ಕುಲ್ದೀಪ್ ಯಾದವ್ (5 ವಿಕೆಟ್) ಹಾಗೂ ರವೀಂದ್ರ ಜಡೇಜಾ (3 ವಿಕೆಟ್) ಅವರ ಮಾರಕ ಬೌಲಿಂಗ್ ದಾಳಿಗೆ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 248 ರನ್‌ಗಳಿಗೆ ಆಲೌಟ್ ಆಗಿದೆ. 270 ರನ್‌ಗಳ ಬೃಹತ್ ಮುನ್ನಡೆ ಪಡೆದ ಭಾರತ, ವಿಂಡೀಸ್ ಮೇಲೆ ಫಾಲೋ ಆನ್ ಹೇರಿದೆ.
ನವದೆಹಲಿ: ಕುಲ್ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 248 ರನ್‌ಗಳಿಗೆ ಆಲೌಟ್ ಆಗಿದೆ. ಬಾಲಂಗೋಚಿಗಳ ಕೆಚ್ಚೆದೆಯ ಹೋರಾಟದ ಹೊರತಾಗಿಯೂ ವಿಂಡೀಸ್ ತಂಡವು ಫಾಲೋ ಆನ್‌ಗೆ ಒಳಗಾಗಿದೆ. ಭಾರತ ತಂಡವು 270 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ್ದು, ಇದೀಗ ವಿಂಡೀಸ್ ಪಡೆಯನ್ನು ಮತ್ತೊಮ್ಮೆ ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಭಾರತ ಪರ ಕುಲ್ದೀಪ್ ಯಾದವ್ 5 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 3, ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.
ವಿಂಡೀಸ್ ನಾಟಕೀಯ ಕುಸಿತ
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ರೋಸ್ಟನ್ ಚೇಸ್ ನೇತೃತ್ವದ ವೆಸ್ಟ್ ಇಂಡೀಸ್ ತಂಡವು ಎರಡನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತ್ತು. ಇನ್ನು ಮೂರನೇ ದಿನದಾಟ ಆರಂಭಿಸಿದ ವಿಂಡೀಸ್ ತಂಡಕ್ಕೆ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ಆರಂಭದಲ್ಲೇ ಶಾಕ್ ನೀಡಿದರು. ಮೂರನೇ ದಿನದಾಟದಲ್ಲಿ ವಿಂಡೀಸ್ ತಂಡವು ತನ್ನ ಖಾತೆಗೆ 16 ರನ್ ಸೇರಿಸುವಷ್ಟರಲ್ಲಿ ಶಾಯ್ ಹೋಪ್ ವಿಕೆಟ್ ಕಳೆದುಕೊಂಡಿತು. ಇದಾದ ಕೆಲ ಗೊತ್ತಿನಲ್ಲಿನಲ್ಲೇ ಟೆವಿನ್ ಇಮ್ಲೋಚ್ ಹಾಗೂ ಜಸ್ಟಿನ್ ಗ್ರೇವಿಸ್ ಹಾಗೂ ವ್ಯಾರಿಕನ್ ಕೂಡಾ ಪೆವಿಲಿಯನ್ ಸೇರಿದರು. ವೆಸ್ಟ್ ಇಂಡೀಸ್ ತಂಡವು ತನ್ನ ಖಾತೆಗೆ 19 ರನ್ ಸೇರಿಸುವಷ್ಟರಲ್ಲಿ ಮಧ್ಯಮ ಕ್ರಮಾಂಕದ 4 ಪ್ರಮುಖ ವಿಕೆಟ್ ಕಳೆದುಕೊಳ್ಳುವ ಮೂಲಕ ನಾಟಕೀಯ ಕುಸಿತ ಕಂಡಿತು.
ಆಸರೆಯಾದ ಬಾಲಂಗೋಚಿಗಳು:
ಕೇವಲ 175 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಬಾಲಂಗೋಚಿಗಳು ಆಸರೆಯಾದರು. ಕೊನೆಯಲ್ಲಿ ಖಾರೆ ಪಿಯರೆ(23), ಜೇಡನ್ ಸೀಲ್ಸ್(13) ಹಾಗೂ ಆಂಡರ್‌ಸನ್ ಫಿಲಿಫ್ ಅಜೇಯ 24 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 240ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಕೊನೆಯ ಮೂರು ವಿಕೆಟ್‌ಗೆ ಈ ಮೂವರು ಬ್ಯಾಟರ್‌ಗಳು 73 ರನ್‌ಗಳ ಜತೆಯಾಟವಾಡಿದರು.
