ವಿಪ್ರೋ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಮತ್ತು ಆರ್‌.ವಿ ಎಂಜಿನಿಯರಿಂಗ್‌ ಕಾಲೇಜು ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಚಾಲಕರಹಿತ ಕಾರನ್ನು ಇತ್ತೀಚೆಗೆ ಕಾಲೇಜಿನ ಕ್ಯಾಂಪಸ್‌ನಲ್ಲಿ ಅನಾವರಣಗೊಳಿಸಲಾಗಿದೆ.

ಬೆಂಗಳೂರು (ಅ.29): ವಿಪ್ರೋ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಮತ್ತು ಆರ್‌.ವಿ ಎಂಜಿನಿಯರಿಂಗ್‌ ಕಾಲೇಜು ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಚಾಲಕರಹಿತ ಕಾರನ್ನು ಇತ್ತೀಚೆಗೆ ಕಾಲೇಜಿನ ಕ್ಯಾಂಪಸ್‌ನಲ್ಲಿ ಅನಾವರಣಗೊಳಿಸಲಾಗಿದೆ. ವಿಪ್ರೋ-ಐಐಎಸ್ಸಿ ಸಂಶೋಧನೆ ಮತ್ತು ನಾವೀನ್ಯತೆ ನೆಟ್‌ವರ್ಕ್‌(ವಿಐಆರ್‌ಐಎನ್‌) ಒಪ್ಪಂದದ ಅಡಿ ವಿಪ್ರೋ ಧನಸಹಾಯದಲ್ಲಿ ಮೂರೂ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ ಯೋಜನೆ ಇದಾಗಿದ್ದು, ಭಾರತೀಯ ರಸ್ತೆಗಳಿಗೆ ಹೊಂದಿಕೆಯಾಗುವಂತೆ ತಯಾರಿಸಿರುವ ಹೊಸ ಚಾಲಕರಹಿತ ಕಾರನ್ನು ಉತ್ತರಾಧಿ ಮಠದ ಸತ್ಯಾತ್ಮ ತೀರ್ಥ ಸ್ವಾಮೀಜಿ ಅನಾವರಣಗೊಳಿಸಿದ್ದಾರೆ.

ಕಾರಿನ ಅನಾವರಣದ ಅಂಗವಾಗಿ ಸ್ವಾಮೀಜಿ ಹಾಗೂ ಇತರ ಗಣ್ಯರು ಆರ್‌.ವಿ.ಕಾಲೇಜು ಕ್ಯಾಂಪಸ್‌ನಲ್ಲಿ ಕಾರಿನಲ್ಲಿ ಕುಳಿತು ಪ್ರಯಾಣಿಸಿರುವ 28 ಸೆಕೆಂಡುಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆದರ್ಶ ಹೆಗಡೆ ಅನ್ನುವವರು ಅಪ್‌ಲೋಡ್‌ ಮಾಡಿದ್ದಾರೆ. ವಿಪ್ರೋದ ಸ್ವಾಯತ್ತ ವ್ಯವಸ್ಥೆಗಳು ಮತ್ತು ರೊಬೊಟಿಕ್ಸ್‌ನ ಜಾಗತಿಕ ಮುಖ್ಯಸ್ಥ ರಾಮಚಂದ್ರ ಬುಧಿಹಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ವೈರಲ್‌ ಆಗಿದೆ.

ಆರು ವರ್ಷದ ಸಂಶೋಧನೆಯ ಫಲ

ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ (ಆರ್‌ಎಸ್‌ಎಸ್‌ಟಿ) ಅಧ್ಯಕ್ಷ ಎಂ.ಪಿ.ಶ್ಯಾಮ್, ಆರ್‌ವಿಸಿಇ ಪ್ರಾಂಶುಪಾಲ ಕೆ.ಎನ್.ಸುಬ್ರಮಣ್ಯ ಮತ್ತಿತರು ಈ ವೇಳೆ ಉಪಸ್ಥಿತರಿರುವುದು ಕಂಡುಬಂದಿದೆ. ಆರ್‌.ವಿ.ಎಂಜಿನಿಯರಿಂಗ್‌ ಅಧ್ಯಾಪಕರಾದ ಉತ್ತರ ಕುಮಾರಿ ಮತ್ತು ರಾಜಾ ವಿದ್ಯಾ ಅವರ ಸಂಯೋಜನೆಯಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ತಂಡ ಆರು ವರ್ಷಗಳ ಕಾಲ ಸ್ಥಳೀಯ ಸ್ವಯಂ ಚಾಲಿತ ಕಾರನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ ಫಲಿತಾಂಶವೇ ಈ ನಾವೀನ್ಯತೆ ಎಂದು ತಿಳಿದು ಬಂದಿದೆ.