drunk man adores tiger: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ, ಹುಲಿಯನ್ನು ಬೆಕ್ಕೆಂದು ಭಾವಿಸಿ ಮುದ್ದಿಸಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾದ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸತ್ಯಾಸತ್ಯತೆ ಬಗ್ಗೆ ಅನುಮಾನವಿದೆ
ಈ ಘಟನೆ ನಿಜವೋ ಸುಳ್ಳೋ ಗೊತ್ತಿಲ್ಲ, ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಈ ಸುದ್ದಿ ಭಾರಿ ವೈರಲ್ ಆಗ್ತಿದೆ. ಹಾಗೂ ಇದು ನಿಜ ಎಂದೇ ಹೇಳಲಾಗ್ತಿದೆ. ಆದರೆ ಈ ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗಿಲ್ಲ. ಅದೇನು ಅಂತ ನೋಡೋಣ ಬನ್ನಿ.
ಕುಡಿದ ಮತ್ತಿನಲ್ಲಿ ಹುಲಿಯ ಮುದ್ದಿಸಿದ ಕುಡುಕ
ಮಧ್ಯಪ್ರದೇಶದಲ್ಲಿ ನಂಬಲಾಗದ ಘಟನೆಯೊಂದು ನಡೆದಿದೆ. ಅನೇಕರಿಗೆ ಮದ್ಯಪಾನ ಮಾಡಿದ ನಂತರ ತಾವೇನು ಮಾಡ್ತಿದ್ದೇವೆ ಎಂಬುದರ ಅರಿವು ಇರುವುದಿಲ್ಲ. ಮುಂದಿರುವುದು ಹುಲಿಯೋ ಬೆಕ್ಕೋ ಎಂಬುದರ ಬಗ್ಗೆಯೂ ಗೊಂದಲ ಇರುತ್ತದೆ. ವರದಿ ಪ್ರಕಾರ ಇಲ್ಲೊಬ್ಬ ವ್ಯಕ್ತಿಗೂ ಅದೇ ಆಗಿದೆ. ಚಿರತೆ ಎಂದು ಭಾವಿಸಿ ಕುಡಿದ ಮತ್ತಿನಲ್ಲಿ ಕುಡುಕನೋರ್ವ ಹುಲಿಯನ್ನು ಮುದ್ದಿಸಿ ಅದಕ್ಕೆ ಮದ್ಯ ಕುಡಿಸಲು ಯತ್ನಿಸಿದ್ದಾನೆ. ಮಧ್ಯಪ್ರದೇಶದ ಪೆಂಚ್ ಹುಲಿ ರಕ್ಷಿತಾರಣ್ಯದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆಕ್ಟೋಬರ್ 4 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸಿಸಿಟಿವಿಯಲ್ಲಿ ಈ ಅಪರೂಪದ ದೃಶ್ಯ ರೆಕಾರ್ಡ್ ಆಗಿದೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ: ಹುಲಿಯ ವರ್ತನೆ ನೋಡಿ ಅಚ್ಚರಿಪಟ್ಟ ಜನ
ಸಾಮಾನ್ಯವಾಗಿ ಹುಲಿಗಳು ಮನುಷ್ಯರನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ, ಹಾಗೂ ಕ್ರೂರ ಪ್ರಾಣಿಗಳೆನಿಸಿದ ಹುಲಿಗಳ ಮುಂದೆ ಹುಚ್ಚಾಟವಾಡಿದರೆ ಸಿಗಿದು ಚಿಂದಿ ಚಿತ್ರಾನ್ನಾ ಮಾಡೋದ್ರಲ್ಲಿ ಡೌಟೇ ಇಲ್ಲ, ಆದರೆ ಇಲ್ಲಿ ದೃಶ್ಯಾವಳಿಯಲ್ಲಿ ಕಾಣುವಂತೆ ಹುಲಿ ಕುಡುಕನಿಗೆ ಏನು ಮಾಡದೇ ಸುಮ್ಮನೇ ಇದೆ. ಆತನ ಹುಚ್ಚಾಟವನ್ನು ಕೋಪಗೊಳ್ಳದೇ ಸಹಿಸಿಕೊಂಡಿದೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇದು ಎಐ ವೀಡಿಯೋ ಆಗಿರಬಹುದು ಎಂದು ಅನೇಕರು ಅಚ್ಚರಿಪಟ್ಟಿದ್ದಾರೆ.
