Pakistan Coach Mike Hesson: ಏಷ್ಯಾಕಪ್‌ 2025 ಭಾನುವಾರ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಕೋಚ್  ಮೈಕ್ ಹೆಸ್ಸನ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಏಷ್ಯಾಕಪ್ ವಿಜೇತ ಭಾರತವನ್ನು ಎದುರಿಸಲು ಪಾಕಿಸ್ತಾನ ರೆಡಿ ಎಂದು ಹೇಳಿದ್ದಾರೆ.

ದುಬೈ: ಏಷ್ಯಾಕಪ್‌ನಲ್ಲಿ ಭಾನುವಾರ ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಪಾಕಿಸ್ತಾನದ ಕೋಚ್ ಮೈಕ್ ಹೆಸ್ಸನ್ ಎಚ್ಚರಿಕೆ ನೀಡಿದ್ದಾರೆ. ಒಮಾನ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ವಿಶ್ವ ಚಾಂಪಿಯನ್ ಮತ್ತು ಏಷ್ಯಾಕಪ್ ವಿಜೇತರಾದ ಭಾರತ ತಂಡವನ್ನು ಎದುರಿಸಲು ಪಾಕಿಸ್ತಾನ ಸಜ್ಜಾಗಿದೆ ಎಂದು ಹೇಳಿದ್ದಾರೆ.

ಭಾರತ ಈಗ ಉತ್ತಮ ಫಾರ್ಮ್‌ನಲ್ಲಿದೆ ಮತ್ತು ಆತ್ಮವಿಶ್ವಾಸದಿಂದ ತುಂಬಿದೆ ಎಂದು ನಮಗೆ ಗೊತ್ತು. ಅವರ ಇತ್ತೀಚಿನ ಪ್ರದರ್ಶನವನ್ನು ನೋಡಿದರೆ ಅದು ಸಹಜ. ಆದರೆ ನಾವೂ ಸಹ ಸಾಕಷ್ಟು ಸುಧಾರಿಸುತ್ತಿರುವ ತಂಡ. ಮುಂದಿರುವ ಸವಾಲಿನ ಬಗ್ಗೆ ನಮಗೆ ತಿಳಿದಿದೆ. ಆದರೆ ಆ ಸವಾಲನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಏಕೆಂದರೆ ನಮ್ಮ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ವಿಶೇಷವಾಗಿ ಪ್ರಸ್ತುತ ವಿಶ್ವದ ಅತ್ಯುತ್ತಮ ಸ್ಪಿನ್ನರ್ ಎನಿಸಿರುವ ಮೊಹಮ್ಮದ್ ನವಾಜ್ ನಮ್ಮ ತಂಡದಲ್ಲಿದ್ದಾರೆ. ಏಷ್ಯಾಕಪ್‌ಗೂ ಮುನ್ನ ನಡೆದ ತ್ರಿಕೋನ ಸರಣಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಹ್ಯಾಟ್ರಿಕ್ ಪಡೆದ ನವಾಜ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ನವಾಜ್ ಸೇರಿದಂತೆ ಐವರು ಸ್ಪಿನ್ನರ್‌ಗಳು ನಮ್ಮ ಬೌಲಿಂಗ್‌ನ ಬಲ ಎಂದು ಹೆಸ್ಸನ್ ಹೇಳಿದ್ದಾರೆ.

ಪಾಕ್ ಸ್ಪಿನ್ ವಿಭಾಗ ಬಲಿಷ್ಠವಾಗಿದೆ

ನವಾಜ್ ಜೊತೆಗೆ ಅಬ್ರಾರ್ ಅಹ್ಮದ್, ಶೌಫಿಯಾನ್ ಮುಖೀಮ್, ಸಯೀಮ್ ಅಯೂಬ್ ಕೂಡ ತಂಡದಲ್ಲಿದ್ದಾರೆ. ಸಯೀಮ್ ಉತ್ತಮ ಆಲ್‌ರೌಂಡರ್ ಕೂಡ. ಇವರ ಜೊತೆಗೆ ನಾಯಕ ಸಲ್ಮಾನ್ ಅಲಿ ಆಘಾ ಕೂಡ ಸೇರಿದಾಗ ಯಾವುದೇ ತಂಡಕ್ಕೆ ಪೈಪೋಟಿ ನೀಡಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತದೆ ಎಂದು ಹೆಸ್ಸನ್ ಹೇಳಿದ್ದಾರೆ. ಶಾರ್ಜಾದಲ್ಲಿ ಸ್ಪಿನ್ನರ್‌ಗಳಿಗೆ ಸಿಕ್ಕಿದ್ದ ಪಿಚ್‌ನ ಬೆಂಬಲ ದುಬೈನಲ್ಲಿ ಸಿಗುವ ನಿರೀಕ್ಷೆಯಿಲ್ಲ ಎಂದೂ ಅವರು ಹೇಳಿದ್ದಾರೆ.

