ಈ ಹಂತಕ್ಕೆ ಬರಲು ನನ್ನ ಪತ್ನಿ ಪ್ರಗತಿ ಶೆಟ್ಟಿ ದೇವರಿಗೆ ಎಷ್ಟು ಹರಕೆ ಹೊತ್ತಿದ್ದಾಳೋ ನನಗೆ ಗೊತ್ತಿಲ್ಲ. ಅರಣ್ಯ ಸಚಿವರಿಂದ ಹಿಡಿದು ಊರಿನ ಜನರು ಸೇರಿದಂತೆ ಎಲ್ಲರೂ ನಮಗೆ ಸಪೋರ್ಟ್‌ ಮಾಡಿದ್ದಾರೆ ಎಂದು ರಿಷಬ್‌ ಶೆಟ್ಟಿ ಹೇಳಿದರು.

ಅ.2ಕ್ಕೆ ತೆರೆಗೆ ಬರುತ್ತಿರುವ ‘ಕಾಂತಾರ 1’ ಚಿತ್ರದ ಟ್ರೇಲರ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ಬಿಡುಗಡೆ ಹಾಗೂ ಟ್ರೇಲರ್‌ ಅನಾವರಣಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಚಿತ್ರದ ಮೊದಲ ಪತ್ರಿಕಾಗೋಷ್ಟಿಯಲ್ಲಿ ರಿಷಬ್‌ ಶೆಟ್ಟಿ ಹೇಳಿದ ಮಾತುಗಳು ಇಲ್ಲಿವೆ.

1. ಒಂದು ಚಿತ್ರ ಬಿಡುಗಡೆ ಆದಾಗ ಅದರ ಬಜೆಟ್ಟು, ಗಳಿಕೆ, ಲಾಸು, ಲಾಭ ಲೆಕ್ಕಾಚಾರಗಳನ್ನೇ ಹೆಚ್ಚು ಮಾತಾಡುತ್ತೇವೆ. ಆದರೆ, ಆ ಸಿನಿಮಾದಿಂದ ಸಿಗುವ ಕೆಲಸ, ಅನ್ನದ ಬಗ್ಗೆಯೂ ಮಾತನಾಡಬೇಕಿದೆ. ‘ಕಾಂತಾರ 1’ ಚಿತ್ರದಿಂದ ಈ 3 ವರ್ಷದಲ್ಲಿ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಊಟ ದೊರಕಿದೆ. ಪ್ರತೀ ದಿನ ಸಾವಿರಾರು ಜನಕ್ಕೆ ಕೆಲಸ ಸಿಕ್ಕಿದೆ.

2. ಎಲ್ಲರು ಹೇಳುವಂತೆ ಈ ಸಿನಿಮಾ ಪಂಚವಾರ್ಷಿಕ ಯೋಜನೆ ಎಂಬುದು ಸರಿ. ತುಂಬಾ ಕಷ್ಟಗಳನ್ನು ದಾಟಿ ಈಗ ಬಿಡುಗಡೆ ಹಂತಕ್ಕೆ ಬಂದಿದ್ದೇವೆ. ಈ ಹಂತಕ್ಕೆ ಬರಲು ನನ್ನ ಪತ್ನಿ ಪ್ರಗತಿ ಶೆಟ್ಟಿ ದೇವರಿಗೆ ಎಷ್ಟು ಹರಕೆ ಹೊತ್ತಿದ್ದಾಳೋ ನನಗೆ ಗೊತ್ತಿಲ್ಲ. ಅರಣ್ಯ ಸಚಿವರಿಂದ ಹಿಡಿದು ಊರಿನ ಜನರು ಸೇರಿದಂತೆ ಎಲ್ಲರೂ ನಮಗೆ ಸಪೋರ್ಟ್‌ ಮಾಡಿದ್ದಾರೆ. ಹೀಗಾಗಿ ಇದು ನನ್ನ ಒಬ್ಬನ ಚಿತ್ರವಲ್ಲ. ನಮ್ಮೆಲ್ಲರ ಸಿನಿಮಾ.

3. ಕಳೆದ ಮೂರು ತಿಂಗಳಿನಿಂದ ನಮ್ಮ ತಂಡ ನಿದ್ದೆ ಇಲ್ಲದೆ ಕೆಲಸ ಮಾಡಿದೆ. ಟ್ರೇಲರ್‌ ಚೆನ್ನಾಗಿ ಬಂದಿದೆ ಎಂದರೆ ಅದು ತಂಡದ ಶ್ರಮ. ನಿರ್ಮಾಪಕ ವಿಜಯ್‌ ಕಿರಗಂದೂರು ನಾನು ಫೋನ್‌ನಲ್ಲಿ ಹೇಳಿದ ಒಂದು ಸಾಲಿನ ಕತೆ ಕೇಳಿ ಇಲ್ಲಿವರೆಗೂ ನನ್ನ ಜೊತೆ ನಿಂತುಕೊಂಡರು. ಬಜೆಟ್‌ಗೆ ಕೊರತೆ ಮಾಡಲಿಲ್ಲ. ಅವರು ನಮ್ಮ ಮೇಲೆ ನಂಬಿಕೆ ಇಟ್ಟರು. ನಾವು ಅವರ ನಂಬಿಕೆಯನ್ನು ಸುಳ್ಳಾಗಿಸದಂತೆ ಕೆಲಸ ಮಾಡಿದ್ದೇವೆ.

