಮಸ್ಯೆ ಮತ್ತು ಆಡುವ ಬಳಗದ ಆಯ್ಕೆಯ ಸವಾಲುಗಳಿವೆ. ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧ ಹರ್ಮನ್‌ಪ್ರೀತ್ ಪಡೆಯ ಈ ಮಹತ್ವದ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ.

ಬೆಂಗಳೂರು: ಆ ಕನಸಿನ ಕ್ಷಣಕ್ಕೆ ಇನ್ನು ಕೇವಲ ಎರಡು ಪಂದ್ಯಗಳ ಅಂತರವಿದೆ. ಅಕ್ಟೋಬರ್ 30, ಭಾರತದ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಇಷ್ಟೊಂದು ಮಹತ್ವ ಪಡೆದ ಮತ್ತೊಂದು ದಿನವಿಲ್ಲ. ಐಸಿಸಿ ಕಿರೀಟದ ಗುರಿ ಬೆನ್ನತ್ತಿ ಖಂಡಗಳನ್ನು ದಾಟಿದರೂ, ಭಾರತಕ್ಕೆ ವಿಶ್ವಕಪ್ ಸಿಕ್ಕಿಲ್ಲ. ಇದೀಗ ಏಕದಿಕ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾದ ಚಾಲೆಂಜ್ ಎದುರಾಗಿದೆ. ಹವಾಮಾನ ಕೈಕೊಡದಿದ್ದರೆ, ಗುರುವಾರ ಬೆಳಗಾಗುವಷ್ಟರಲ್ಲಿ ಹರ್ಮನ್‌ಪ್ರೀತ್ ಕೌರ್ ಮತ್ತು ತಂಡ ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆಯಬಹುದೇ? ಅಥವಾ, ಈ ಹಿಂದಿನ ಸೋಲುಗಳ ಪುನರಾವರ್ತನೆಗೆ ನವಿ ಮುಂಬೈ ಸಾಕ್ಷಿಯಾಗುವುದೇ? ಎನ್ನುವ ಕುತೂಹಲ ಜೋರಾಗಿದೆ.

ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಕಮ್‌ಬ್ಯಾಕ್

It's not how you start, but how you finish. ನೀವು ಹೇಗೆ ಶುರು ಮಾಡುತ್ತೀರಿ ಎನ್ನುವುದಲ್ಲ, ಹೇಗೆ ಮುಗಿಸುತ್ತೀರಿ ಎನ್ನುವುದು ಮುಖ್ಯ. ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಭಾರತದ ಪಯಣ ಸುಲಭವಾಗಿರಲಿಲ್ಲ. ಶ್ರೀಲಂಕಾ ಮತ್ತು ಪಾಕಿಸ್ತಾನವನ್ನು ಸೋಲಿಸಿ ಆತ್ಮವಿಶ್ವಾಸದಿಂದ ಶುರುಮಾಡಿತು. ಆದರೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಭಾರತವನ್ನು ಸೋಲಿನಂಚಿಗೆ ತಂದು ನಿಲ್ಲಿಸಿದ್ದವು. ಆಸ್ಟ್ರೇಲಿಯಾ ಸುಲಭವಾಗಿ ಭಾರತವನ್ನು ಮಣಿಸಿದರೆ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ಗೆ ಭಾರತದ ತಪ್ಪುಗಳೇ ಗೆಲುವು ತಂದುಕೊಟ್ಟವು ಎಂದರೆ ತಪ್ಪಲ್ಲ.

ಕೊನೆಗೆ ಕಿವೀಸ್ ಸವಾಲನ್ನು ಮೆಟ್ಟಿನಿಂತು ಫೈನಲ್ ಫೋರ್‌ಗೆ ಲಗ್ಗೆಯಿಟ್ಟಾಗ ಮುಂದೆ ನಿಂತಿರುವುದು ಆಸ್ಟ್ರೇಲಿಯಾ. ಸ್ಮೃತಿ ಮಂಧಾನ ಅವರ ಬ್ಯಾಟಿಂಗ್ ತಂಡದ ದೊಡ್ಡ ಶಕ್ತಿ. ಟೂರ್ನಿಯ ಆರಂಭದ ವೈಫಲ್ಯಗಳನ್ನು ಸರಿಪಡಿಸಿಕೊಂಡು ಉತ್ತಮ ಫಾರ್ಮ್‌ಗೆ ಮರಳಿರುವ ಸ್ಮೃತಿ, ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರೇ ಹರ್ಮನ್‌ ಪಡೆಗೆ ಟ್ರಂಪ್ ಕಾರ್ಡ್ ಆಗಲಿದ್ದಾರೆ. ಏಳು ಇನ್ನಿಂಗ್ಸ್‌ಗಳಿಂದ 365 ರನ್, ಎರಡು ಅರ್ಧಶತಕ, ಒಂದು ಶತಕ.

ಆದರೆ, ಬೃಹತ್ ಮೊತ್ತ ಕಲೆಹಾಕಲು ಸ್ಮೃತಿ ಜೊತೆ ಇನ್ನಿಂಗ್ಸ್ ಆರಂಭಿಸುತ್ತಿದ್ದ ಪ್ರತಿಕಾ ರಾವಲ್ ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಹೊಡೆತ. ಟೂರ್ನಿಯಲ್ಲಿ 308 ರನ್‌ಗಳಿಸಿ ಮಿಂಚಿದ್ದ ಪ್ರತಿಕಾ ಅನುಪಸ್ಥಿತಿಯನ್ನು ಸರಿದೂಗಿಸುವುದು ದೊಡ್ಡ ಸವಾಲು. ಒಂದೂವರೆ ವರ್ಷದಿಂದ ಏಕದಿನ ತಂಡದಿಂದ ಹೊರಗಿದ್ದ ಶಫಾಲಿ ವರ್ಮಾ ಅವರ ಸ್ಥಾನಕ್ಕೆ ಬರುತ್ತಿದ್ದಾರೆ. ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್, ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್, ರಿಚಾ ಘೋಷ್‌ ಎಲ್ಲರೂ ಟೂರ್ನಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಜವಾಬ್ದಾರಿ ಹೊತ್ತಿದ್ದಾರೆ.

ಜೆಮಿಮಾ ವಾಪಸಾತಿಯಿಂದ ತಂಡದ ಬ್ಯಾಟಿಂಗ್ ಲೈನ್-ಅಪ್ ಮತ್ತಷ್ಟು ಬಲಗೊಂಡಿದೆ. ರಿಸ್ಕ್-ಫ್ರೀ ಶಾಟ್‌ಗಳ ಮೂಲಕ 140 ಸ್ಟ್ರೈಕ್ ರೇಟ್‌ನಲ್ಲಿ ಸ್ಕೋರ್ ಮಾಡುವ ಜೆಮಿಮಾ ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾರೆ. ಬ್ಯಾಟಿಂಗ್ ಒಂದು ಶಕ್ತಿಯಾಗಿದ್ದರೂ, ಟೂರ್ನಿ ಮುಗಿಯುತ್ತಾ ಬಂದರೂ ಸರಿಯಾದ ಆಡುವ ಹನ್ನೊಂದರ ಬಳಗವನ್ನು ಕಣಕ್ಕಿಳಿಸಲು ಹರ್ಮನ್‌ಪ್ರೀತ್ ಮತ್ತು ತಂಡದ ಮ್ಯಾನೇಜ್‌ಮೆಂಟ್‌ಗೆ ಸಾಧ್ಯವಾಗಿಲ್ಲ. ಒಬ್ಬ ಹೆಚ್ಚುವರಿ ಬ್ಯಾಟರ್ ಬೇಕೇ ಅಥವಾ ಒಬ್ಬ ಪ್ರಾಪರ್ ಪೇಸರ್ ಬೇಕೇ ಎಂಬುದು ವಿಶ್ವಕಪ್‌ನಾದ್ಯಂತ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ.

ದೀಪ್ತಿ ಶರ್ಮಾ, ಶ್ರೀ ಚರಣಿ, ಕ್ರಾಂತಿ ಗೌಡ್ ಬೌಲಿಂಗ್‌ನಲ್ಲಿ ಭಾರತದ ಶಕ್ತಿಯಾಗಿದ್ದಾರೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಆಸೀಸ್ ಬ್ಯಾಟರ್‌ಗಳಿಗೆ ಸ್ವಲ್ಪವಾದರೂ ಸವಾಲು ಒಡ್ಡಿದ್ದು ಶ್ರೀ ಚರಣಿ ಮತ್ತು ದೀಪ್ತಿ. ನವಿ ಮುಂಬೈನ ಬ್ಯಾಟಿಂಗ್ ಸ್ನೇಹಿ ವಿಕೆಟ್‌ನಲ್ಲಿ ಭಾರತ ಹೆಚ್ಚುವರಿ ಬ್ಯಾಟರ್‌ನೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಬೃಹತ್ ಮೊತ್ತವನ್ನು ಗಳಿಸಲು ಮತ್ತು ಬೆನ್ನಟ್ಟಲು ಹರ್ಮನ್ ತಂಡಕ್ಕೆ ಆತ್ಮವಿಶ್ವಾಸ ನೀಡುವುದೂ ಬಹುಶಃ ಈ ಕಾಂಬಿನೇಷನ್ ಆಗಿರಬಹುದು. ಇನ್ನೊಂದೆಡೆ, ಆಸ್ಟ್ರೇಲಿಯಾ ಟೂರ್ನಿಯಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದೆ, ಇದು ಅನಿರೀಕ್ಷಿತವೇನಲ್ಲ.

