ರಜನಿಕಾಂತ್ ಅಭಿನಯದ ಕೂಲಿ ಸಿನಿಮಾ ಬಿಡುಗಡೆಯ ನಂತರ ಮೊದಲ ವಾರಾಂತ್ಯದಲ್ಲಿ ₹404 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಮೂಲಕ ತಮಿಳು ಸಿನಿಮಾ ಇತಿಹಾಸದಲ್ಲಿಯೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ದಾಖಲೆಯನ್ನು ಕೂಲಿ ತನ್ನ ಹೆಸರಿಗೆ ಬರೆದುಕೊಂಡಿದೆ.
ದಕ್ಷಿಣ ಭಾರತದದ ತಮಿಳು ಸಿನಿಮಾದಲ್ಲಿ ಈ ವರ್ಷ ಅತಿ ಹೆಚ್ಚು ಕುತೂಹಲ ಮೂಡಿಸಿದ್ದ ಚಿತ್ರ ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth Coolie Movie) ಅವರ ನಟನೆಯ ಕೂಲಿ ಸಿನಿಮಾ. ಈ ಸಿನಿಮಾ ಘೋಷಣೆಯಾದಾಗಿನಿಂದಲೂ ಪ್ರೇಕ್ಷಕರಲ್ಲಿ ಉತ್ಸಾಹ ಹೆಚ್ಚಿಸಿತ್ತು.
ಕಾಲಿವುಡ್‌ನ ಯುವ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ರಜನಿಕಾಂತ್ ಮೊದಲ ಬಾರಿಗೆ ನಟಿಸುತ್ತಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿತ್ತು. ಆದರೆ ಲೋಕೇಶ್ ಅವರ ಹಿಂದಿನ ಚಿತ್ರಗಳಿಗೆ ಸಿಕ್ಕ ಪ್ರತಿಕ್ರಿಯೆ ಕೂಲಿ ಸಿನಿಮಾಗೆ ಸಿಗಲಿಲ್ಲ. ಪ್ರೇಕ್ಷಕರಿಂದ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ ಇದು ಓಪನಿಂಗ್ ಕಲೆಕ್ಷನ್ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಏಕೆಂದರೆ ಚಿತ್ರಕ್ಕೆ ದಾಖಲೆಯ ಮುಂಗಡ ಬುಕಿಂಗ್ ಆಗಿತ್ತು. ಮೊದಲ ದಿನ ಮಾತ್ರವಲ್ಲದೆ, ಭಾನುವಾರದವರೆಗಿನ ಮೊದಲ ವಾರಾಂತ್ಯದ ದಿನಗಳಲ್ಲಿ ಉತ್ತಮ ಮುಂಗಡ ಬುಕಿಂಗ್ ಆಗಿತ್ತು. ಈಗ ಚಿತ್ರದ ಮೊದಲ ವಾರಾಂತ್ಯದ ಕಲೆಕ್ಷನ್ ಅನ್ನು ನಿರ್ಮಾಪಕರಾದ ಸನ್ ಪಿಕ್ಚರ್ಸ್ ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಸನ್ ಪಿಕ್ಚರ್ಸ್ ಬಿಡುಗಡೆ ಮಾಡಿರುವ ಕೂಲಿ ಸಿನಿಮಾದ ಎರಡನೇ ಅಧಿಕೃತ ಕಲೆಕ್ಷನ್ ಇದು. ಮೊದಲ ದಿನದ ಜಾಗತಿಕ ಕಲೆಕ್ಷನ್ ಅನ್ನು ಅವರು ಈ ಹಿಂದೆ ಘೋಷಿಸಿದ್ದರು. ಬಿಡುಗಡೆ ದಿನದಂದು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ₹151 ಕೋಟಿ ಗಳಿಸಿದೆ ಎಂದು ತಿಳಿಸಿದ್ದರು. ಈಗ ಮೊದಲ 4 ದಿನಗಳ ಕಲೆಕ್ಷನ್ ಅನ್ನು ಸ್ವತಃ ಸಿನಿಮಾ ನಿರ್ಮಾಣ ಸಂಸ್ಥೆಯೇ ಘೋಷಣೆ ಮಾಡಿದೆ. ಬಿಡುಗಡೆ ದಿನವಾದ ಗುರುವಾರದಿಂದ ಭಾನುವಾರದವರೆಗೆ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ₹404 ಕೋಟಿಗೂ ಹೆಚ್ಚು ಗಳಿಸಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಇನ್ನು ಸಿನಿಮಾ ಟ್ರ್ಯಾಕರ್‌ಗಳು ಸಿನಿಮಾ ಆದಾಯದ ಬಗ್ಗೆ ಹೇಳಿದ್ದಕ್ಕಿಂತ ಸ್ವಲ್ಪ ಹೆಚ್ಚಿನ ಮೊತ್ತ ಇದು. ಪ್ರಮುಖ ಟ್ರಾಕರ್ Sacnilk ಪ್ರಕಾರ, ಕೂಲಿ ಸಿನಿಮಾದ ಮೊದಲ ವಾರಾಂತ್ಯದ ಒಟ್ಟು ಗಳಿಕೆ ₹385 ಕೋಟಿ. ಮತ್ತೊಂದು ಪ್ರಮುಖ ಟ್ರಾಕರ್ Cinetrak ಪ್ರಕಾರ, ಚಿತ್ರದ ಮೊದಲ ವಾರಾಂತ್ಯದ ಒಟ್ಟು ಗಳಿಕೆ ₹374 ಕೋಟಿ. ತಮಿಳು ಸಿನಿಮಾದ ಇತಿಹಾಸದಲ್ಲಿ ಅತಿ ಹೆಚ್ಚು ಓಪನಿಂಗ್ ಕಲೆಕ್ಷನ್, ಅತಿ ವೇಗವಾಗಿ ₹300 ಕೋಟಿ ಗಳಿಸಿದ ತಮಿಳು ಚಿತ್ರ ಎಂಬ ಖ್ಯಾತಿಯನ್ನು ಕೂಲಿ ಸಿನಿಮಾ ಗಳಿಸಿತ್ತು. ಈ ಮೂಲಕ ಮೊದಲ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ದಾಖಲೆಯನ್ನು ಕೂಲಿ ಸಿನಿಮಾ ತನ್ನ ಹೆಸರಿಗೆ ಮಾಡಿಕೊಂಡಿದೆ. ಇನ್ನು ಈ ಚಿತ್ರವು ವಾರದ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದನ್ನು ತಿಳಿಯಲು ಟ್ರಾಕರ್‌ಗಳು ಕಾಯುತ್ತಿದ್ದಾರೆ.