ಈ ವೀಡಿಯೋವನ್ನು Mukul Dekhane ಎಂಬುವವರು ಈ ವೀಡಿಯೋವನ್ನು ಹಂಚಿಕೊಂಡಿದ್ದು, ಹೀಗೆ ಬರೆದಿದ್ದಾರೆ. ಅಕ್ಟೋಬರ್ 4, 2025 ರಂದು, ಭಾರತದ ಪೆಂಚ್ನಲ್ಲಿ, ಸಿಸಿಟಿವಿಯಲ್ಲಿ ಸೆರೆಯಾದ ಒಂದು ನಂಬಲಾಗದ ಕ್ಷಣ. 52 ವರ್ಷದ ಕಾರ್ಮಿಕ ರಾಜು ಪಟೇಲ್, ತಡರಾತ್ರಿ ಇಸ್ಪೇಟ್ ಆಟದ ನಂತರ ಮನೆಯಲ್ಲಿ ತಯಾರಿಸಿದ ಮದ್ಯ(ಕಳ್ಳಭಟ್ಟಿ) ಕುಡಿದು ಬೆಕ್ಕು ಎಂದು ತಪ್ಪಾಗಿ ಭಾವಿಸಿ ಹುಲಿಯ ಬೆನ್ನು ತಟ್ಟಿದ್ದಾನೆ. ಕುಡಿದಿದ್ದು ತಲೆಗೇರಿದ ನಂತರ ರಾಜು ಬೀದಿಗೆ ಬಂದಾಗ, ಅಲ್ಲಿ ಮಳೆಗಾಲದ ಪ್ರವಾಹದಿಂದ ಸ್ಥಳಾಂತರಗೊಂಡ ಒಂದು ಕಡಿಮೆ ವಯಸ್ಕ ಬಂಗಾಳ ಹುಲಿ ಹತ್ತಿರದ ಪೆಂಚ್ ಹುಲಿ ಅಭಯಾರಣ್ಯದಿಂದ ತಪ್ಪಿಸಿಕೊಂಡು ಅಲೆದಾಡುತ್ತಿತ್ತು.
ಆದರೆ ರಾಜು ಭಯಪಡದೆ ಅದರ ಹತ್ತಿರ ಹೋಗಿ ಪಕ್ಕಕ್ಕೆ ಹೋಗು, ಕಿಟ್ಟಿ ಎಂದು ಗೊಣಗುತ್ತಾ ಅದರ ತಲೆಯನ್ನು ನಿಧಾನವಾಗಿ ಮುಟ್ಟಿದ್ದಾನೆ. 5ರಿಮದ 10 ನಿಮಿಷಗಳ ಕಾಲ ರಾಜು ಹಾಗೂ ಕಿಟ್ಟಿ ಜೊತೆಗೆ ಸ್ನೇಹಿತರಂತೆ ಇದ್ದರು. ರಾಜು ತನ್ನ ಕೈಯಲ್ಲಿದ್ದ ಬಾಟಲಿಯಿಂದ ಅದಕ್ಕೆ ಒಂದು ಸಿಪ್ ಕೊಡಲು ಮುಂದಾದ ಆದರೆ ಅದು ನಿರ್ಲಕ್ಷಿಸಿತು. ಇದಾದ ನಂತರ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ದಣಿದಿದ್ದ ಹುಲಿಯನ್ನು ಬೆಳಗ್ಗೆ 3 ಗಂಟೆಯ ಹೊತ್ತಿಗೆ ಕಾಡಿಗೆ ಬಿಟ್ಟರು ಯಾರಿಗೂ ಈ ಘಟನೆಯಲ್ಲಿ ಹಾನಿಯಾಗಲಿಲ್ಲ. ಆದರೆ ರಾಜು ಮಾತ್ರ ಈ ಪ್ರದೇಶದಲ್ಲಿ ರಾತ್ರೋರಾತ್ರಿ ಹೀರೋ ಆದರು ಎಂದು ಬರೆದಿದ್ದಾರೆ.
ಜೊತೆಗೆ ಹೊಸ ಮಾಹಿತಿ ಪ್ರಕಾರ ಆತ ಹುಲಿಯನ್ನು ಮುದ್ದು ಮಾಡುವುದಕ್ಕೆ ಧೈರ್ಯ ನೀಡಿದ ಮನೆಯಲ್ಲೇ ತಯಾರಿಸಿದ ಮದ್ಯದ ರೆಸಿಪಿಯನ್ನು ಕೇಳಿ ಜನ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ರಾಜು ಈಗ ಭಾರೀ ಪೊಲೀಸ್ ರಕ್ಷಣೆಯಲ್ಲಿದ್ದಾನೆ ಮತ್ತು ಅವನ ಸಾಮಾಜಿಕ ಮಾಧ್ಯಮ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದೂ ಅವರು ಬರೆದಿದ್ದಾರೆ. ಹೀಗಾಗಿ ಇದೊಂದು ನಕಲಿ ಸುದ್ದಿಯಾಗಿರಬಹುದು ಎಂಬ ಅನುಮಾನವಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರಿ ವೈರಲ್ ಆಗ್ತಿದ್ದು, 4 ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋವನ್ನು ವೀಕ್ಷಿಸಿ ಕಾಮೆಂಟ್ ಮಾಡ್ತಿದ್ದಾರೆ.
ಇದನ್ನೂ ಓದಿ: ಕೆನಡಾದಲ್ಲಿ ಬಿಷ್ಣೋಯ್ ಗ್ಯಾಂಗ್ನಿಂದ ಭಾರತೀಯ ಉದ್ಯಮಿಯ ಹತ್ಯೆ
ಇದನ್ನೂ ಓದಿ: ಎರಡೂ ಕೈ, 2 ಕಾಲುಗಳು ಇಲ್ಲದ ದೇಶದ ಮೊದಲ ಬಿಲ್ಲುಗಾರ್ತಿ ಈ ಬಾಲಕಿ
