ಫಾಲೋ-ಆನ್‌ಗೆ ಒಳಗಾಗಿದ್ದ ವೆಸ್ಟ್ ಇಂಡೀಸ್, ಎರಡನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ತೋರಿದೆ. ಜಾನ್ ಕ್ಯಾಂಬೆಲ್ ಮತ್ತು ಶಾಯ್ ಹೋಪ್ ಅವರ ಶತಕಗಳ ನೆರವಿನಿಂದ 390 ರನ್‌ಗಳಿಗೆ ಆಲೌಟ್ ಆಗಿದ್ದು, ಭಾರತಕ್ಕೆ ಗೆಲ್ಲಲು 121 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.

ನವದೆಹಲಿ: ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 270 ರನ್‌ಗಳ ಹಿನ್ನಡೆ ಅನುಭವಿಸಿ ಫಾಲೋ-ಆನ್‌ಗೆ ಒಳಗಾಗಿದ್ದ ವೆಸ್ಟ್ ಇಂಡೀಸ್ ತಂಡವು, ಭಾರತ ಎದುರು ಎದುರು ಎರಡನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡುವಲ್ಲಿ ಯಶಸ್ವಿಯಾಗಿದೆ. ಒಂದು ಹಂತದಲ್ಲಿ ವೆಸ್ಟ್ ಇಂಡೀಸ್ ಇನ್ನಿಂಗ್ಸ್ ಸೋಲು ಅನುಭವಿಸಲಿದೆ ಎಂದು ಭಾವಿಸಲಾಗಿತ್ತು. ಆದರೆ ಆರಂಭಿಕ ಬ್ಯಾಟರ್ ಜಾನ್ ಕ್ಯಾಂಬೆಲ್ ಹಾಗೂ ಶಾಯ್ ಹೋಪ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಭಾರತದ ಎದುರು ಪ್ರಬಲ ಪ್ರತಿರೋಧ ತೋರುವಲ್ಲಿ ಯಶಸ್ವಿಯಾಗಿದೆ. ಇದೀಗ ವೆಸ್ಟ್ ಇಂಡೀಸ್ ತಂಡವು 390 ರನ್‌ಗಳಿಗೆ ಸರ್ವಪತನ ಕಂಡಿದ್ದು, ಭಾರತಕ್ಕೆ ಗೆಲ್ಲಲು 121 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ.

ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೂರನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿದ್ದ ವೆಸ್ಟ್ ಇಂಡೀಸ್ ತಂಡವು, ನಾಲ್ಕನೇ ದಿನವೇ ಎಚ್ಚರಿಕೆಯ ಆರಂಭ ಪಡೆಯಿತು. ಆರಂಭಿಕ ಬ್ಯಾಟರ್ ಜಾನ್ ಕ್ಯಾಂಬೆಲ್ ಸಮಯೋಚಿತ ಅರ್ಧಶತಕ ಸಿಡಿಸಿದರು. ಮೂರನೇ ವಿಕೆಟ್‌ಗೆ ಜಾನ್ ಕ್ಯಾಂಬೆಲ್ ಹಾಗೂ ಶಾಯ್ ಹೋಪ್ ಜೋಡಿ 295 ಎಸೆತಗಳನ್ನು ಎದುರಿಸಿ 177 ರನ್‌ಗಳ ಅಮೂಲ್ಯ ಜತೆಯಾಟ ನಿಭಾಯಿಸಿತು. ಜಾನ್ ಕ್ಯಾಂಬೆಲ್ 199 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 115 ರನ್ ಬಾರಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು.

Scroll to load tweet…

8 ವರ್ಷಗಳ ಬಳಿಕ ಶತಕ ಸಿಡಿಸಿದ ಶಾಯ್ ಹೋಪ್:

ಭಾರತ ಎದುರಿನ ಟೆಸ್ಟ್ ಸರಣಿಗೆ ವಿಂಡೀಸ್ ತಂಡ ಕೂಡಿಕೊಂಡ ಅನುಭವಿ ಬ್ಯಾಟರ್ ಶಾಯ್ ಹೋಪ್, ಸಂಕಷ್ಟದ ಸಮಯದಲ್ಲಿ ವಿಂಡೀಸ್‌ ಪಡೆಗೆ ಶತಕ ಸಿಡಿಸುವ ಮೂಲಕ ಆಸರೆಯಾದರು. ಅಂದಹಾಗೆ ಶಾಯ್ ಹೋಪ್ ಬರೋಬ್ಬರಿ 8 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಶಾಯ್ ಹೋಪ್ 2017ರಲ್ಲಿ ಕೊನೆಯ ಬಾರಿಗೆ ಟೆಸ್ಟ್ ಶತಕ ಸಿಡಿಸಿದ್ದರು. ಇದೀಗ 204 ಎಸೆತಗಳನ್ನು ಎದುರಿಸಿ ತಾಳ್ಮೆಯ ಟೆಸ್ಟ್ ಶತಕ ಸಿಡಿಸಿದರು. ಅಂತಿಮವಾಗಿ ಶಾಯ್ ಹೋಪ್ 214 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 103 ರನ್ ಬಾರಿಸಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಇನ್ನುಳಿದಂತೆ ನಾಯಕ ರೋಸ್ಟನ್ ಚೇಸ್(40), ವಿಕೆಟ್ ಕೀಪರ್ ಬ್ಯಾಟರ್ ಟೆವಿನ್ ಇಮ್ಲೆಚ್(12) ಅಮೂಲ್ಯ ರನ್ ಕಾಣಿಕೆ ನೀಡಿದರು.

ಭಾರತೀಯ ಬೌಲರ್‌ಗಳನ್ನು ಕಾಡಿದ ಸೀಲ್ಸ್-ಗ್ರೀವ್ಸ್‌:

ಶಾಯ್ ವಿಕೆಟ್ ಪತನದ ಬಳಿಕ ವೆಸ್ಟ್ ಇಂಡೀಸ್ ತಂಡವು ಕೇವಲ 40 ರನ್ ಅಂತರದಲ್ಲಿ ಬರೋಬ್ಬರಿ 5 ವಿಕೆಟ್ ಕಳೆದುಕೊಂಡಿತು. 271ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡವು 311 ರನ್ ಗಳಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಿತು. ಆದರೆ 10ನೇ ವಿಕೆಟ್‌ಗೆ ಜೇಡನ್ ಸೀಲ್ಸ್ ಹಾಗೂ ಜಸ್ಟಿನ್ ಗ್ರೀವ್ಸ್ 133 ಎಸೆತಗಳನ್ನು ಎದುರಿಸಿ ಆಕರ್ಷಕ 79 ರನ್‌ಗಳ ಜತೆಯಾಟವಾಡುವ ಮೂಲಕ ಭಾರತೀಯ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಜಸ್ಟಿನ್ ಗ್ರೀವ್ಸ್ 85 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ ಅಜೇಯ 50 ರನ್ ಬಾರಿಸಿದರೆ, ಜೇಡನ್ ಸೀಲ್ಸ್‌ 32 ರನ್ ಬಾರಿಸಿ ಕೊನೆಯವರಾಗಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು.

ಭಾರತ ಪರ ಮಿಂಚಿನ ದಾಳಿ ನಡೆಸಿದ ಕುಲ್ದೀಪ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 2, ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆದರು.