ಏಷ್ಯಾಕಪ್‌ಗಾಗಿ ಪಾಕಿಸ್ತಾನ ತಂಡವನ್ನು ಆಯ್ಕೆ ಮಾಡಿದ ನಂತರ, ಭಾರತವನ್ನು ಸೋಲಿಸುವುದಾಗಿ ಆಕಿಬ್ ಜಾವೆದ್ ಓಪನ್ ಚಾಲೆಂಜ್ ಹಾಕಿದ್ದಾರೆ. ಯುವ ಆಟಗಾರರು ನಿರೀಕ್ಷೆಗಳನ್ನು ಮೀರಿ ಪ್ರದರ್ಶನ ತೋರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಬಾಬರ್ ಅಜಂ ಮತ್ತು ರಿಜ್ವಾನ್‌ರಂತಹ ಹಿರಿಯ ಆಟಗಾರರನ್ನು ಕೈಬಿಡಲಾಗಿದೆ
ಕರಾಚಿ: ಏಷ್ಯಾಕಪ್‌ನಲ್ಲಿ ಭಾರತ ತಂಡವನ್ನು ಸೋಲಿಸುತ್ತೇವೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಿರ್ದೇಶಕ ಆಕಿಬ್ ಜಾವೆದ್ ಓಪನ್ ಚಾಲೆಂಜ್ ಹಾಕಿದ್ದಾರೆ. ಏಷ್ಯಾಕಪ್‌ಗಾಗಿ ಪಾಕಿಸ್ತಾನ ತಂಡವನ್ನು ಆಯ್ಕೆ ಮಾಡಿದ ನಂತರ ಆಕಿಬ್ ಜಾವೆದ್ ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದರು. ತಂಡದ ಯುವ ಆಟಗಾರರು ನಿರೀಕ್ಷೆಗಳನ್ನು ಮೀರಿ ಪ್ರದರ್ಶನ ತೋರಲಿದ್ದಾರೆ ಎಂದು ಮಾಜಿ ಪಾಕ್ ಆಟಗಾರ ಆಕಿಬ್ ಜಾವೆದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮ್ಮ ಈ ತಂಡ ಭಾರತವನ್ನು ಸೋಲಿಸಬಲ್ಲದು. ನಿಮಗೆ ಇಷ್ಟವಾದರೂ ಇಲ್ಲದಿದ್ದರೂ, ವಿಶ್ವ ಕ್ರಿಕೆಟ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವೇ ದೊಡ್ಡ ಪೈಪೋಟಿ. ಎಲ್ಲಾ ಆಟಗಾರರಿಗೂ ಇದು ಗೊತ್ತಿದೆ. ನಮ್ಮ ತಂಡ ಯಾವ ಎದುರಾಳಿಯನ್ನು ಬೇಕಾದರೂ ಸೋಲಿಸಬಲ್ಲದು. ನಾವು ಭಾರತವನ್ನು ಸೋಲಿಸಲು ಸಿದ್ಧರಿದ್ದೇವೆ. ಎರಡೂ ದೇಶಗಳ ನಡುವಿನ ಪ್ರಸ್ತುತ ಪರಿಸ್ಥಿತಿ ಎಲ್ಲರಿಗೂ ತಿಳಿದಿದೆ. ಆದರೆ, ಆಟಗಾರರ ಮೇಲೆ ಹೆಚ್ಚಿನ ಒತ್ತಡ ಹೇರಲು ನಾವು ಬಯಸುವುದಿಲ್ಲ ಎಂದು ಆಕಿಬ್ ಜಾವೆದ್ ಹೇಳಿದ್ದಾರೆ.
ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್‌ರಂತಹ ಹಿರಿಯ ಆಟಗಾರರನ್ನು ಕೈಬಿಟ್ಟು ಪಾಕಿಸ್ತಾನ ಏಷ್ಯಾಕಪ್ ತಂಡವನ್ನು ಪ್ರಕಟಿಸಿದೆ. ಬಾಬರ್ ಮತ್ತು ರಿಜ್ವಾನ್ ಅವರ ಇತ್ತೀಚಿನ ಕಳಪೆ ಪ್ರದರ್ಶನದ ನಂತರ ಟೀಮಿನಿಂದ ಕೈಬಿಡಲಾಗಿದೆ. ಸಲ್ಮಾನ್ ಅಲಿ ಆಘಾ ಏಷ್ಯಾಕಪ್‌ನಲ್ಲಿ ಪಾಕಿಸ್ತಾನವನ್ನು ಮುನ್ನಡೆಸಲಿದ್ದಾರೆ. ಅನುಭವಿ ಕ್ರಿಕೆಟಿಗರಾದ ಫಖರ್ ಜಮಾನ್, ವಿಕೆಟ್ ಕೀಪರ್ ಮೊಹಮ್ಮದ್ ಹ್ಯಾರಿಸ್, ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ ಮುಂತಾದವರನ್ನು ತಂಡದಲ್ಲಿ ಸೇರಿಸಲಾಗಿದೆ. ಇತ್ತೀಚಿನ ವೆಸ್ಟ್ ಇಂಡೀಸ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡಕ್ಕೆ ಇದು ನಿರ್ಣಾಯಕ ಸರಣಿ ಎನಿಸಿಕೊಂಡಿದೆ. ಏಷ್ಯಾಕಪ್ ಟಿ20 ಸರಣಿಗೂ ಮುನ್ನ ಪಾಕಿಸ್ತಾನ ತಂಡವು ಯುಎಇ ಹಾಗೂ ಆಫ್ಘಾನಿಸ್ತಾನ ಎದುರು ತ್ರಿಪಕ್ಷೀಯ ಸರಣಿಯನ್ನಾಡಲಿದೆ.
ಪಾಕಿಸ್ತಾನ ತಂಡವು ಸೆಪ್ಟೆಂಬರ್ 12ರಂದು ಓಮನ್ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಾದ ಬಳಿಕ ಗ್ರೂಪ್ ಹಂತದಲ್ಲಿ ಪಾಕಿಸ್ತಾನ ತಂಡವು ಸೆಪ್ಟೆಂಬರ್ 14ರಂದು ಭಾರತ ಎದುರು ಆ ಬಳಿಕ ಸೆಪ್ಟೆಂಬರ್ 17ರಂದು ಯುಎಇ ವಿರುದ್ದ ಸೆಣಸಾಡಲಿದೆ. ಬರೋಬ್ಬರಿ 8 ವರ್ಷಗಳ ಬಳಿಕ ಬಾಬರ್ ಅಜಂ ಅವರಿಲ್ಲದೇ ಪಾಕಿಸ್ತಾನ ತಂಡವು ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ.
2023ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯು ಏಕದಿನ ಮಾದರಿಯಲ್ಲಿ ನಡೆದಿತ್ತು. ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ಪಾಕಿಸ್ತಾನ ತಂಡವು ಫೈನಲ್‌ಗೇರಲು ವಿಫಲವಾಗಿತ್ತು. ಇನ್ನು ಇದೀಗ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಏಷ್ಯಾಕಪ್ ಟೂರ್ನಿಯನ್ನು ಟಿ20 ಮಾದರಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿದೆಯಾದರೂ ಪಂದ್ಯಾವಳಿಗೂ ದುಬೈ ಹಾಗೂ ಅಬುದಾಬಿಯಲ್ಲಿ ನಡೆಯಲಿವೆ. ಏಷ್ಯಾಕಪ್ ಟೂರ್ನಿಯ ಪಂದ್ಯಾವಳಿಗಳು ಸೆಪ್ಟೆಂಬರ್ 09ರಿಂದ 28ರ ವರೆಗೆ ದುಬೈ ಹಾಗೂ ಅಬುದಾಬಿಯಲ್ಲಿ ನಡೆಯಲಿವೆ.
ಏಷ್ಯಾಕಪ್ ಹಾಗೂ ತ್ರಿಕೋನ ಸರಣಿಗೆ ಪಾಕಿಸ್ತಾನ ತಂಡ ಹೀಗಿದೆ:
ಸಲ್ಮಾನ್ ಅಲಿ ಅಘಾ(ನಾಯಕ), ಅಬ್ರಾರ್ ಅಹ್ಮದ್, ಫಾಹೀಂ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲಾಟ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್(ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸೀಂ ಜೂನಿಯರ್, ಶಾಹೀಜಾದ್ ಫರ್ಹಾನ್, ಸೈಮ್ ಆಯುಬ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಅಫ್ರಿದಿ, ಸೌಫುನ್ ಮೊಖಿಮ್
