ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜ್ವರ ಮತ್ತು ಮೂತ್ರನಾಳದ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಮೂರು ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.
ಬೆಂಗಳೂರು (ಅ.13): ವಯೋಸಹಜ ಅನಾರೋಗ್ಯದ ಕಾರಣದಿಂದ ಕಳೆದ ಒಂದು ವಾರದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಇಂದು (ಅಕ್ಟೋಬರ್ 13, 2025) ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಅವರ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದ್ದು, ಮುಂದಿನ ಮೂರು ದಿನಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ.
ಜ್ವರ ಮತ್ತು ಮೂತ್ರನಾಳ ಸೋಂಕಿನಿಂದ ಬಳಲಿಕೆ:
ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಸುದರ್ಶನ್ ಬಲ್ಲಾಳ್ ಅವರು ಈ ಕುರಿತು ಮಾಹಿತಿ ನೀಡಿದ್ದು, ದೇವೇಗೌಡರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅವರಿಗೆ ಜ್ವರ ಮತ್ತು ಮೂತ್ರನಾಳದ ಸೋಂಕು (ಯೂರಿನ್ ಇನ್ಫೆಕ್ಷನ್) ತಗುಲಿತ್ತು. ಆರಂಭದಲ್ಲಿ ಅವರು ತೀವ್ರ ಸುಸ್ತಾಗಿದ್ದರು. ಆದರೆ, ವೈದ್ಯರ ಸೂಕ್ತ ಚಿಕಿತ್ಸೆಯಿಂದ ಅವರ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ. ಇದೀಗ ಅವರು ಆಸ್ಪತ್ರೆಯ ರೂಂ ಮತ್ತು ಫ್ಲೋರ್ನಲ್ಲಿ ನಡೆದಾಡುತ್ತಿದ್ದರು. ಇಂದು ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದಾರೆ. ಇದೀಗ ಹಿಂದಿನಂತೆಯೇ ಅವರು ಬಹಳ ಆಕ್ಟಿವ್ ಆಗಿದ್ದಾರೆ, ನಮಗೆ ಇದು ತುಂಬಾ ಖುಷಿ ಕೊಟ್ಟಿದೆ' ಎಂದು ಡಾ. ಬಲ್ಲಾಳ್ ತಿಳಿಸಿದರು.
ಮೂರು ದಿನ ವಿಶ್ರಾಂತಿಗೆ ಸೂಚನೆ, ಮುಂದುವರಿಯಲಿದೆ ನಿಗಾ:
ಮಾಜಿ ಪ್ರಧಾನಿಗಳ ಆರೋಗ್ಯದ ಬಗ್ಗೆ ವೈದ್ಯರ ತಂಡ ನಿರಂತರವಾಗಿ ನಿಗಾ ಇಡಲಿದೆ. ಆಸ್ಪತ್ರೆಯ ತಂಡ ಫಾಲೋ ಅಪ್ ಮಾಡಲಿದೆ. ಅಲ್ಲದೆ, ದೇವೇಗೌಡರ ಅಳಿಯ ಮತ್ತು ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಅವರು ಕೂಡ ದೇವೇಗೌಡರ ಆರೋಗ್ಯದ ಮೇಲೆ ನಿಗಾ ಇಡಲಿದ್ದಾರೆ ಎಂದು ಡಾ. ಬಲ್ಲಾಳ್ ಸ್ಪಷ್ಟಪಡಿಸಿದರು. ಈ ವಯಸ್ಸಿನಲ್ಲಿ (92 ವರ್ಷ) ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಅವರು ತುಂಬಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಹಾಗಾಗಿ, ಎಚ್ಚರಿಕೆಯಿಂದ ಇರುವಂತೆ ನಾವು ಅವರಿಗೆ ಸೂಚಿಸಿದ್ದೇವೆ. ಮುಂದಿನ ಮೂರು ದಿನಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಹೇಳಲಾಗಿದೆ. ಆದರೆ ಅವರು ತುಂಬಾ ಆಕ್ಟಿವ್ ಇದ್ದಾರೆ ಎಂದರು.
ದೇವೇಗೌಡರ ಆಸ್ಪತ್ರೆಯಿಂದ ಬಿಡುಗಡೆಯ ಸುದ್ದಿ ಕೇಳಿ ಜೆಡಿಎಸ್ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅವರು ಶೀಘ್ರವೇ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
