ಏಷ್ಯಾಕಪ್‌ನಲ್ಲಿ ಗಿಲ್ ಗಾಯಗೊಂಡ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಕುತೂಹಲ ಮೂಡಿದೆ. ಯಾವುದೇ ಕ್ರಮಾಂಕದಲ್ಲೂ ಆಡಲು ಸಿದ್ಧ ಎಂದ ಸಂಜು, ತಂಡದ ಅಗತ್ಯಕ್ಕೆ ತಕ್ಕಂತೆ ನಿರ್ಧಾರ ಎಂದು ಕೋಚ್ ಸಿತಾಂಶು ಕೊಟಕ್ ಹೇಳಿದ್ದಾರೆ. ಗಿಲ್ ಗಾಯದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.

ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಇಂದು ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಕಣಕ್ಕಿಳಿಯುವಾಗ ಅಭಿಮಾನಿಗಳ ಕಣ್ಣು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಮೇಲಿದೆ. ಯಾಕೆಂದರೆ ಪಾಕಿಸ್ತಾನ ಎದುರಿನ ಪಂದ್ಯಕ್ಕೂ ಮುನ್ನ ಆರಂಭಿಕ ಬ್ಯಾಟರ್ ಹಾಗೂ ಉಪನಾಯಕ ಶುಭ್‌ಮನ್ ಗಿಲ್ ಗಾಯಗೊಂಡಿದ್ದಾರೆ. ಹೀಗಾಗಿ ಸಂಜು ಬ್ಯಾಟಿಂಗ್ ಕ್ರಮಾಂಕದಲ್ಲಿ ಎಲ್ಲಿ ಬ್ಯಾಟ್ ಮಾಡ್ತಾರೆ ಅನ್ನೋದು ಪ್ರಶ್ನೆ.

ಓಪನರ್ ಶುಭ್‌ಮನ್ ಗಿಲ್ ಗಾಯದಿಂದಾಗಿ ಹೊರಗುಳಿದರೆ, ಸಂಜು ಸ್ಯಾಮ್ಸನ್ ಅವರನ್ನು ಓಪನರ್ ಆಗಿ ಪರಿಗಣಿಸಬಹುದು. ಯುಎಇ ವಿರುದ್ಧದ ಮೊದಲ ಪಂದ್ಯದಲ್ಲಿ ಸಂಜುಗೆ ಮಿಡಲ್ ಆರ್ಡರ್‌ನಲ್ಲಿ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಟೀಂ ಮ್ಯಾನೇಜ್‌ಮೆಂಟ್ ನಿರ್ಧರಿಸಿತ್ತು. ಉತ್ತಮ ಫಾರ್ಮ್‌ನಲ್ಲಿರುವ ಸಂಜು ಅವರನ್ನು ಟಾಪ್ ಆರ್ಡರ್‌ಗೆ ಪರಿಗಣಿಸಬೇಕೆಂಬ ಬೇಡಿಕೆ ಏಷ್ಯಾಕಪ್ ಕ್ರಿಕೆಟ್ ಟೂರ್ನಮೆಂಟ್ ಆರಂಭದಿಂದಲೂ ಫ್ಯಾನ್ಸ್‌ಗೆ ಆಗ್ರಹಿಸುತ್ತಲೇ ಬಂದಿದ್ದಾರೆ.

ಸಂಜು ಸ್ಯಾಮ್ಸನ್ ಎಲ್ಲಿ ಬ್ಯಾಟ್ ಮಾಡ್ತಾರೆ?

ಯಾವುದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬೇಕಿದ್ದರೂ ಆಡಬಲ್ಲ ಆಟಗಾರ ಸಂಜು ಸ್ಯಾಮ್ಸನ್ ಎಂದು ಟೀಂ ಮ್ಯಾನೇಜ್‌ಮೆಂಟ್ ಅಭಿಪ್ರಾಯಪಟ್ಟಿದೆ. ಸಂಜು ಸ್ಯಾಮ್ಸನ್ ಸೇರಿದಂತೆ ಯಾರನ್ನೂ ಯಾವುದೇ ಬ್ಯಾಟಿಂಗ್ ಸ್ಥಾನದಲ್ಲಿ ನಿರೀಕ್ಷಿಸಬಹುದು ಎಂದು ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಸುಳಿವು ನೀಡಿದ್ದಾರೆ. ‘ನೋಡಿ, ಸಂಜು ಸ್ಯಾಮ್ಸನ್ ಐದು, ಆರು ಸ್ಥಾನಗಳಲ್ಲಿ ಹೆಚ್ಚು ಬ್ಯಾಟ್ ಮಾಡಿಲ್ಲ. ಆದರೆ ಅದರರ್ಥ ಸಂಜು ಅಲ್ಲಿ ಬ್ಯಾಟ್ ಮಾಡಲು ಸಾಧ್ಯವಿಲ್ಲ ಎಂದಲ್ಲ. ಯಾವುದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಬಲ್ಲ ಆಟಗಾರ ಸಂಜು. ಟೀಮಿನ ಅಗತ್ಯಕ್ಕೆ ತಕ್ಕಂತೆ ನಾಯಕ ಮತ್ತು ಮುಖ್ಯ ಕೋಚ್ ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾವುದೇ ಸ್ಥಾನದಲ್ಲೂ ಬ್ಯಾಟ್ ಮಾಡಲು ಸಂಜು ಖುಷಿಯಿಂದಲೇ ರೆಡಿಯಿದ್ದಾರೆ. ಬ್ಯಾಟಿಂಗ್ ಕ್ರಮಾಂಕ ನೋಡಿದರೆ, ಟೀಮಿನಲ್ಲಿರುವ ಎಲ್ಲ ಆಟಗಾರರೂ ಯಾವುದೇ ಸ್ಥಾನದಲ್ಲೂ ಬ್ಯಾಟ್ ಮಾಡಿ ಪಂದ್ಯ ಫಿನಿಶ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಲು ನಾಲ್ಕೈದು ಆಟಗಾರರಿದ್ದಾರೆ. ಯುಎಇ ವಿರುದ್ಧ ಐದನೇ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಬ್ಯಾಟ್ ಮಾಡಬೇಕಿತ್ತು. ಮುಂದಿನ ಪಂದ್ಯದಲ್ಲಿ ಯಾವುದೇ ಬ್ಯಾಟಿಂಗ್ ಸ್ಥಾನದಲ್ಲೂ ಸಂಜು ಬ್ಯಾಟ್ ಮಾಡಬಹುದು. ಎಲ್ಲ ಆಟಗಾರರಿಗೂ ತಮ್ಮ ಜವಾಬ್ದಾರಿಗಳ ಬಗ್ಗೆ ಸ್ಪಷ್ಟತೆ ಇದೆ. ಪರಿಸ್ಥಿತಿಗೆ ಅನುಗುಣವಾಗಿ ಇತರ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಸಿತಾಂಶು ಕೊಟಕ್ ಹೇಳಿದ್ದಾರೆ.

ಶುಭ್‌ಮನ್‌ ಗಿಲ್ ಗಾಯ ಗಂಭೀರವಾಗಿದೆಯೇ?

ಇದೇ ವೇಳೆ, ಭಾರತ ತಂಡದ ಉಪನಾಯಕ ಶುಭ್‌ಮನ್ ಗಿಲ್‌ಗೆ ಗಾಯವಾಗಿದೆ ಎಂದು ವರದಿಯಾಗಿದೆ. ಅಭ್ಯಾಸದ ವೇಳೆ ಆಟಗಾರನ ಬಲಗೈಗೆ ಚೆಂಡು ತಗುಲಿ ಗಾಯವಾಗಿದೆ ಎಂದು ತಿಳಿದುಬಂದಿದೆ. ಗಿಲ್ ಅಭ್ಯಾಸದ ವೇಳೆ ವೈದ್ಯಕೀಯ ತಂಡದ ಸಹಾಯ ಪಡೆಯುವ ಮತ್ತು ನಂತರ ಮೈದಾನ ಬಿಡುವ ದೃಶ್ಯಗಳು ಹೊರಬಂದಿವೆ. ಗಾಯಗೊಂಡ ಗಿಲ್ ಬಳಿ ಬಂದು ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಮಾತನಾಡುವುದು ಕಂಡುಬಂದಿದೆ. ಗಿಲ್ ಗಾಯದ ಬಗ್ಗೆ ಭಾರತ ತಂಡದ ಮ್ಯಾನೇಜ್‌ಮೆಂಟ್ ಪ್ರತಿಕ್ರಿಯಿಸಿಲ್ಲ. ಯುಎಇ ವಿರುದ್ಧದ ಮೊದಲ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಜೊತೆ ಭಾರತದ ಇನ್ನಿಂಗ್ಸ್ ಆರಂಭಿಸಿದ್ದ ಶುಭ್‌ಮನ್ ಗಿಲ್ ಅಜೇಯ 20 ರನ್ ಸಿಡಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದ್ದರು.

ಸಂಭಾವ್ಯ ಆಟಗಾರರ ಪಟ್ಟಿ:

ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್‌ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.

ಪಾಕಿಸ್ತಾನ: ಸೈಮ್, ಫರ್ಹಾನ್, ಹಾರಿಸ್, ಫಖರ್, ಸಲ್ಮಾನ್ ಆಘಾ(ನಾಯಕ), ಹಸನ್ ನವಾಜ್, ಮೊಹಮ್ಮದ್ ನವಾಜ್, ಫಹೀಮ್, ಶಾಹೀನ್, ಸುಫಿಯಾನ್, ಅಬ್ರಾರ್ ಅಹ್ಮದ್.

ಆರಂಭ: ರಾತ್ರಿ 8.00 ಗಂಟೆಗೆ

ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲೈವ್