ರವೀಂದ್ರ ಜಡೇಜಾ ಅವರ ಆಲ್ರೌಂಡ್ ಪ್ರದರ್ಶನ (ಅಜೇಯ 104 ರನ್ ಮತ್ತು 4 ವಿಕೆಟ್) ಹಾಗೂ ಮೊಹಮ್ಮದ್ ಸಿರಾಜ್ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ, ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಇನ್ನಿಂಗ್ಸ್ ಹಾಗೂ 140 ರನ್‌ಗಳ ಭರ್ಜರಿ ಜಯ ಸಾಧಿಸಿದೆ. 

ಅಹಮದಾಬಾದ್‌: ರವೀಂದ್ರ ಜಡೇಜಾ ಆಲ್ರೌಂಡ್ ಪ್ರದರ್ಶನ ಹಾಗೂ ಮೊಹಮ್ಮದ್ ಸಿರಾಜ್ ಮಾರಕ ದಾಳಿಯ ನೆರವಿನಿಂದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ಎದುರು ಇನ್ನಿಂಗ್ಸ್ ಹಾಗೂ 140 ರನ್ ಅಂತರದ ಜಯ ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಅಜೇಯ ಶತಕ ಸಿಡಿಸಿದ ಜಡೇಜಾ, ಬೌಲಿಂಗ್‌ನಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಗೆಲುವಿನ ರೂವಾರಿ ಎನಿಸಿದರು.

ಭಾರತಕ್ಕೆ ಭಾರೀ ಜಯ

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಎರಡನೇ ದಿನದಾಟದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 448 ರನ್ ಬಾರಿಸಿದ್ದ ಟೀಂ ಇಂಡಿಯಾ, ಮೂರನೇ ದಿನದಾಟ ಆರಂಭಕ್ಕೂ ಮೊದಲೇ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 286 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತ್ತು. ಭಾರತ ಪರ ಕೆ ಎಲ್ ರಾಹುಲ್ 100, ಧ್ರುವ್ ಜುರೆಲ್ 125 ಹಾಗೂ ಉಪನಾಯಕ ರವೀಂದ್ರ ಜಡೇಜಾ ಅಜೇಯ 104 ರನ್ ಸಿಡಿಸಿದರೆ, ನಾಯಕ ಶುಭ್‌ಮನ್ ಗಿಲ್ 50 ರನ್ ಸಿಡಿಸಿದರು.

ಇನ್ನು ಭಾರೀ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. 24 ರನ್ ಗಳಿಸುವಷ್ಟರಲ್ಲಿ ವಿಂಡೀಸ್ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಅಲಿಕ್ ಅಥನಾಜೆ(38) ಹಾಗೂ ಜಸ್ಟೀನ್ ಗ್ರೀವಿಸ್(25) ಕೊಂಚ ಪ್ರತಿರೋಧ ತೋರಿದ್ದು ಬಿಟ್ಟರೇ ಉಳಿದ್ಯಾವ ಬ್ಯಾಟರ್‌ಗಳು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡವು 162 ರನ್‌ಗಳಿಗೆ ಸರ್ವಪತನ ಕಂಡಿತು.

Scroll to load tweet…

4 ವಿಕೆಟ್ ಜಡ್ಡು ಪಾಲು

ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 4 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 3, ಕುಲ್ದೀಪ್ ಯಾದವ್ 2 ಹಾಗೂ ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದರು.