Income Tax Return : ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡೋಕೆ ಇನ್ನು ಕೆಲವೇ ದಿನ ಬಾಕಿ ಇದೆ. ಎರಡು ರೀತಿ ರಿಟರ್ನ್ ಫೈಲಿಂಗ್ ಆಯ್ಕೆ ಇದ್ದು, ಅದನ್ನು ಆನ್ಲೈನ್ ನಲ್ಲಿ ಸಲ್ಲಿಸೋದು ಹೇಗೆ ಎಂಬ ಮಾಹಿತಿ ಇಲ್ಲಿದೆ.
2024-25ನೇ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ (Income tax returns) ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 15, 2025. ಈ ಗಡುವು ಸಮೀಪಿಸುತ್ತಿರುವುದರಿಂದ, ತೆರಿಗೆದಾರರು ತೆರಿಗೆ ರಿಟರ್ನ್ಸ್ ಸಲ್ಲಿಕೆ ಚುರುಕುಗೊಳಿಸಿದ್ದಾರೆ. ತೆರಿಗೆದಾರರು ಹೊಸ ಅಥವಾ ಹಳೆ ತೆರಿಗೆ ಪದ್ಧತಿ ಇವೆರಡರಲ್ಲಿ ಯಾವುದಾದ್ರೂ ಒಂದನ್ನು ಆಯ್ಕೆ ಮಾಡಿಕೊಂಡು ಅದ್ರ ಪ್ರಕಾರ ತೆರಿಗೆ ಪಾವತಿ ಮಾಡ್ಬೇಕು. ಹಳೆಯ ಮತ್ತು ಹೊಸ ತೆರಿಗೆ ಪದ್ಧತಿ (New Tax System)ಗಳಲ್ಲಿ ತೆರಿಗೆ ಸ್ಲ್ಯಾಬ್ (Tax Slab)ಗಳು ಮತ್ತು ದರಗಳು ವಿಭಿನ್ನವಾಗಿವೆ.
ಹಳೆಯ ತೆರಿಗೆ ಪದ್ಧತಿಯಲ್ಲಿ ವಿವಿಧ ಕಡಿತ ಮತ್ತು ವಿನಾಯಿತಿಗೆ ಒಪ್ಪಿಗೆ ನೀಡಲಾಗಿದೆ. ಇದು 80C, 80D, HRA, LTA, ಗೃಹ ಸಾಲದ ಬಡ್ಡಿ, NPS, ಶಿಕ್ಷಣ ಸಾಲ ಮುಂತಾದ ಹಲವು ಕಡಿತಗಳು ಮತ್ತು ವಿನಾಯಿತಿಗಳನ್ನು ನೀಡುತ್ತದೆ. ನೀವು ಹೆಚ್ಚಿನ ಹೂಡಿಕೆಗಳು ಮತ್ತು ವೆಚ್ಚಗಳ ಮೇಲೆ ತೆರಿಗೆ ವಿನಾಯಿತಿ ಹೊಂದಿದ್ದರೆ, ಇದು ನಿಮಗೆ ಪ್ರಯೋಜನಕಾರಿಯಾಗಬಹುದು. ಹೊಸ ಪದ್ಧತಿಯಲ್ಲಿ ತೆರಿಗೆ ದರ ಕಡಿಮೆ, ಆದರೆ ಕಡಿತ ಮತ್ತು ವಿನಾಯಿತಿ ಇಲ್ಲ. ಹೂಡಿಕೆಗಳ ಮೇಲೆ ಹೆಚ್ಚಿನ ತೆರಿಗೆ ಉಳಿಸಲು ಸಾಧ್ಯವಾಗದವರಿಗೆ ಇದು ಉತ್ತಮ ಆಯ್ಕೆಯಾಗಿದೆ. ನೀವು ಆನ್ಲೈನ್ ಮೂಲಕ ಆದಾಯ ತೆರಿಗೆ ಫೈಲ್ ಮಾಡ್ಬಹುದು. ಸಂಬಳ ಪಡೆಯುವ ಉದ್ಯೋಗಿಯಾಗಿದ್ದರೂ, ಸ್ವಯಂ ಉದ್ಯೋಗಿಯಾಗಿದ್ದರೂ ಅಥವಾ ಹಿರಿಯ ನಾಗರಿಕರಾಗಿದ್ದರೂ, ಆದಾಯ ತೆರಿಗೆ ಇಲಾಖೆಯ ಪೋರ್ಟಲ್ ಮೂಲಕ ನಿಮ್ಮ ಐಟಿಆರ್ ಅನ್ನು ಸುಲಭವಾಗಿ ಇ-ಫೈಲ್ ಮಾಡಬಹುದು.
