ಆರು ಜಿಲ್ಲೆಗಳಲ್ಲಿ ಸುಮಾರು 20 ಮೆಟ್ರಿಕ್ ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಈ ಚಿನ್ನದ ನಿಕ್ಷೇಪಗಳು ಒಡಿಶಾ ಮತ್ತು ಭಾರತದ ಆರ್ಥಿಕತೆಗೆ ಹೊಸ ಚೈತನ್ಯ ತುಂಬಲಿವೆ ಎಂದು ನಿರೀಕ್ಷಿಸಲಾಗಿದೆ.
ನವದೆಹಲಿ: ಚಿನ್ನದ ಬೆಲೆ (Gold Price in India)ಗಗನಕ್ಕೇರುತ್ತಿರುವ ಸಂದರ್ಭದಲ್ಲಿಯೇ ಭಾರತಕ್ಕೆ (India) ಗುಡ್‌ನ್ಯೂಸ್ ಸಿಕ್ಕಿದೆ. ರಾಜ್ಯವೊಂದರ 6 ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪವಿರೋದನ್ನು ಭಾರತದ ಭೌಗೋಳಿಕ ಸಮೀಕ್ಷೆಗೆ ಖಚಿತಪಡಿಸಿದೆ ಎಂದು ವರದಿಯಾಗಿದೆ. ಹೌದು, ಒಡಿಶಾದಲ್ಲಿ (Odisha) 6 ಚಿನ್ನದ ಖಜಾನೆ ದೊರೆತಿರುವ ವಿಷಯವನ್ನು ವಿಜ್ಞಾನಿಗಳು (Geological Survey of India) ಖುಷಿಯಿಂದ ಹಂಚಿಕೊಂಡಿದ್ದಾರೆ. ಈ ಆರು ಸ್ಥಳಗಳಲ್ಲಿ ಸುಮಾರು 20 ಮೆಟ್ರಿಕ್ ಟನ್ ಚಿನ್ನವಿರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಖನಿಜ ಸಂಪತ್ತಿನಿಂದಲೇ ಗುರುತಿಸಿಕೊಂಡಿರುವ ಒಡಿಶಾ ಇದೀಗ ಚಿನ್ನದ ನಿಕ್ಷೇಪಗಳಿಂದಾಗಿ ಸುದ್ದಿಯಾಗುತ್ತಿದೆ.
ಚಿನ್ನ ನಿಕ್ಷೇಪ ಪತ್ತೆಯಾಗಿರುವ 6 ಪ್ರದೇಶಗಳು ಯಾವವು?
ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ (GSI) ತನ್ನ ಇತ್ತೀಚಿನ ರಿಪೋರ್ಟ್‌ನಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿರುವ ಮಾಹಿತಿಯನ್ನು ಉಲ್ಲೇಖಿಸಿದೆ. ಒಡಿಶಾದ ದೇವಗಢ, ಸುಂದರಗಢ, ನವರಂಗಪುರ, ಕಿಯೋಂಜರ್, ಅನುಗುಲ್ ಮತ್ತು ಕೊರಾಪುಟ್ ಎಂಬಲ್ಲಿ ಚಿನ್ನದ ನಿಕ್ಷೇಪವಿರೋ ಸಾಧ್ಯತೆಗಳಿವೆ ಎಂದು ಜಿಎಸ್‌ಐ ಹೇಳಿದೆ. ಇಲ್ಲಿಯ ಚಿನ್ನದ ನಿಕ್ಷೇಪಗಳನ್ನು ಶೀಘ್ರದಲ್ಲಿಯೇ ಹರಾಜು ಮಾಡಲಾಗುವ ಸುಳಿವನ್ನು ಒಡಿಶಾ ಸರ್ಕಾರ ನೀಡಿದೆ.
ಇದು ಹರಾಜು ಆಗ್ತಿರೋ ಮೊದಲ ಚಿನ್ನದ ಬ್ಲಾಕ್!
ಈ ಕುರಿತು ಪ್ರತಿಕ್ರಿಯಿಸಿರುವ ಗಣಿ ಸಚಿವ ವಿಭೂತಿ ಭೂಷಣ್ ಜೆನಾ, ರಾಜ್ಯದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿ ಎರಡಕ್ಕೂ ಹೊಸ ಅವಕಾಶವನ್ನು ಇದು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ. ದೇವಗಢ ಜಿಲ್ಲೆಯ ಆಡ್ಸ್-ರಾಂಪಲ್ಲಿಯ ಕ್ಷೇತ್ರದಲ್ಲಿ ಉತ್ಖನನ ಪ್ರಕ್ರಿಯೆ ಮುಕ್ತಾಯವಾಗಿದೆ. ಒಡಿಶಾ ಮೈನಿಂಗ್ ಕಾರ್ಪೋರೇಷನ್ (OMC) ಮತ್ತು GSI ಜಂಟಿಯಾಗಿ ಹರಾಜು ಮಾಡಲು ಸಿದ್ಧತೆ ಮಾಡಿಕೊಂಡಿದೆ. ಇದು ಹರಾಜು ಆಗ್ತಿರೋ ಮೊದಲ ಚಿನ್ನದ ಬ್ಲಾಕ್ ಆಗಿದೆ. ಈ ಪರಿಸರ ಚಿನ್ನ, ತಾಮ್ರ, ನಿಕಲ್, ಬೆಳ್ಳಿ ಮತ್ತು ಗ್ರ್ಯಾಫೈಟ್ ಜೊತೆ ಅಮೂಲ್ಯ ಖನಿಜಗಳಿಂದ ಸಮೃದ್ಧವಾಗಿದೆ.
ಚಿನ್ನದ ಉತ್ಖನನ ಕಾರ್ಯವನ್ನು ಸಂಪೂರ್ಣವಾಗಿ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ನಡೆಸಲಾಗಿದೆ. ಪರಿಸರ ರಕ್ಷಣೆಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸುಧಾರಿತ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಉತ್ಖನನ ನಡೆಯಲಿದೆ ಎಂದು ಒಡಿಶಾ ಸರ್ಕಾರ ಸ್ಪಷ್ಟಪಡಿಸಿದೆ. ಭೌಗೋಳಿಕ ತಜ್ಞರು, ಚಿನ್ನದ ಗಣಿಗಾರಿಕೆ ಸಂಬಂಧ ಅಲ್ಲಿಯ ಭೂಮಿ ಮತ್ತು ಅಂತರಾಳದ ಮಣ್ಣಿನ ಪದರುಗಳ ಬಗ್ಗೆ ಅಧ್ಯಯನ ನಡೆಸಿದೆ. ಚಿನ್ನದ ಗಣಿಗಾರಿಕೆ ಈ ಎಲ್ಲಾ ಅಂಶಗಳನ್ನು ಒಳಗೊಂಡಿದ್ದು, ಎಲ್ಲರ ಸಹಯೋಗದಿಂದ ಚಿನ್ನದ ಹುಡುಕಾಟ ನಡೆಸಲಾಗುವುದು ಎಂದು ಒಡಿಶಾ ಸರ್ಕಾರ ಹೇಳಿದೆ.
ಇಲ್ಲಿಯ ಮಣ್ಣು ಮತ್ತು ನೀರು ಚಿನ್ನವಿರೋದನ್ನು ಹೇಳುತ್ತಿದೆ. ಕಾಂತೀಯ ಮತ್ತು ಗುರುತ್ವಾಕರ್ಷಣೆಯ ವಿಧಾನದ ಮೂಲಕ ಭೂಮಿಯೊಳಗಿನ ರಚನೆ ಹೇಗಿದೆ ಎಂಬುದನ್ನು ನಿರ್ಣಯಿಸಲಾಗುತ್ತದೆ. ಡ್ರಿಲ್ಲಿಂಗ್ ಮೂಲಕ ಸಹ ಒಳರಚನೆ ಬಗ್ಗೆ ತಿಳಿದುಕೊಳ್ಳಲಾಗುವುದು. ಸ್ಯಾಟ್‌ಲೈಟ್ ಇಮೇಜ್ ಮತ್ತು ಡ್ರೋನ್ ಸಮೀಕ್ಷೆಯು ಖನಿಜಗಳ ಲಭ್ಯತೆಯನ್ನು ದೃಢಪಡಿಸುತ್ತವೆ. ಈ ಎಲ್ಲಾ ಹಂತಗಳ ಬಳಿಕ ಸರ್ಕಾರ ಚಿನ್ನದ ಗಣಿಗಾರಿಕೆಗೆ ಅನುಮತಿ ನೀಡಲಾಗುತ್ತದೆ.
ಈ ಚಿನ್ನದ ನಿಕ್ಷೇಪಗಳಿಂದ ಏನೆಲ್ಲಾ ಲಾಭ?
ಈ ಚಿನ್ನದ ಗಣಿಗಾರಿಕೆ ಆರಂಭದ ಬಳಿಕ ಒಡಿಶಾದ ಆರ್ಥಿಕ ವ್ಯವಸ್ಥೆ ಸದೃಢಗೊಳ್ಳಲಿದೆ. ಇದರಿಂದ ಅನೇಕ ಉದ್ಯೋಗಗಳು ಸೃಷ್ಟಿಯಾಗಲಿವೆ. ಹರಾಜು, ಹೊಸ ವ್ಯವಹಾರ, ಉದ್ಯೋಗಗಳಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ಹಣ ಹರಿದು ಬರಲಿದೆ. ಇದರ ಜೊತೆಯಲ್ಲಿ ಭಾರತದ ಚಿನ್ನ ಬೇಡಿಕೆಯನ್ನು ಪೂರೈಸಲು ಈ ಗಣಿಗಾರಿಕೆ ನೆರವು ಆಗಲಿದೆ ಎಂದು ನಂಬಲಾಗಿದೆ.
