ನಟಿ ಐಶ್ವರ್ಯ ರೈ ದಿಢೀರ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ಕೂಡ ಐಶ್ವರ್ಯ ರೈ ಅರ್ಜಿ ವಿಚಾರಣೆ ನಡೆಸಿದೆ. ಅಷ್ಟಕ್ಕೂ ಐಶ್ವರ್ಯ ರೈ ಕೋರ್ಟ್ ಮೆಟ್ಟಿಲು ಹತ್ತಿದ್ದು ಯಾಕೆ?

ನವದೆಹಲಿ (ಸೆ.09) ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಸೋಶಿಯಲ್ ಮೀಡಿಯಾ ಮೂಲಕ ಹಲವು ಬಾರಿ ಸದ್ದು ಮಾಡಿದ್ದಾರೆ. ಐಶ್ವರ್ಯೈ ರೈ ಬಚ್ಚನ್ ವೈವಾಹಿಕ ಜೀವನ, ಪುತ್ರಿ ಆರಾಧ್ಯ ರೈ ಬಚ್ಚನ್ ಸೇರಿದಂತೆ ಹಲವು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದರ ನಡುವೆ ಐಶ್ವರ್ಯ ರೈ ಬಚ್ಚನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ಐಶ್ವರ್ಯ ರೈ ಬಚ್ಚನ್ ಹೈಕೋರ್ಟ್ ಮೆಟ್ಟಿಲೇರಲು ಮುಖ್ಯ ಕಾರಣ ನಟಿಯ ಫೋಟೋ, ಹೆಸರು ದುರ್ಬಳಕೆ, ಎಐ ಮೂಲಕ ನಟಿ ಫೋಟೋ, ವಿಡಿಯೋ ಸೃಷ್ಟಿಸಿ ದುರ್ಬಳಕೆ ಮಾಡುತ್ತಿರುವವ ವಿರುದ್ದ ನಟಿ ಕಾನೂನು ಹೋರಾಟ ಆರಂಭಿಸಿದ್ದಾರೆ. ವ್ಯಕ್ತಿಯ ವ್ಯಕ್ತಿತ್ವ ಹಾಗೂ ಹಕ್ಕುಗಳ ರಕ್ಷಣೆಗೆ ಐಶ್ವರ್ಯ ರೈ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.

ಐಶ್ವರ್ಯ ರೈ ಬಚ್ಚನ್ ದೂರಿನಲ್ಲಿರುವ ಪ್ರಮುಖ ಅಂಶವೇನು?

ಐಶ್ವರ್ಯ ರೈ ಬಚ್ಚನ್ ಹಲವು ವಿಚಾರಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೇಶಾದ್ಯಂತ ಐಶ್ವರ್ಯ ರೈ ಬಚ್ಚನ್ ಹೆಸರು, ಫೋಟೋ, ವಿಡಿಯೋ ಬಳಸಿಕೊಂಡು ಜಾಹೀರಾತು, ಉತ್ಪನ್ನಗಳ ಪ್ರಚಾರ ಮಾಡಲಾಗುತ್ತಿದೆ. ಅಕ್ರಮವಾಗಿ ಈ ರೀತಿ ಫೋಟೋ, ವಿಡಿಯೋ ಬಳಸಿಕೊಳ್ಳಲಾಗುತ್ತಿದೆ. ಇನ್ನು ಹಲವು ಕಡೆ ಫೋಟೋ, ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಎಐ ಮೂಲಕ ಫೋಟೋ,ವಿಡಿಯೋ ಸೃಷ್ಟಿಸಿ ಸೋಶಿಯಲ್ ಮೀಡಿಯಾ ಮೂಲಕವೂ ದುರ್ಬಳಕೆ ಮಾಡುತ್ತಿದ್ದಾರೆ. ಐಶ್ವರ್ಯ ರೈಗೆ ಸಂಬಂಧ ಪಡದ, ಯಾವುದೇ ಒಪ್ಪಂದ ಮಾಡಿಕೊಳ್ಳದೇ ಈ ರೀತಿ ದುರ್ಬಳಕೆ ಆಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎಐ ಮೂಲಕ ಸೃಷ್ಟಿಸಿಲಾಗಿರುವ ಕೆಟ್ಟ ಫೋಟೋಗಳು, ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ. ಇದರಿಂದ ನಟಿಯ ವ್ಯಕ್ತಿತ್ವ, ಸಾಮಾಜಿಕ ಬದ್ಥತೆ ಮೇಲೆ ಪರಿಣಾಮ ಬೀರುತ್ತಿದೆ. ಅಕ್ರಮ ಹಾಗೂ ಗುಣಮಟ್ಟವಿಲ್ಲದ ಉತ್ಪನ್ನಗಳಲ್ಲೂ ಅಕ್ರಮವಾಗಿ ನಟಿಯ ಫೋಟೋ, ಹೆಸರು ಬಳಸಿಕೊಳ್ಳಲಾಗುತ್ತದೆ. ಇದರಿಂದ ಜನರು ಮೋಸಹೋಗುತ್ತಿರುವುದು ಮಾತ್ರವಲ್ಲ, ನಟಿ ಹೆಸರಿಗೆ ತೇಜೋವಧೆಯಾಗುತ್ತಿದೆ. ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಸುದ್ದಿ ಹಬ್ಬಿಸಿದ್ದಕ್ಕೆ ಅಭಿಷೇಕ್ ಬಚ್ಚನ್ ಹೇಳಿದ್ದು ಕೇಳಿದ್ರೆ ಯೋಚ್ನೆ ಮಾಡ್ಬೇಕಾಗುತ್ತೆ..!

