ದೇವರ ಸ್ಥಳದಿಂದ ಕೊನೆಯ ಪತ್ರ ಬಂದಿತ್ತು. ಬಳಿಕ ತಾಯಿ ಬಗ್ಗೆ ಸುಳಿವಿಲ್ಲ. ಇಷ್ಟು ವರ್ಷವಾದರೂ ತಾಯಿಯ ಮೃತದೇಹವೂ ಪತ್ತೆಯಾಗಿಲ್ಲ ಎಂದು ಪುತ್ರಿ ಪೂಜಾ ಬೇಡಿ ನೋವು ತೋಡಿಕೊಂಡಿದ್ದಾರೆ. ಪೂಜಾ ಬೇಡಿಗೆ ಏನಾಗಿತ್ತು? ಕೊನೆಯ ಪತ್ರದಲ್ಲಿ ಏನಿತ್ತು?
ಮುಂಬೈ (ಆ.21) ದೇವರ ಸ್ಥಳದಲ್ಲಿ ನಾನು ಅತೀವ ಖುಷಿಯಾಗಿದ್ದೇನೆ. ಈ ಸ್ಥಳ ನನ್ನ ಸಂತೋಷ ಹೆಚ್ಚಿಸುತ್ತಿದೆ. ಜೀವನದಲ್ಲಿ ತೃಪ್ತಿ ಭಾವ ನೀಡುತ್ತಿದೆ ಎಂದು ಬರೋಬ್ಬರಿ 12 ಪುಟಗಳ ಪತ್ರ ಬರೆದಿದ್ದ ತಾಯಿ ಪ್ರೊತಿಮಾ ಬೇಡಿ, ಬಳಿಕ ಸುಳಿವೇ ಇರಲಿಲ್ಲ. 1998ರ ಬಳಿಕ ತಾಯಿಯ ಸುಳಿವಿಲ್ಲ. ತಾಯಿಯ ಮೃತೇದಹವೂ ಪತ್ತೆಯಾಗಿಲ್ಲ ಎಂದು ನಟಿ ಪೂಜಾ ಬೇಡಿ ನೋವು ತೋಡಿಕೊಂಡಿದ್ದಾರೆ. ಇತ್ತೀಚೆಗೆ ಪೂಜಾ ಬೇಡಿ ತಮ್ಮ ತಾಯಿಯ ಅಂತಿಮ ದಿನಗಳ ಕುರಿತು ಮಾತನಾಡಿ ಭಾವುಕರಾಗಿದ್ದಾರೆ ತಾಯಿ ಜೊತೆ ಹೆಚ್ಚು ಸಮಯ ಕಳೆಯಬೇಕಿತ್ತು ಎಂದಿದ್ದಾರೆ.
ಬೆಂಗಳೂರಿನಲ್ಲಿ ನಿತ್ಯಗ್ರಾಮ ಶಾಲೆ ಆರಂಭಿಸಿದ್ದ ಪ್ರೊತಿಮಾ
ಬಾಲಿವುಡ್ ಸಿನಿಮಾದಲ್ಲಿ ಹಲವು ಪಾತ್ರ ನಿಭಾಯಿಸಿರುವ ಪೂಜಾ ಬೇಡಿ, ಟಿವಿ ನಿರೂಪಕಿಯಾಗಿ, ಬಿಗ್ ಬಾಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪೂಜಾ ಬೇಡಿ ತಾಯಿ ಪ್ರೊತಿಮಾ ಬೇಡಿ ಮಾಡೆಲ್‌ನಿಂದ ಒಡಿಶಾ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ನಿತ್ಯಗ್ರಾಮ ನೃತ್ಯ ಶಾಲೆ ಆರಂಭಿಸಿದ ಕೀರ್ತಿಯೂ ಇದೇ ಪ್ರೊತಿಮಾ ಬೇಡಿಗಿದೆ. ಆದರೆ ಪ್ರೊತಿಮಾ ಬೇಡಿ ತಮ್ಮ 49ನೇ ವಯಸ್ಸಿನಲ್ಲಿ ಹಿಮಾಲಯದ ತಪ್ಪಲಿನಲ್ಲಿ ಪ್ರಾಣ ತ್ಯಜಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರೊತಿಮಾ ಬೇಡಿ ಕುರಿತು ಇತ್ತೀಚೆಗೆ ಪೂಜಾ ಬೇಡಿ ಭಾವುಕರಾಗಿ ಮಾತನಾಡಿದ್ದಾರೆ.
ಪೂಜಾ ಬೇಡಿ ಭಾವುಕ ಮಾತು
ತಾಯಿ 49ನೇ ವಯಸ್ಸಿನಲ್ಲಿ ನಾಪತ್ತೆಯಾಗಿ ಬಳಿಕ ಸುಳಿವೇ ಪತ್ತೆಯಾಗಲಿಲ್ಲ. ತಾಯಿ ತಾನು ಹೇಗೆ ಬದುಕಬೇಕು, ಹೇಗೆ ಕೊನೆಯ ದಿನ ಕಳೆಯಬೇಕು ಎಂದು ನಿರ್ಧರಿಸಿದರೋ ಹಾಗೆ ಮಾಡಿದರು. ಆದರೆ ನಾನು ತಾಯಿ ಜೊತೆ ಹೆಚ್ಚು ಸಮಯ ಕಳೆಯಬೇಕಿತ್ತು ಅನ್ನೋ ಕೊರಗು ಈಗಲೂ ಕಾಡುತ್ತಿದೆ ಎಂದು ಪೂಜಾ ಬೇಡಿ ಹೇಳಿದ್ದಾರೆ. ಪ್ರೊತಿಮಾ ಬೇಡಿಗೆ ಶವಸಂಸ್ಕಾರ ಮಾಡುವುದು, ಅಂತ್ಯಕ್ರಿಯೆ, ಶ್ರಾದ್ಧ ಸೇರಿದಂತೆ ಈ ಯಾವುದೇ ಪ್ರಕ್ರಿಯೆಗಲು,ವಿಧಿ ವಿಧಾನ ಮಾಡುವುದು ಇಷ್ಟವಿರಲಿಲ್ಲ. ಈ ಪ್ರಕೃತಿ ನಮಗೆ ಬದುಕಲು, ಉಸಿರಾಡಲು, ಸ್ವಚ್ಚಂದವಾಗಿ ಇರಲು ಅವಕಾಶ ನೀಡಿದೆ. ಹೀಗಾಗಿ ಈ ದೇಹ ಕೂಡ ಪ್ರಕೃತಿಗೆ ಸಮರ್ಪಿತವಾಗಿದೆ ಎಂದು ಹೇಳುತ್ತಿದ್ದರು. ಅದರಂತೆ ಅವರ ಅಂತ್ಯವೂ ಆಯಿತು. ಅವರ ದೇಹ ಪ್ರಕೃತಿಯಲ್ಲಿ ಎಲ್ಲೋ ಲೀನವಾಯಿತು. ನಮಗೆ ತಾಯಿಯ ಮೃತೇದಹವೂ ಸಿಗಲಿಲ್ಲ ಎಂದು ಪೂಜಾ ಬೇಡಿ ಹೇಳಿದ್ದಾರೆ.
ತಾಯಿಯ ಕೊನೆಯ ಪ್ರವಾಸಕ್ಕೂ ಮುನ್ನ ಏನಾಯಿತು?