ಅತ್ಯಂತ ಬಲಿಷ್ಠ ಆಸ್ಟ್ರೇಲಿಯಾ

ಟೂರ್ನಿ ಮುಂದುವರೆದಂತೆ ಆಸ್ಟ್ರೇಲಿಯಾ ಮತ್ತಷ್ಟು ಬಲಿಷ್ಠವಾಗುತ್ತಿರುವುದನ್ನು ನೋಡಿದ್ದೇವೆ. ಪಾಕಿಸ್ತಾನದ ವಿರುದ್ಧ 76-7 ರಿಂದ 221 ರನ್ ಗಳಿಸಿ ಜಯ ಸಾಧಿಸಿತು. ಭಾರತದ ವಿರುದ್ಧ ಐತಿಹಾಸಿಕ ಜಯ, 330 ರನ್ ಬೆನ್ನಟ್ಟಿ ಗೆಲುವು. ಬಾಂಗ್ಲಾದೇಶ ನೀಡಿದ 199 ರನ್‌ಗಳನ್ನು ವಿಕೆಟ್ ನಷ್ಟವಿಲ್ಲದೆ ಕೇವಲ 25 ಓವರ್‌ಗಳಲ್ಲಿ ದಾಟಿತು. ಇಂಗ್ಲೆಂಡ್ ವಿರುದ್ಧ ಬೃಹತ್ ಮೊತ್ತವನ್ನು ಬೆನ್ನಟ್ಟುವಾಗ ಅಗ್ರ ಕ್ರಮಾಂಕ ಕುಸಿದರೂ 40 ಓವರ್‌ಗಳಲ್ಲಿ ಗೆದ್ದಿತು. ಕೊನೆಯ ಎರಡು ಪಂದ್ಯಗಳನ್ನು ನಾಯಕಿ ಮತ್ತು ಉತ್ತಮ ಫಾರ್ಮ್‌ನಲ್ಲಿರುವ ಅಲಿಸಾ ಹೀಲಿ ಅನುಪಸ್ಥಿತಿಯಲ್ಲೂ ಗೆದ್ದಿದೆ. ದಕ್ಷಿಣ ಆಫ್ರಿಕಾವನ್ನು ಕೇವಲ 97 ರನ್‌ಗಳಿಗೆ ಆಲೌಟ್ ಮಾಡಿ ಅಲ್ಟಿಮೇಟ್ ಡಾಮಿನೆನ್ಸ್ ಪ್ರದರ್ಶನ ತೋರಿತು.

ಹೀಲಿ, ಆಶ್ಲೀ ಗಾರ್ಡ್ನರ್, ಫೋಬೆ ಲಿಚ್‌ಫೀಲ್ಡ್, ಬೆತ್ ಮೂನಿ, ಎಲ್ಲಿಸ್ ಪೆರಿ ಸೇರಿದಂತೆ ಬ್ಯಾಟಿಂಗ್ ವಿಭಾಗದ ಎಲ್ಲರೂ ರನ್ ಗಳಿಸಿದ್ದಾರೆ. ಆರಂಭದಲ್ಲಿ ಲಿಚ್‌ಫೀಲ್ಡ್ ಮತ್ತು ಪೆರಿ ಮಂಕಾಗಿದ್ದರು. ಬೌಲಿಂಗ್‌ಗೆ ಬಂದರೆ, ವಿಶ್ವಕಪ್‌ನಲ್ಲಿ ಆಸೀಸ್ ಪೇಸರ್ ಅನ್ನಾಬೆಲ್ ಸದರ್‌ಲ್ಯಾಂಡ್ 15 ವಿಕೆಟ್‌ಗಳೊಂದಿಗೆ ವಿಕೆಟ್ ಬೇಟೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ, ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪ್ರಭಾವ ಬೀರಿದ್ದು ಲೆಗ್ ಸ್ಪಿನ್ನರ್ ಅಲನಾ ಕಿಂಗ್. ಟೂರ್ನಿಯಲ್ಲಿ ಅತ್ಯುತ್ತಮ ಸರಾಸರಿ ಹೊಂದಿರುವ ಬೌಲರ್ ಅಲನಾ. ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 18 ರನ್ ನೀಡಿ ಎಂಟು ವಿಕೆಟ್‌ಗಳನ್ನು ಪಡೆದಿದ್ದರು.

ಆದರೆ, ಭಾರತದ ವಿರುದ್ಧ ಅಲನಾಗೆ ಮಿಂಚಲು ಸಾಧ್ಯವಾಗಿರಲಿಲ್ಲ. ಆರು ಓವರ್‌ಗಳಲ್ಲಿ 49 ರನ್ ನೀಡಿದ್ದರು. ಅನ್ನಾಬೆಲ್ ಸದರ್‌ಲ್ಯಾಂಡ್ ಹೊರತುಪಡಿಸಿ ಉಳಿದೆಲ್ಲಾ ಆಸೀಸ್ ಬೌಲರ್‌ಗಳು ಭಾರತೀಯ ಬ್ಯಾಟರ್‌ಗಳ ಹೊಡೆತಕ್ಕೆ ತತ್ತರಿಸಿದ್ದರು. ಹಾಗಾಗಿ, ಆಸ್ಟ್ರೇಲಿಯಾ ಪ್ರಾಬಲ್ಯ ಮೆರೆಯುತ್ತಿರುವ ಈ ಪೈಪೋಟಿಯ ಹೊಸ ಅಧ್ಯಾಯವು ರೋಚಕವಾಗಿರುವುದು ಖಚಿತ.