ಎಸ್‌ಬಿಐ ಹೊಸ ಗೃಹ ಸಾಲಗಳ ಬಡ್ಡಿ ದರವನ್ನು 0.25% ಹೆಚ್ಚಿಸಿ 7.50% ರಿಂದ 8.70%ಕ್ಕೆ ನಿಗದಿಪಡಿಸಿದೆ. ಆರ್‌ಬಿಐ ದರ ಕಡಿತ ಸೂಚನೆ ನೀಡದ ಹಿನ್ನೆಲೆಯಲ್ಲಿ ಈ ಹೆಚ್ಚಳವಾಗಿದೆ. ಇತರ ಬ್ಯಾಂಕ್‌ಗಳಾದ ಬಿಒಬಿ, ಪಿಎನ್‌ಬಿ, ಕೆನರಾ, ಎಚ್‌ಡಿಎಫ್‌ಸಿ, ಐಸಿಐಸಿಐ, ಕೊಟಕ್ ಮಹೀಂದ್ರಾ ಕೂಡಾ ವಿಭಿನ್ನ ದರ ಹೊಂದಿವೆ.
ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೋಮ್ ಲೋನ್‌ಗಳ (ಗೃಹ ಸಾಲದ ಮೇಲಿನ) ಬಡ್ಡಿ ದರವನ್ನು ಹೆಚ್ಚಿಸಿದೆ. ಹೊಸದಾಗಿ ಸಾಲ ಪಡೆಯುವವರಿಗೆ ಈ ಹೊಸ ದರ ಅನ್ವಯವಾಗುತ್ತದೆ.
ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2025 ಫೆಬ್ರವರಿಯಿಂದ ರೆಪೊ ದರವನ್ನು 100 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿತ್ತು. ಇದು ಹೋಮ್ ಲೋನ್‌ಗಳೂ ಸೇರಿದಂತೆ ಇತರ ಸಾಲಗಳ ಬಡ್ಡಿ ದರ ಕಡಿಮೆಯಾಗಲು ಸಹಾಯ ಮಾಡಿತ್ತು. ಆದರೆ, ಪ್ರಸ್ತುತ ಹೆಚ್ಚಿನ ದರ ಕಡಿತಕ್ಕೆ ಅವಕಾಶವಿಲ್ಲ ಎಂದು ಆರ್‌ಬಿಐ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಎಸ್‌ಬಿಐ ದರ ಹೆಚ್ಚಳ ಮಾಡಿದೆ. ಈ ಹಿನ್ನೆಲೆಯಲ್ಲಿ ಎಸ್‌ಬಿಐ ಬ್ಯಾಂಕ್‌ಗಳಲ್ಲಿ ಗೃಹ ಸಾಲ ಮಾಡುವವರ ಮೇಲೆ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗುತ್ತಿದೆ.
ಎಸ್‌ಬಿಐ ಗೃಹಸಾಲ ಬಡ್ಡಿ ದರ
ಹೊಸ ಸಾಲಗಳಿಗೆ ಎಸ್‌ಬಿಐ ಗರಿಷ್ಠ ಬಡ್ಡಿ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿ 8.70%ಕ್ಕೆ ಏರಿಸಿದೆ. ಮೊದಲು ಇದು 8.45% ಇತ್ತು. ಅದೇ ಸಮಯದಲ್ಲಿ, ಕನಿಷ್ಠ ಬಡ್ಡಿ ದರ 7.50% ಆಗಿ ಮುಂದುವರಿಯುತ್ತದೆ. ಅಂದರೆ, ಈಗ ಹೊಸ ಸಾಲಗಾರರು ತಮ್ಮ ಕ್ರೆಡಿಟ್ ಪ್ರೊಫೈಲ್ ಮತ್ತು ಸಾಲದ ಮೊತ್ತಕ್ಕೆ ಅನುಗುಣವಾಗಿ 7.50% ರಿಂದ 8.70% ವರೆಗೆ ಬಡ್ಡಿ ಪಾವತಿಸಬೇಕಾಗುತ್ತದೆ.
ಇತರ ಪ್ರಮುಖ ಬ್ಯಾಂಕ್‌ಗಳ ದರಗಳು
- ಬ್ಯಾಂಕ್ ಆಫ್ ಬರೋಡ: ಸಾಲದ ಮೊತ್ತ, CIBIL ಸ್ಕೋರ್ ಮತ್ತು ಕ್ರೆಡಿಟ್ ವಿಮಾ ರಕ್ಷಣೆಯನ್ನು ಅವಲಂಬಿಸಿ 7.45% ರಿಂದ 9.20% ವರೆಗೆ ಬಡ್ಡಿ ವಿಧಿಸುತ್ತದೆ.
- ಪಂಜಾಬ್ ನ್ಯಾಷನಲ್ ಬ್ಯಾಂಕ್: ಹೋಮ್ ಲೋನ್ ಬಡ್ಡಿ ದರ 7.45% ರಿಂದ ಪ್ರಾರಂಭವಾಗುತ್ತದೆ. ಸಾಲದ ಮೊತ್ತ, ಸಾಲ ತೀರಿಸುವ ಅವಧಿಗೆ ಅನುಗುಣವಾಗಿ ಬಡ್ಡಿ ದರದಲ್ಲಿ ವ್ಯತ್ಯಾಸವಿರುತ್ತದೆ.
- ಕೆನರಾ ಬ್ಯಾಂಕ್: 7.40% ರಿಂದ 10.25% ವರೆಗೆ ಬಡ್ಡಿ ದರವನ್ನು ವಿಧಿಸುತ್ತದೆ
- ಎಚ್‌ಡಿಎಫ್‌ಸಿ ಬ್ಯಾಂಕ್: 7.90% ರಿಂದ ಗೃಹಸಾಲದ ಬಡ್ಡಿ ದರ ಪ್ರಾರಂಭವಾಗುತ್ತದೆ.
- ಐಸಿಐಸಿಐ ಬ್ಯಾಂಕ್: ಬಡ್ಡಿ ದರ 7.70% ರಿಂದ ಪ್ರಾರಂಭವಾಗುತ್ತದೆ. ಆದರೆ ಸಾಲದ ಮೊತ್ತ ಮತ್ತು ಗ್ರಾಹಕರ ಪ್ರೊಫೈಲ್ ಅನ್ನು ಅವಲಂಬಿಸಿ 8.75% ರಿಂದ 9.80%ವರೆಗೆ ಇರಬಹುದು.
- ಕೊಟಕ್ ಮಹೀಂದ್ರ ಬ್ಯಾಂಕ್: ಬಡ್ಡಿ ದರ 7.99% ರಿಂದ ಪ್ರಾರಂಭವಾಗುತ್ತದೆ. ಫ್ಲೋಟಿಂಗ್ ದರದಿಂದ ಫಿಕ್ಸೆಡ್ ದರಕ್ಕೆ ಬದಲಾಯಿಸುವ ಗ್ರಾಹಕರಿಗೆ 12% ವರೆಗೆ ಇರುತ್ತದೆ.
ಗ್ರಾಹಕರ ಗಮನಕ್ಕೆ:
ಹೊಸ ಹೋಮ್ ಲೋನ್ ಪಡೆಯಲು ಯೋಚಿಸುತ್ತಿರುವವರು ವಿವಿಧ ಬ್ಯಾಂಕ್‌ಗಳ ದರಗಳನ್ನು ಹೋಲಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಿ. ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಸಿಬಿಲ್ ಸ್ಕೋರ್ ಅನ್ನು ಉತ್ತಮ ಮಟ್ಟದಲ್ಲಿ ಕಾಯ್ದುಕೊಳ್ಳಿ. ಪ್ರಸ್ತುತ ಗ್ರಾಹಕರಿಗೆ ಬೇರೆ ಬ್ಯಾಂಕಿನಲ್ಲಿ ಉತ್ತಮ ದರ ಸಿಗುತ್ತಿದ್ದರೆ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗೆ ಪ್ರಯತ್ನಿಸಬಹುದು.