ಪ್ರವಾಸ ತೆರಳುವ ಮುನ್ನ ತಾಯಿ ನನ್ನ ಬಳಿ ಆಗಮಿಸಿ ನಿನಗೆ ಏನೂ ಗೊತ್ತಿಲ್ಲ ಎಂದು ತನ್ನಲ್ಲಿದ್ದ ಒಡವೆ, ದಾಖಲೆ ಪತ್ರ, ಆಸ್ತಿ ಎಲ್ಲವನ್ನೂ ನನಗೆ ನೀಡಿದರು. ತಾಯಿಯ ಈ ನಡೆ ನನಗೆ ಅಚ್ಚರಿ ತಂದಿತ್ತು. ಇವತ್ತು ಯಾಕೆ ನಾಟಕೀಯ ರೀತಿಯಲ್ಲಿ ವರ್ತಿಸುತ್ತಿದ್ದೀಯಾ ಎಂದು ಪ್ರಶ್ನಿಸಿದ್ದೆ. ಮಗನ ಬದುಕು ಅಂತ್ಯವಾಗಿದೆ. ಈಗ ನನ್ನ ಬೆಳಕು ನೀನು ಮಾತ್ರ. ಬೆಂಗಳೂರಿನ ನಿತ್ಯಗ್ರಾಮವನ್ನು ಲಿನ್ ಫೆರ್ನಾಂಡಿಸ್‌ಗೆ ವಹಿಸಿದ್ದೇನೆ. ನೀನು ಮುಂದೆ ಸಾಗಬೇಕು ಎಂದು ಹೇಳಿ ಪ್ರವಾಸಕ್ಕೆ ಹೊರಟರು ಎಂದು ಪೂಜಾ ಬೇಡಿ ತಾಯಿ ಕೊನೆಯ ಬೇಟಿ ಕುರಿತು ಮಾತನಾಡಿದ್ದಾರೆ.
ಕುಲುವಿನಿಂದ ಪತ್ರ ಬರೆದ ತಾಯಿ
ಕುಲು ಮನಾಲಿ ತೆರಳಿದ ತಾಯಿ ಪ್ರೊತಿಮಾ ಬೇಡಿ ಅಲ್ಲಿಂದ 12 ಪುಟಗಳ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ತಾಯಿಯ ಬಾಲ್ಯ, ಶಾಲೆ, ಮಾಡೆಲಿಂಗ್, ನೃತ್ಯ ಸೇರಿದಂತೆ ಬದುಕಿನ ಪಯಣ ಹೇಳಿಕೊಂಡಿದ್ದಾರೆ. ಬಳಿಕ ಕುಲು ಮನಾಲಿ ಕುರಿತು ವಿವರಿಸಿದ್ದಾರೆ. ಕುಲು ಎಂದರೆ ದೇವರ ಕಣಿವೆ ನಾಡು ಎಂದರ್ಥ. ಈ ಸ್ಥಳದಲ್ಲಿ ನಾನು ಅತೀವ ಸಂತೋಷದಲ್ಲಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದು ತಾಯಿ ಬರೆದ ಕೊನೆಯ ಪತ್ರ ಬಳಿಕ ತಾಯಿಯ ಸುಳಿವಿಲ್ಲ. ತನಿಖಾ ಸಂಸ್ಥೆಗಳು ಪ್ರೊತಿಮಾ ಬೇಡಿ ಹಿಮಾಲಯ ಬೆಟ್ಟದ ತಪ್ಪಲಿನಲ್ಲಿ ಬದುಕು ಅಂತ್ಯಗೊಳಿಸಿರುವ ಸಾಧ್ಯತೆ ಇದೆ. ಅವರ ಸುಳಿವಿಲ್ಲ ಎಂದಿತ್ತು. ಇಲ್ಲೀವರೆಗೂ ತಾಯಿ ಮೃತದೇಹ ಪತ್ತೆಯಾಗಿಲ್ಲ. ತಾಯಿ ತಾನು ಹೇಗೆ ಅಂತ್ಯಕಾಲ ಕಳೆಯಬೇಕು ಎಂದು ಬಯಸಿದ್ದರೋ ಅದೇ ರೀತಿ ಕಳೆದಿದ್ದಾರೆ ಎಂದು ಪೂಜಾ ಬೇಡಿ ಹೇಳಿದ್ದಾರೆ.
