ಐಪಿಎಲ್ ಚಾಂಪಿಯನ್ ರಜತ್ ಪಾಟೀದಾರ್ ನಾಯಕತ್ವದ ಸೆಂಟ್ರಲ್ ಝೋನ್ ತಂಡವು 2025ರ ದುಲೀಪ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಫೈನಲ್‌ನಲ್ಲಿ ಸೌತ್ ಝೋನ್ ವಿರುದ್ಧ ಗೆಲುವು ಸಾಧಿಸಿದ ಸೆಂಟ್ರಲ್ ಝೋನ್ 10 ವರ್ಷಗಳ ಬಳಿಕ ಟ್ರೋಫಿ ಎತ್ತಿಹಿಡಿದಿದೆ. 

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 17 ವರ್ಷಗಳ ಬಳಿಕ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ವರ್ಷ ತುಂಬುವುದರೊಳಗಾಗಿ ರಜತ್ ಪಾಟೀದಾರ್ ನೇತೃತ್ವದ ತಂಡ ಮತ್ತೊಂದು ಟ್ರೋಫಿ ಜಯಿಸಿದೆ. 2025ನೇ ಸಾಲಿನ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ಸೆಂಟ್ರಲ್ ಝೋನ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ದಶಕದ ಬಳಿಕ ಸೆಂಟ್ರಲ್ ಝೋನ್ ಚಾಂಪಿಯನ್

2025ರ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಸೌಥ್ ಝೋನ್ ಹಾಗೂ ಸೆಂಟ್ರಲ್ ಝೋನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸೌಥ್ ಝೋನ್ ತಂಡವು 4 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಸೆಂಟ್ರಲ್ ಝೋನ್ ತಂಡವು ಬರೋಬ್ಬರಿ 10 ವರ್ಷಗಳ ಬಳಿಕ ದುಲೀಪ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ಸೆಂಟ್ರಲ್ ಝೋನ್ ತಂಡವು 2014-15ರಲ್ಲಿ ದುಲೀಪ್ ಟ್ರೋಫಿ ಚಾಂಪಿಯನ್ ಆಗಿತ್ತು. ಈ ಬಾರಿಯ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಸೆಂಟ್ರಲ್ ಝೋನ್ ಚಾಂಪಿಯನ್ ಆಗಲು ನಾಯಕ ರಜತ್ ಪಾಟೀದಾರ್ ಹಾಗೂ ಯಶ್ ರಾಥೋಡ್ ಪ್ರಮುಖ ಪಾತ್ರ ವಹಿಸಿದರು. ಸೌಥ್‌ ಝೋನ್ ಎದುರು ಫೈನಲ್‌ನಲ್ಲಿ ಈ ಇಬ್ಬರು ಆಟಗಾರರು ಶತಕ ಸಿಡಿಸಿ ಸೆಂಟ್ರಲ್ ಝೋನ್‌ಗೆ ಆಸರೆಯಾದರು.

Scroll to load tweet…

ಬೆಂಗಳೂರಿನಲ್ಲಿ ನಡೆದ ಫೈನಲ್

ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ನಡೆದ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಟಾಸ್ ಗೆದ್ದ ಸೆಂಟ್ರಲ್ ಝೋನ್ ಕ್ಯಾಪ್ಟನ್ ರಜತ್ ಪಾಟೀದಾರ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲು ಬ್ಯಾಟ್ ಮಾಡಿದ ಸೌಥ್ ಝೋನ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 149 ರನ್‌ಗಳಿಗೆ ಸರ್ವಪತನ ಕಂಡಿತು. ಕೇಂದ್ರ ವಲಯ ಪರ ಸಾರಾನ್ಶ್‌ ಜೈನ್ 5 ವಿಕೆಟ್ ಪಡೆದರೆ, ಕುಮಾರ್ ಕಾರ್ತಿಕೇಯ 4 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇನ್ನು ಸೌಥ್ ಝೋನ್ ಪರ ತನ್ಮಯ್ ಅಗರ್‌ವಾಲ್ 31 ರನ್ ಗಳಿಸಿದ್ದೇ ಮೊದಲ ಇನ್ನಿಂಗ್ಸ್‌ನ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿತು.

ಇದಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಕೇಂದ್ರ ವಲಯ, ಬರೋಬ್ಬರಿ 511 ರನ್ ಬಾರಿಸಿತು. ನಾಯಕ ರಜತ್ ಪಾಟೀದಾರ್ 101 ಹಾಗೂ ಯಶ್ ರಾಥೋಡ್ 194 ರನ್ ಸಿಡಿಸಿ ಮಿಂಚಿದರು. ಇನ್ನು ಸಾರಾನ್ಶ್‌ ಜೈನ್ 69 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. ಈ ಮೂಲಕ ಸೆಂಟ್ರಲ್ ಝೋನ್ 362 ರನ್‌ಗಳ ಬೃಹತ್ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಿತು. ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿದ ಸೌಥ್ ಝೋನ್ 426 ರನ್ ಕಲೆಹಾಕಿತು. ಈ ಮೂಲಕ ಕೇಂದ್ರ ವಲಯಕ್ಕೆ ಗೆಲ್ಲಲು 65 ರನ್‌ಗಳ ಸಾಧಾರಣ ಗುರಿ ನೀಡಿತು.

ಇನ್ನು ಸಾಧಾರಣ ಗುರಿಯನ್ನು ಕೇಂದ್ರ ವಲಯ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಕೇಂದ್ರ ವಲಯದ ಯಶ್ ರಾಥೋಡ್ ಫೈನಲ್‌ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರೆ, ಸಾರಾನ್ಶ್‌ ಜೈನ್ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.