ಯುಎಇ ವಿರುದ್ಧದ ಪಂದ್ಯದಲ್ಲಿ ಭಾರತದ ಕುಲ್ದೀಪ್ ಯಾದವ್ ನಾಲ್ಕು ವಿಕೆಟ್ ಪಡೆದಿದ್ದರೂ, ಚೆಂಡಿಗೆ ಹೆಚ್ಚು ತಿರುವು ಸಿಕ್ಕಿರಲಿಲ್ಲ. ಆದರೆ ಪಿಚ್‌ನಿಂದ ಬೆಂಬಲ ಸಿಗದಿದ್ದರೂ, ರಿಸ್ಟ್ ಸ್ಪಿನ್ನರ್‌ಗಳು ಯಾವುದೇ ಪರಿಸ್ಥಿತಿಯಲ್ಲಿಯೂ ಯಶಸ್ಸು ಗಳಿಸಬಲ್ಲರು ಎಂದು ಹೆಸ್ಸನ್ ಹೇಳಿದ್ದಾರೆ. ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಇಂದು ಒಮಾನ್‌ರನ್ನು ಎದುರಿಸಲಿರುವ ಪಾಕಿಸ್ತಾನ, ಭಾನುವಾರ ಭಾರತವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಭಾರತ ಒಂಬತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು.

ಕುತೂಹಲ ಕೆರಳಿಸಿರುವ ಮ್ಯಾಚ್

ಪೆಹಲ್ಗಾಂ ಉಗ್ರರ ದಾಳಿ ಇದಾದ ಬಳಿಕ ಆಪರೇಷನ್ ಸಿಂದೂರ್ ನಂತರ ಕ್ರಿಕೆಟ್‌ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಹೀಗಾಗಿ ಈ ಪಂದ್ಯದ ಮೇಲೆ ಸಾಕಷ್ಟು ಕುತೂಹಲ ಮನೆಮಾಡಿದೆ. ಇನ್ನು ಏಷ್ಯಾಕಪ್ ಟೂರ್ನಿ ಆರಂಭಕ್ಕೂ ಮೊದಲು ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಪಾಕಿಸ್ತಾನ ಎದುರು ತಾವು ಆಕ್ರಮಣಕಾರಿ ಆಟ ಆಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದೀಗ ಪಾಕ್ ಕೋಚ್ ಕೂಡಾ ನಾವು ಭಾರತದ ಸವಾಲು ಎದುರಿಸಲು ರೆಡಿ ಎನ್ನುವ ಸಂದೇಶ ನೀಡಿದ್ದಾರೆ. ಹೀಗಾಗಿ ಭಾರತ ಹಾಗೂ ಪಾಕ್ ನಡುವಿನ ಪಂದ್ಯದ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಏಷ್ಯಾಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ ಎಂಟು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಸೂರ್ಯ ಪಡೆ 9ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇನ್ನೊಂದು ಕಡೆ, ಪಾಕಿಸ್ತಾನ ತಂಡವು ಕೇವಲ ಎರಡು ಬಾರಿಯಷ್ಟೇ ಏಷ್ಯಾಕಪ್ ಜಯಿಸುವಲ್ಲಿ ಯಶಸ್ವಿಯಾಗಿದೆ. ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಅವರಂತಹ ಅನುಭವಿ ಆಟಗಾರರ ಕೊರತೆ ಪಾಕಿಸ್ತಾನ ತಂಡವನ್ನು ಕಾಡುವ ಸಾಧ್ಯತೆಯಿದೆ. ಕಳೆದ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತಂಡವು ಫೈನಲ್‌ಗೇರಲು ವಿಫವಾಗಿತ್ತು.