ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಪ್ರೇಮ ಸಂಬಂಧದ ಚರ್ಚೆಯ ನಡುವೆಯೇ, ಯುವ ನಟಿ ತಮಗೆ ವಿಜಯ್ ಮೇಲೆ ಕ್ರಶ್ ಇದೆ ಎಂದು ಹೇಳಿಕೊಂಡಿದ್ದಾರೆ. ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಶ್ಮಿಕಾ-ವಿಜಯ್ ಸಂಬಂಧದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಬೆಂಗಳೂರು (ಸೆ.16): ಕನ್ನಡತಿ, ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ನಡುವಿನ ಪ್ರೇಮ ಸಂಬಂಧದ ಬಗ್ಗೆ ಇಡೀ ಚಿತ್ರರಂಗಕ್ಕೇ ಗೊತ್ತು. ಈ ಜೋಡಿ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಮಾತುಗಳು ಹರಿದಾಡುತ್ತಿರುವಾಗಲೇ, ವಿಜಯ್ ದೇವರಕೊಂಡ ಮೇಲೆ ಮತ್ತೊಬ್ಬ ಯುವ ನಟಿ ಕಣ್ಣಿಟ್ಟಿದ್ದು, ರಶ್ಮಿಕಾಗೆ ಮೋಸ ಆಗಬಹುದಾ ಎಂಬ ಆತಂಕ ಶುರುವಾಗಿದೆ.

ವಿಜಯ್ ಕ್ರೇಜ್ ಮತ್ತು ಹೊಸ ಕ್ರಶ್:

'ಅರ್ಜುನ್ ರೆಡ್ಡಿ' ಮತ್ತು 'ಗೀತ ಗೋವಿಂದಂ'ನಂತಹ ಸೂಪರ್‌ಹಿಟ್ ಸಿನಿಮಾಗಳ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ವಿಜಯ್ ದೇವರಕೊಂಡ, ಇತ್ತೀಚೆಗೆ 'ಕಿಂಗ್‌ಡಮ್' ಸಿನಿಮಾದ ಮೂಲಕ ಯಶಸ್ಸು ಕಂಡಿದ್ದಾರೆ. ವಿಜಯ್ ಅವರ ಈ ಜನಪ್ರಿಯತೆಯೇ ಯುವ ನಟಿಯರನ್ನು ಆಕರ್ಷಿಸುತ್ತಿದೆ. ಈ ಸಾಲಿಗೆ ಈಗ ಕಾಲಿವುಡ್‌ನ ಯುವ ನಟಿ ಅನಿಕಾ ಸುರೇಂದ್ರನ್ ಸೇರಿದ್ದಾರೆ.

ಅನಿಕಾ ಸುರೇಂದ್ರನ್ ಯಾರು?

2004ರಲ್ಲಿ ಕೇರಳದಲ್ಲಿ ಜನಿಸಿದ ಅನಿಕಾ ಸುರೇಂದ್ರನ್, ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. 2010ರಲ್ಲಿ ಮಲಯಾಳಂ ಚಿತ್ರ 'ಕಥಾ ತುದರುನ್ನು' ಮೂಲಕ ಸಿನಿಮಾ ಪಯಣ ಆರಂಭಿಸಿದ ಅವರು, 12 ವರ್ಷಗಳ ಕಾಲ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬಾಲನಟಿಯಾಗಿ ಮಿಂಚಿದರು. ವಿಶೇಷವಾಗಿ, ಗೌತಮ್ ವಾಸುದೇವ್ ಮೆನನ್ ನಿರ್ದೇಶನದ 'ಎನ್ನೈ ಅರಿಂದಾಲ್' ಚಿತ್ರದಲ್ಲಿ ಅಜಿತ್ ಮತ್ತು ತ್ರಿಷಾ ಅವರ ಮಗಳಾಗಿ ನಟಿಸಿ ಗಮನ ಸೆಳೆದಿದ್ದರು. ಇದೀಗ ನಾಯಕಿಯಾಗಿ ಮಿಂಚುತ್ತಿರುವ ಅನಿಕಾ, ಸಂದರ್ಶನವೊಂದರಲ್ಲಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ವೈರಲ್ ಆದ ಅನಿಕಾ ಮಾತುಗಳು

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ನಿರೂಪಕರು 'ನಿಮ್ಮ ಸೆಲೆಬ್ರಿಟಿ ಕ್ರಶ್ ಯಾರು?' ಎಂದು ಕೇಳಿದಾಗ, ಅನಿಕಾ ಯಾವುದೇ ಹಿಂಜರಿಕೆಯಿಲ್ಲದೆ, 'ನನ್ನ ಸೆಲೆಬ್ರಿಟಿ ಕ್ರಶ್ ವಿಜಯ್ ದೇವರಕೊಂಡ' ಎಂದು ಹೇಳಿದ್ದಾರೆ. ಅನಿಕಾ ಅವರ ಈ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಜಯ್‌ ಮತ್ತು ರಶ್ಮಿಕಾ ಅಭಿಮಾನಿಗಳ ನಡುವೆ ಹೊಸ ಚರ್ಚೆಗೆ ಕಾರಣವಾಗಿದೆ.

ಈ ಘಟನೆ ರಶ್ಮಿಕಾ ಮತ್ತು ವಿಜಯ್ ಅವರ ಪ್ರೀತಿಯ ಪಯಣಕ್ಕೆ ಹೊಸ ತಿರುವು ನೀಡುತ್ತದೆಯೇ? ಅಥವಾ ಇದು ಕೇವಲ ಅಭಿಮಾನದ ಮಾತುಗಳಾಗಿ ಉಳಿಯುತ್ತದೆಯೇ ಎಂಬುದನ್ನು ಕಾಲವೇ ನಿರ್ಧರಿಸಬೇಕು. ಸದ್ಯಕ್ಕೆ, ರಶ್ಮಿಕಾ ಅಭಿಮಾನಿಗಳು ಮಾತ್ರ ತಮ್ಮ ಪ್ರೀತಿಯ ನಟಿಗೆ ಮೋಸವಾಗದಿರಲಿ ಎಂದು ಹಾರೈಸುತ್ತಿದ್ದಾರೆ.