ಐಶ್ವರ್ಯ ರೈ ಬಚ್ಚನ್ ಅರ್ಜಿ ಕೈಗೆತ್ತಿಕೊಂಡ ಜಸ್ಟೀಸ್ ತೇಜಸ್ ಕಾರಿಯಾ, ಅರ್ಜಿದಾರರು ಉಲ್ಲೇಖಿಸಿದ ಗಂಭೀರ ವಿಚಾರಗಳ ಕುರಿತು ಸೂಕ್ತ ಕ್ರಮದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವ್ಯಕ್ತಿತ್ವ ನಾಶ ಮಾಡುವುದು, ಹೆಸರು, ಫೋಟೋ ದುರ್ಬಳಕೆ ಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ವಿಚಾರಣೆ ನಡೆಸಿದ ಜಸ್ಟೀಸ್ ತೇಜಸ್, ಈ ತಕ್ಷಣದಿಂದಲೇ ನಟಿಯ ಯಾವುದೇ ಫೋಟೋ, ವಿಡಿಯೋ, ಹೆಸರು ದುರ್ಬಳಕೆ ಮಾಡದಂತೆ ಕೋರ್ಟ್ ಸೂಚಿಸಿದೆ. ಮುಂದಿನ ವಿಚಾರಣೆ ಜನವರಿ 15, 2026ಕ್ಕೆ ಮುಂದೂಡಲಾಗಿದೆ. ಐಶ್ವರ್ಯ ರೈ ಪರ ಹಿರಿಯ ವಕೀಲ ಸಂದೀಪ್ ಸೇತ್ ವಾದ ಮಂಡಿಸಿದ್ದರು.

ಅಡ್ವೋಕೇಟ್ ಸಂದೀಪ್ ಸೇತ್ ಹಲವು ಪ್ರಕರಣ ಉಲ್ಲೇಖಿಸಿದ್ದಾರೆ. ಕೆಲವು ವೆಬ್‌ಸೈಟ್‌ಗಳು ಐಶ್ವರ್ಯ ರೈ ಫೋಟೋ, ಹೆಸರುಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಅನ್ನೋದು ಕೋರ್ಟ್ ಮುಂದೆ ಪ್ರಸ್ತುತಪಡಿಸಿದ್ದಾರೆ. ಮಗ್, ಟಿಶರ್ಟ್, ಕುಡಿಯುವ ನೀರಿನ ಬಾಟಲಿ ಸೇರಿದಂತೆ ಹಲವು ಉತ್ಪನ್ನಗಳಲ್ಲಿ ಅಕ್ರಮವಾಗಿ ಐಶ್ವರ್ಯ ರೈ ಹೆಸರು, ಫೋಟೋ ದುರ್ಬಳಕೆ ಮಾಡಿದ್ದಾರೆ ಎಂದು ಸಂದೀಪ್ ಸೇತ್ ಹೇಳಿದ್ದಾರೆ.

ಮಗಳ ಪರವಾಗಿಯೂ ಕೋರ್ಟ್ ಮೆಟ್ಟಿಲೇರಿದ್ದ ಐಶ್ವರ್ಯ ರೈ

ಐಶ್ವರ್ಯ ರೈ ಬಚ್ಚನ್ ಫೆಬ್ರವರಿ ತಿಂಗಳಲ್ಲಿ ಮಗಳು ಆರಾಧ್ಯ ರೈ ಬಚ್ಚನ್ ಪರವಾಗಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆರಾಧ್ಯ ರೈ ಬಚ್ಚನ್ ಕುರಿತು ಹಲವು ವೆಬ್‌ಸೈಟ್‌ಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ತಪ್ಪು ಮಾಹಿತಿ ನೀಡಲಾಗಿದೆ. ಇದರಿಂದ ಆಕೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. 13 ವರ್ಷದ ಮಗಳ ವಿದ್ಯಾಭ್ಯಾಸ ಹಾಗೂ ಬೆಳವಣಿಗೆ ಮೇಲೂ ಪರಿಣಾಮ ಬೀರುತ್ತಿದೆ ಎಂದು ಐಶ್ವರ್ಯ ರೈ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಗೂಗಲ್ ಸೇರಿದಂತೆ ಹಲವು ವೆಬ್‌ಸೈಟ್‌ಗಳಿಗೆ ಲೀಗಲ್ ನೋಟಿಸ್ ಕಳುಹಿಸಿತ್ತು.