ರಜನಿಕಾಂತ್ ಅಭಿನಯದ 'ಕೂಲಿ' ಸಿನಿಮಾ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಮೊದಲ ದಿನ ವಿಶ್ವಾದ್ಯಂತ 130 ಕೋಟಿ ಗಳಿಕೆ ಕಂಡಿದೆ. ಕರ್ನಾಟಕದಲ್ಲಿ 10 ಕೋಟಿ ಗಳಿಕೆ ಮಾಡಿದೆ.
ಬೆಂಗಳೂರು (ಆ.15): ರಜನಿಕಾಂತ್ ನಟನೆಯ ಬಹುನಿರೀಕ್ಷೆಯ ‘ಕೂಲಿ’ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಮೊದಲ ದಿನ ಹೆಚ್ಚಿನೆಡೆ ಈ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಂಡಿದ್ದು, ವಿಶ್ವಾದ್ಯಂತ ಮೊದಲ ದಿನದ ಗಳಿಕೆ ಅಂದಾಜು 130 ಕೋಟಿ ರು. ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಸುಮಾರು 53 ಕೋಟಿ ರು.ಗಳಷ್ಟು ಮೊದಲ ದಿನದ ಗಳಿಕೆ ದಾಖಲಾಗಿದೆ.
ಕರ್ನಾಟಕದಲ್ಲೂ ಮೊದಲ ದಿನ ‘ಕೂಲಿ’ ಅರ್ಭಟ ಜೋರಾಗಿಯೇ ಇತ್ತು. ಟಿಕೆಟ್ ದರ ಗಗನಕ್ಕೇರಿದ್ದರೂ ಕ್ಯಾರೇ ಅನ್ನದ ರಜನಿ ಅಭಿಮಾನಿಗಳು, ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ನೋಡಲು ತುದಿಗಾಲಲ್ಲಿ ನಿಂತಿದ್ದರು. ಚೆನ್ನೈಯಲ್ಲಿ ಗರಿಷ್ಠ ರು. 4500ವರೆಗೆ ಹೋಗಿದ್ದ ಟಿಕೆಟ್ ದರ ಬೆಂಗಳೂರಿನಲ್ಲಿ 2500 ರು.ಗಳವರೆಗೂ ಏರಿತ್ತು. ಆದರೆ ಅಷ್ಟೂ ಟಿಕೆಟ್‌ಗಳೂ ಸೋಲ್ಡೌಟ್ ಆಗಿದ್ದವು.
ಬೆಂಗಳೂರಿನಲ್ಲಿ ಒಟ್ಟು 905 ರಷ್ಟು ಶೋಗಳು ದಾಖಲಾದರೆ, ರಾಜ್ಯಾದ್ಯಂತ ‘ಕೂಲಿ’ ಚಿತ್ರದ 1800ಕ್ಕೂ ಅಧಿಕ ಪ್ರದರ್ಶನಗಳು ನಡೆದಿವೆ. ರಾಜ್ಯದಲ್ಲಿ ಮೊದಲ ದಿನ 10 ಕೋಟಿಗಳಷ್ಟು ಗಳಿಕೆಯಾಗಿದೆ ಎನ್ನಲಾಗಿದೆ.
ಆದರೆ ಮುಂಜಾನೆಯಲ್ಲಿದ್ದ ಆಸಕ್ತಿ ಸಂಜೆ ವೇಳೆಗೆ ಕಳೆದುಹೋಗಿದೆ. ಸಿನಿಮಾದ ಬಗ್ಗೆ ನೆಗೆಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದ್ದೇ ಜನರ ಆಸಕ್ತಿ ಕಡಿಮೆಯಾಗಿದೆ. ಇದರಿಂದ ಶುಕ್ರವಾರದ ಬುಕ್ಕಿಂಗ್‌ನಲ್ಲಿ ಇಳಿಕೆಯಾಗಿದೆ.
ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ಮೊದಲ ದಿನ 140 ಕೋಟಿ ಕಲೆಕ್ಷನ್ ದಾಖಲಿಸಿತ್ತು. ಈ ಚಿತ್ರ ಆ ದಾಖಲೆಯನ್ನು ಮುರಿಯುವ ನಿರೀಕ್ಷೆ ಇತ್ತು. ಆದರೆ ‘ಕೂಲಿ’ 130 ಕೋಟಿ ರು.ಗೆ ತೃಪ್ತಿ ಪಟ್ಟುಕೊಳ್ಳಬೇಕಾಯ್ತು.
