ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ, ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ನಾಯಕನಿಗೆ ಕೈಕುಲುಕಲಿಲ್ಲ. ಪೆಹಲ್ಗಾಂ ದುರ್ಘಟನೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ದುಬೈ: ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಇಂದು ಏಷ್ಯಾಕಪ್ ಟೂರ್ನಿಯಲ್ಲಿ ಮುಖಾಮುಖಿಯಾದವು. ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಈ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪಾಪಿ ಪಾಕಿಸ್ತಾನ ನಾಯಕನಿಗೆ ಕೈಕುಲುಕದೇ ಪೆಹಲ್ಗಾಂ ದುರ್ಘಟನೆಯ ಕುರಿತಂತೆ ಬಹಿರಂಗವಾಗಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಟಾಸ್ ನಿರ್ವಹಣೆ ಮಾಡಿದರು. ರವಿಶಾಸ್ತ್ರಿ ಅಕ್ಕಪಕ್ಕ ಸೂರ್ಯಕುಮಾರ್ ಯಾದವ್ ಹಾಗೂ ಸಲ್ಮಾನ್ ಅಲಿ ಅಘಾ ನಿಂತಿದ್ದರು. ಟಾಸ್ ಬಳಿಕ ಸಾಮಾನ್ಯವಾಗಿ ಉಭಯ ತಂಡಗಳ ಆಟಗಾರರು ಕೈಕುಲುಕುತ್ತಾರೆ. ಆದರೆ ಟಾಸ್ ಆರಂಭಕ್ಕೂ ಮೊದಲೇ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ತಾವು ಟಾಸ್ ವೇಳೆ ಪಾಕ್ ನಾಯಕನ ಜತೆ ಕೈಕುಲುಕುವುದಿಲ್ಲ ಎಂದು ತಿಳಿಸಿದ್ದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅದೇ ರೀತಿ ಟಾಸ್ ಮುಗಿಯುತ್ತಿದ್ದಂತೆಯೇ ಉಭಯ ದೇಶಗಳ ನಾಯಕರು ಶೇಕ್‌ ಹ್ಯಾಂಡ್ ಮಾಡದೇ ಪೆವಿಲಿಯನ್ ಕಡೆ ವಾಪಸ್ಸಾದರು.

ಭಾರತದಲ್ಲಿ ಜೋರಾಗಿದ್ದ ಬಾಯ್ಕಾಟ್ ಆಗ್ರಹ

ಇನ್ನು ಏಷ್ಯಾಕಪ್ ಟೂರ್ನಿಗೆ ವೇಳಾಪಟ್ಟಿ ಪ್ರಕಟವಾದಾಗಿನಿಂದಲೇ ಭಾರತ ತಂಡವು ಶತ್ರುರಾಷ್ಟ್ರ ಪಾಕಿಸ್ತಾನ ಎದುರು ಕ್ರಿಕೆಟ್ ಆಡಬಾರದು ಎನ್ನುವ ಆಗ್ರಹ ಕೇಳಿಬಂದಿತ್ತು. ಕೆಲವು ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವು ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ ಎದುರಿನ ಪಂದ್ಯವನ್ನು ಬಾಯ್ಕಾಟ್ ಮಾಡಬೇಕು ಎಂದು ಆಗ್ರಹಿಸಿದ್ದರು.

ಕಣಿವೆ ರಾಜ್ಯದ ಪೆಹಲ್ಗಾಂನಲ್ಲಿ ಪಾಕಿಸ್ತಾನ ಪ್ರೇರಿತ ಉಗ್ರರು ನಿರಾಯುಧವಾಗಿ ಬಂದಿದ್ದ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 26 ಮಂದಿ ನಾಗರೀಕರನ್ನು ಹತ್ಯೆ ಮಾಡಿದ್ದರು. ಹೀಗಾಗಿ ಉಗ್ರವಾದಕ್ಕೆ ಸದಾ ಕುಮ್ಮಕ್ಕು ನೀಡುತ್ತಾ ಬಂದಿರುವ ಪಾಕ್ ಜತೆ ಕ್ರಿಕೆಟ್ ಆಡಬಾರದು ಎನ್ನುವ ಆಗ್ರಹ ಕೇಳಿ ಬಂದಿತ್ತು. ಆದರೆ ಕೇಂದ್ರ ಸರ್ಕಾರ ಪಾಕ್ ಎದುರು ಕ್ರಿಕೆಟ್ ಆಡಲು ಸಮ್ಮತಿ ನೀಡಿತ್ತು. ದ್ವಿಪಕ್ಷೀಯ ಸರಣಿ ಹೊರತುಪಡಿಸಿ ಬಹುಪಕ್ಷೀಯ ಟೂರ್ನಿಗಳಲ್ಲಿ ಪಾಕ್ ಎದುರು ಕ್ರಿಕೆಟ್ ಆಡಲು ಭಾರತಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು.

ಭಾರತೀಯರ ಭಾವನೆ ಪ್ರತಿನಿಧಿಸಿದ ಸೂರ್ಯ

ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದ ರೆಯಾನ್ ಟೆನ್ ಡೆಸ್ಕ್ಯಾಟ್ ಅವರನ್ನು ಉದ್ದೇಶಿಸಿ ಮಾಧ್ಯಮದವರು ತಂಡದ ವಾತಾವರಣ, ಆಟಗಾರರ ಮನಸ್ಥಿತಿ ಹೇಗಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ಹೆಡ್ ಕೋಚ್ ಗೌತಮ್ ಗಂಭೀರ್, ಆಟಗಾರರಿಗೆ ಮ್ಯಾಚ್ ಬಗ್ಗೆ ಗಮನ ಹರಿಸುವುದಕ್ಕೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ತವರಿನಲ್ಲಿ ಯಾವ ರೀತಿ ಫೀಲಿಂಗ್ಸ್ ಇದೆ ಎಂದು ನಮಗೆ ಗೊತ್ತಿದೆ ಎಂದಿದ್ದರು.ಭಾರತೀಯರು ಸೂರ್ಯಕುಮಾರ್ ಯಾದವ್ ಅವರಿಂದ ಇಂತಹದ್ದೇ ಪ್ರತಿರೋಧವನ್ನು ನಿರೀಕ್ಷಿಸುತ್ತಿದ್ದರು. ಅದನ್ನು ಅರ್ಥಮಾಡಿಕೊಂಡು ಸೂರ್ಯಕುಮಾರ್ ಯಾದವ್ ಹಾಗೆಯೇ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.