ಆದಾಯ ತೆರಿಗೆ ಪಾವತಿ ಹೇಗೆ? : ಆದಾಯ ತೆರಿಗೆಯನ್ನು ಎರಡು ರೀತಿ ಫೈಲ್ ಮಾಡಬಹುದು. ಆನ್ಲೈನ್ ಮೂಲಕ ತೆರಿಗೆ ಪಾವತಿ ಮಾಡಲು ನೀವು ಮಾಡಬೇಕಾದ ಕೆಲಸಗಳು ಇಲ್ಲಿವೆ.
1.ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ https://www.incometax.gov.in ಲಾಗಿನ್ ಆಗಿ.
2.ಪ್ಯಾನ್ ಸಂಖ್ಯೆ (ಬಳಕೆದಾರ ಐಡಿ) ಮತ್ತು ಪಾಸ್ವರ್ಡ್ ನಮೂದಿಸಿ.
3.ಒಟಿಪಿ (OTP) ಪರಿಶೀಲಿಸಿ
4.ಇ-ಫೈಲ್ ಕ್ಲಿಕ್ ಮಾಡಿ
5. ಆದಾಯ ತೆರಿಗೆ ರಿಟರ್ನ್ ಆಯ್ಕೆ ಮಾಡಿ
6.ಮೌಲ್ಯಮಾಪನ ವರ್ಷವನ್ನು ಆಯ್ಕೆಮಾಡಿ ಉದಾಹರಣೆ: 2024-25 ಕ್ಕೆ AY 2025-26 ಆಯ್ಕೆಮಾಡಿ.
7.ಐಟಿಆರ್ (ITR) ಫಾರ್ಮ್ ಆಯ್ಕೆ ಮಾಡಿ
8.ITR-1 - ಸಂಬಳ, ಪಿಂಚಣಿ, ಬಡ್ಡಿ ಆದಾಯಕ್ಕಾಗಿ
9.ITR-2/3 - ಬ್ಯುಸಿನೆಸ್/ಬಂಡವಾಳ ಗಳಿಕೆ ಜನರಿಗೆ
10.ಆ ನಂತ್ರ ತೆರಿಗೆ ವಿಧಾನವನ್ನು ಆಯ್ಕೆಮಾಡಿ
11.ಹಳೆಯ ಹಾಗೂ ಹೊಸ ತೆರಿಗೆ ಪದ್ಧತಿಯಲ್ಲಿ ಯಾವುದು ಕಡಿಮೆ ತೆರಿಗೆಯನ್ನು ಹೊಂದಿರುತ್ತದೆ ಎಂಬುದನ್ನು ಸಿಸ್ಟಮ್ ನಿಮಗೆ ತೋರಿಸುತ್ತದೆ.
12.ಅದನ್ನು ಆಯ್ಕೆ ಮಾಡಿಕೊಂಡು ಆದಾಯ ಮತ್ತು ತೆರಿಗೆ ವಿವರಗಳನ್ನು ಭರ್ತಿ ಮಾಡಿ
13.ಸಂಬಳ, ಮನೆ ಆಸ್ತಿ, ಇತರ ಆದಾಯ, ಕಡಿತಗಳು ಇತ್ಯಾದಿಗಳನ್ನು ಭರ್ತಿ ಮಾಡಿ.
14.ನೀವು ಎಷ್ಟು ತೆರಿಗೆ ಪಾವತಿ ಮಾಡ್ಬೇಕು ಎಂಬುದನ್ನು ಲೆಕ್ಕ ಮಾಡ್ಬೇಕು. ಸಿಸ್ಟಮ್ ಸ್ವಯಂಚಾಲಿತವಾಗಿ ತೆರಿಗೆಯನ್ನು ಲೆಕ್ಕಾಚಾರ ಮಾಡುತ್ತದೆ. ಅದನ್ನು ನೀವು ಪರಿಶೀಲಿಸಿ
15.ಆಧಾರ್ OTP / ನೆಟ್ ಬ್ಯಾಂಕಿಂಗ್ನೊಂದಿಗೆ ಇ-ವೆರಿಫೈ ಮಾಡಿ.
16.ಐಟಿಆರ್ ಸ್ವೀಕೃತಿಯನ್ನು ಡೌನ್ಲೋಡ್ ಮಾಡಿ ನೀವು ಐಟಿಆರ್ ಸಲ್ಲಿಸಿದ್ದೀರಿ ಎಂಬುದಕ್ಕೆ ಇದು ಪುರಾವೆ.
ಹಳೆಯ ಮತ್ತು ಹೊಸ ತೆರಿಗೆ ರಿಟರ್ನ್ ಆನ್ಲೈನ್ ಪಾವತಿ ವಿಧಾನ ಒಂದೇ ರೀತಿ ಇರುತ್ತದೆ. ಐಟಿಆರ್ ಫಾರ್ಮ್ ಭರ್ತಿ ಮಾಡುವಾಗ, ನಿಮಗೆ ಒಂದು ಆಯ್ಕೆ ಸಿಗುತ್ತದೆ. ಹೊಸ ತೆರಿಗೆ ಪದ್ಧತಿ ಅಥವಾ ಹಳೆಯ ತೆರಿಗೆ ಪದ್ಧತಿ. ಇಲ್ಲಿ ನೀವು ನಿಮ್ಮ ಆಯ್ಕೆಯನ್ನು ಮಾಡಬೇಕು. ನೀವು ಹಳೆಯ ಪದ್ಧತಿಯನ್ನು ಆರಿಸಿದರೆ, ನೀವು HRA, 80C, 80D, ಗೃಹ ಸಾಲ ಬಡ್ಡಿ ಇತ್ಯಾದಿ ವಿನಾಯಿತಿಗಳನ್ನು ಭರ್ತಿ ಮಾಡುವ ಆಯ್ಕೆಯನ್ನು ಪಡೆಯುತ್ತೀರಿ. ನೀವು ಹೊಸ ಪದ್ಧತಿಯನ್ನು ಆರಿಸಿದರೆ, ಈ ಕಡಿತಗಳಲ್ಲಿ ಹೆಚ್ಚಿನವು ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳ್ಳುತ್ತವೆ. ಲಾಗಿನ್, ಫಾರ್ಮ್ ಅನ್ನು ಭರ್ತಿ ಮಾಡುವುದು, ಆದಾಯ ವಿವರಗಳನ್ನು ನಮೂದಿಸುವುದು, ಪರಿಶೀಲನೆ ಈ ಎಲ್ಲಾ ಹಂತಗಳು ಎರಡೂ ಪದ್ಧತಿಗಳಲ್ಲಿ ಒಂದೇ ಆಗಿರುತ್ತವೆ. ನೀವು ಐಟಿಆರ್ ಅನ್ನು ಆಫ್ಲೈನ್ನಲ್ಲಿ ಫೈಲ್ ಮಾಡಬಹುದು.