4. ಕಾಂತಾರ 1 ಚಿತ್ರದಲ್ಲಿ ನಟಿಸಿದವರ ಸಾವು ಅಂತೆಲ್ಲ ಸುದ್ದಿಗಳು ಕೇಳಿದ ನನಗೆ ತುಂಬಾ ನೋವು, ದುಃಖ ಆಯಿತು. ನಷ್ಟ ನಷ್ಟವೇ. ಅದನ್ನು ಮತ್ತೆ ಕಟ್ಟಿಕೊಡಕ್ಕೆ ಆಗಲ್ಲ. ಆದರೆ ಆ ಸಾವುಗಳು ಯಾವುದೂ ಚಿತ್ರೀಕರಣದ ಸಂದರ್ಭದಲ್ಲಾಗಲಿ, ಚಿತ್ರೀಕರಣದ ಸ್ಥಳದಲ್ಲಿ ನಡೆದಿದ್ದಲ್ಲ. ಹಾಗೆ ನೋಡಿದರೆ ನಾನೇ ಚಿತ್ರೀಕರಣದ ಸಂದರ್ಭದಲ್ಲಿ ನಾಲ್ಕೈದು ಬಾರಿ ಸಾವಿಗೆ ಹತ್ತಿರ ಹೋಗಿದ್ದೆ, ದೈವ ರಕ್ಷಿಸಿದೆ.

5. ತುಳುನಾಡಿನ ಮೂಲ ಪುರುಷರಾದ ಬೆರ್ಮೆರ್ ಹಾಗೂ ಪರುಶುರಾಮ ಅವರನ್ನು ನಾನು ಅಪಾರವಾಗಿ ನಂಬುತ್ತೇನೆ. ಈ ಎರಡೂ ಶಕ್ತಿಗಳ ಪೈಕಿ ಪರಶುರಾಮನ ಪ್ರಸ್ತಾಪ ಇಲ್ಲ. ಕೇವಲ ಬೆರ್ಮೆರ್ ರೆಫರೆನ್ಸ್ ಮಾತ್ರ ಇದೆ ಎನ್ನುವವರಿಗೆ ಸಿನಿಮಾ ನೋಡಿದ ಮೇಲೆ ಉತ್ತರ ಸಿಗುತ್ತದೆ.

6. ಕಾಂತಾರ 1 ಸಿನಿಮಾ ನೋಡಬೇಕಾದರೆ ಮದ್ಯಪಾನ, ಧೂಮಪಾನ ಮಾಡಬಾರದು ಹಾಗೂ ಮಾಂಸಾಹಾರ ಸೇವನೆ ಮಾಡಬಾರದು ಎನ್ನುವ ಪೋಸ್ಟರ್‌ ವೈರಲ್ ಆಗಿತ್ತು. ಆ ಪೋಸ್ಟರ್‌ಗೂ ನಮ್ಮ ಚಿತ್ರತಂಡಕ್ಕೂ ಸಂಬಂಧ ಇಲ್ಲ. ಟ್ರೆಂಡು, ವ್ಯೂವ್ಸ್‌ ಹೆಚ್ಚಿಸಿಕೊಳ್ಳುವುದಕ್ಕೆ ಯಾರೋ ಮಾಡಿರುವ ಕಿತಾಪತಿ. ಪ್ರತಿಯೊಬ್ಬರಿಗೂ ಅವರ ಆಹಾರ ಪದ್ಧತಿ ಇದ್ದೇ ಇರುತ್ತದೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ.

7. ಈ ಚಿತ್ರಕ್ಕಾಗಿ ಸಾಕಷ್ಟು ಸಾಹಸಗಳನ್ನು ಮಾಡಿದ್ದೇನೆ. ಚಿತ್ರೀಕರಣದ ಸಮಯದಲ್ಲಿ ಸ್ಟಂಟ್‌ ಮಾಸ್ಟರ್‌ಗೆ ನಾನು ಹೇಳಿದ್ದು ಇಷ್ಟೇ, ಜೀವ ಇರೋ ತನಕ ಸ್ಟಂಟ್‌ ಮಾಡುತ್ತೇನೆಂದು.

ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್

‘ಕಾಂತಾರ ಚಾಪ್ಟರ್‌ 1’ ಸಿನಿಮಾಗೆ ಯು/ಎ ಸರ್ಟಿಫಿಕೆಟ್‌ ನೀಡಲಾಗಿದೆ. 2 ಗಂಟೆ 48 ನಿಮಿಷಗಳ ಅವಧಿಯ ಸಿನಿಮಾ ಇದಾಗಿದ್ದು, ಸೆನ್ಸಾರ್‌ ಬೋರ್ಡ್‌ ಎಲ್ಲೂ ಕಟ್‌ ಅಥವಾ ಮ್ಯೂಟ್‌ಗೆ ಸೂಚನೆ ನೀಡಿಲ್ಲ ಎನ್ನಲಾಗಿದೆ.