2025ರ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನವು ಶ್ರೀಲಂಕಾ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ. ಮಧ್ಯಮ ಕ್ರಮಾಂಕದ ಕುಸಿತದ ಹೊರತಾಗಿಯೂ, ಮೊಹಮದ್ ನವಾಜ್ ಮತ್ತು ಹುಸೇన్ ತಲತ್ ತಂಡವನ್ನು ಗೆಲುವಿನ ದಡ ಸೇರಿಸಿ, ಫೈನಲ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡರು.

ಅಬುಧಾಬಿ: 2025ರ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ಪಾಕಿಸ್ತಾನದ ಕನಸು ಜೀವಂತವಾಗಿದೆ. ಮಂಗಳವಾರ ಸೂಪರ್-4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕ್ 5 ವಿಕೆಟ್‌ಗಳ ಗೆಲುವು ಸಾಧಿಸಿತು. ಸತತ 2ನೇ ಸೋಲು ಕಂಡ ಶ್ರೀಲಂಕಾ ಫೈನಲ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.

ಗುಂಪು ಹಂತದಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಗೆದ್ದಿದ್ದ ಶ್ರೀಲಂಕಾ, ಸೂಪರ್ -4 ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿತ್ತು. ಮಂಗಳವಾರ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, ಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡಿ 20 ಓವರಲ್ಲಿ 8 ವಿಕೆಟ್‌ಗೆ 133 ರನ್ ಗಳಿಸಿತು.

ಕುಸಿದ ಲಂಕಾಗೆ ಕಮಿಂಡು ಆಸರೆ

ಆರಂಭಿಕ ಆಘಾತ ಎದುರಿಸಿದ್ದ ತಂಡಕ್ಕೆ ಕಮಿಂಡು ಮೆಂಡಿಸ್‌ ಅರ್ಧಶತಕ ಚೇತರಿಕೆ ನೀಡಿತು. ಇನ್ನುಳಿದಂತೆ ಚರಿತ್ ಅಸಲಂಕಾ 20, ಕುಸಾಲ್ ಪೆರೇರಾ ಹಾಗೂ ವನಿಂದು ಹಸರಂಗ ತಲಾ 15 ರನ್‌ ಗಳಿಸಿದರು. ಪಾಕ್ ಪರ ವೇಗಿ ಶಾಹೀನ್ ಅಫ್ರಿದಿ 3 ವಿಕೆಟ್, ಹುಸೇನ್ ತಲತ್ ಮತ್ತು ಹ್ಯಾರಿಸ್ ರೌಫ್ ತಲಾ 2 ವಿಕೆಟ್ ಕಿತ್ತರು.

ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಫಖರ್ ಜಮಾನ್ ಹಾಗೂ ಸಾಹಿಬ್ ಝಾದಾ ಫರ್ಹಾನ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 43 ರನ್ ಜೊತೆಯಾಟ ಮೂಡಿಬಂತು. ಆದರೆ ಲಂಕಾದ ತಾರಾ ಸ್ಪಿನ್ನರ್‌ಗಳಾದ ಮಹೀಶ್‌ ತೀಕ್ಷಣ ಹಾಗೂ ವನಿಂದು ಹಸರಂಗ ಪಾಕ್ ಗೆ ದೊಡ್ಡ ಆಘಾತ ನೀಡಿದರು. 12 ರನ್ ಅಂತರದಲ್ಲಿ ಪಾಕಿಸ್ತಾನ 4 ವಿಕೆಟ್ ಕಳೆದುಕೊಂಡಿತು. 80 ರನ್‌ಗೆ 5 ವಿಕೆಟ್ ಪತನಗೊಂಡಾಗ ಲಂಕಾ ಜಯದ ನಿರೀಕ್ಷೆಯಲ್ಲಿತ್ತು. ಆದರೆ ಮೊಹಮದ್ ನವಾಜ್ ಹಾಗೂ ಹುಸೇನ್ ತಲತ್ ತಂಡವನ್ನು ಇನ್ನೂ 2 ಓವರ್ ಬಾಕಿ ಇರುವಂತೆಯೇ ಜಯದ ದಡ ಸೇರಿಸಿದರು.

ಪಾಕಿಸ್ತಾನದ ಫೈನಲ್ ಕನಸು ಜೀವಂತ

ಅಂದಹಾಗೆ ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಭಾರತ ಎದುರು ಹೀನಾಯ ಸೋಲು ಅನುಭವಿಸಿದ್ದ ಪಾಕಿಸ್ತಾನ ತಂಡವು, ಇದೀಗ ಲಂಕಾ ಎದುರು ಗೆಲುವು ಸಾಧಿಸುತ್ತಿದ್ದಂತೆಯೇ ಫೈನಲ್‌ ಕನಸನ್ನು ಜೀವಂತವಾಗಿಟ್ಟುಕೊಂಡಿದೆ. ಪಾಕಿಸ್ತಾನ ತಂಡವು ಇದೀಗ ಮತ್ತೊಂದು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಪಂದ್ಯವು ಸೆಪ್ಟೆಂಬರ್ 25ರಂದು ನಿಗದಿಯಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡವು ಅಧಿಕೃತವಾಗಿ ಫೈನಲ್‌ಗೆ ಲಗ್ಗೆಯಿಡಲಿದೆ. ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಶ್ರೀಲಂಕಾ ಎದುರು ಗೆಲುವು ಸಾಧಿಸಿತ್ತು. ಹೀಗಾಗಿ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಗುರುವಾರ ನಡೆಯಲಿರುವ ಪಂದ್ಯವು ಒಂದು ರೀತಿ ವರ್ಚುವಲ್ ಸೆಮಿಫೈನಲ್ ಪಂದ್ಯ ಎನಿಸಲಿದೆ.

ಸ್ಕೋರ್: ಲಂಕಾ 20 ಓವರಲ್ಲಿ 133/8 (ಕಮಿಂಡು 50, ಶಾಹೀನ್ 3-28), ಪಾಕಿಸ್ತಾನ 18 ಓವರಲ್ಲಿ 138/5 (ನವಾಜ್ 38*, ಹುಸೇನ್ 32*, ತೀಕ್ಷಣ 2-24, ಹಸರಂಗ 2-27)